
ನವದೆಹಲಿ (ನ.11): ಭಾರತದ ರಾಜಧಾನಿ ನವದೆಹಲಿಯ ಹೃದಯಭಾಗದಲ್ಲಿ ಸ್ಫೋಟ ನಡೆದು 9 ಮಂದು ಸಾವು ಕಂಡ ಒಂದು ದಿನದ ಬಳಿಕ ಮಂಗಳವಾರ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕಾರೊಂದು ಜಖಂಗೊಂಡಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ವಕೀಲರು ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ. ನಿಲ್ಲಿಸಿದ್ದ ವಾಹನದೊಳಗೆ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.
ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯದ ಪ್ರವೇಶದ್ವಾರದ ಬಳಿ ಕೆಲಸದ ವೇಳೆಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಸಂಭವಿಸಿದ ಸ್ಫೋಟವು ನ್ಯಾಯಾಲಯದ ಆವರಣದಲ್ಲಿದ್ದ ವಕೀಲರಲ್ಲಿ ಭೀತಿಯನ್ನುಂಟುಮಾಡಿತು. ಸ್ಫೋಟದ ಶಬ್ದ ಎಷ್ಟು ತೀವ್ರವಾಗಿತ್ತು ಎಂದರೆ ಆರು ಕಿಲೋಮೀಟರ್ ದೂರಕ್ಕೂ ಕೇಳಿಸುತ್ತಿತ್ತು.
ಸ್ಫೋಟದಲ್ಲಿ ಹತ್ತಿರದಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳು ಹಾನಿಗೊಳಗಾದವು. ಗಾಯಗೊಂಡವರಲ್ಲಿ ಹೆಚ್ಚಿನವರು ವಕೀಲರು ಮತ್ತು ನ್ಯಾಯಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ. ಪೊಲೀಸರು ಇದು ಆತ್ಮಹತ್ಯಾ ದಾಳಿ ಎಂದು ಶಂಕಿಸಿದ್ದಾರೆ.
ದಕ್ಷಿಣ ವಜಿರಿಸ್ತಾನದ ಕೆಡೆಟ್ ಕಾಲೇಜು ವಾನಾದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದ ದಾಳಿಯನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ವಿಫಲಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಹಲವಾರು ವರ್ಷಗಳಿಂದ, ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಒಡ್ಡಿರುವ ಬೆದರಿಕೆಯನ್ನು ಪಾಕಿಸ್ತಾನ ಎದುರಿಸುತ್ತಿದೆ. ತಾಲಿಬಾನ್ ಕಾಬೂಲ್‌ಗೆ ಮರಳಿದಾಗಿನಿಂದ ಪಾಕಿಸ್ತಾನದಲ್ಲಿ ಟಿಟಿಪಿಯ ಚಟುವಟಿಕೆಗಳು ಹೆಚ್ಚಿವೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧಗಳು ಹದಗೆಡುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ, ಅಫ್ಗಾನಿಸ್ತಾನ ಟಿಟಿಪಿ ನಾಯಕರಿಗೆ ಆಶ್ರಯ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ.
ದೆಹಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರು ಸ್ಫೋಟಗೊಂಡು 9 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಇಸ್ಲಾಮಾಬಾದ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಒಳಗೊಂಡ ಭಯೋತ್ಪಾದಕ ಸಂಘಟನೆಯನ್ನು ಭೇದಿಸಿ, ಪೊಲೀಸರು 2,900 ಕಿಲೋಗ್ರಾಂಗಳಷ್ಟು ಐಇಡಿ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡ ದಿನದಂದೇ ಈ ಸ್ಫೋಟ ಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ