
ಅಮೆರಿಕಾದ ಉನ್ನತ ವ್ಯಾಸಂಗಕ್ಕೆಂದು ತೆರಳಿದ ಭಾರತದ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಆಂಧ್ರಪ್ರದೇಶ ಮೂಲದ ರಾಜ್ಯಲಕ್ಷ್ಮಿ ಯರ್ಲಗಡ್ಡ ಸಾವನ್ನಪ್ಪಿದ ವಿದ್ಯಾರ್ಥಿನಿ. ನವೆಂಬರ್ 7 ರಂದು ಈಕೆ ಸಾವನ್ನಪ್ಪಿದ್ದು ಈಕೆಯ ಶವವನ್ನು ಈಗ ಭಾರತಕ್ಕೆ ತರುವುದಕ್ಕೆ ಕುಟುಂಬದವರು ಕೇಂದ್ರ ವಿದೇಶಾಂಗ ಇಲಾಖೆಯ ನೆರವು ಕೋರಿದ್ದಾರೆ. ಕೃಷಿ ಕುಟುಂಬದಿಂದ ಬಂದ ರಾಜ್ಯಲಕ್ಷ್ಮಿ ಯರ್ಲಗುಡ್ಡ ಅಮೆರಿಕಾದಲ್ಲಿ ನಿದ್ರೆಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ಇತ್ತಿಚೆಗಷ್ಟೇ ಪದವಿ ಮುಗಿಸಿದ ಅವರು ಮರಳಿ ದೇಶಕ್ಕೆ ಬಂದು ತಮ್ಮ ಕೃಷಿ ಕುಟುಂಬಕ್ಕೆ ನೆರವು ನೀಡುವ ಕನಸು ಕಾಣುತ್ತಿದ್ದರು. ಆದರೆ ಅಷ್ಟರಲ್ಲೇ ಈ ದುರಂತ ಸಂಭವಿಸಿದ್ದು, ಈ ರಾಜ್ಯಲಕ್ಷ್ಮಿ ಅವರ ಸಾವು ಅವರ ಕುಟುಂಬದವರು ಹಾಗೂ ಸ್ನೇಹಿತರಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ.
ರಾಜ್ಯಲಕ್ಷ್ಮಿ ಟೆಕ್ಸಾಸ್ ಎ & ಎಂ ವಿಶ್ವವಿದ್ಯಾಲಯ ಕಾರ್ಪಸ್ ಕ್ರಿಸ್ಟಿಯಿಂದ ಇತ್ತೀಚೆಗೆ ಪದವೀಧರೆಯಾಗಿದ್ದು, ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅಲ್ಲೇ ಉದ್ಯೋಗವನ್ನು ಹುಡುಕುತ್ತಿದ್ದರು. ಆಕೆಯ ಸಾವಿಗೂ ಮೂರು ದಿನಕ್ಕೆ ಮೊದಲು ಆಕೆ ತೀವ್ರವಾದ ಕಫ ಹಾಗೂ ಎದೆನೋವಿನಿಂದ ಬಳಲುತ್ತಿದ್ದರು ಆದರೆ ನವಂಬರ್ 7 ರಂದು ಅವರು ಹಠಾತ್ ಆಗಿ ಸಾವನ್ನಪ್ಪಿದ್ದಾರೆ. ಆಕೆ ಇಟ್ಟಿದ್ದ ಅಲಾರಾಂ ಅದಾಗೇ ಆಫ್ ಆದರೂ ಆಕೆ ಮಾತ್ರ ಮೇಲೆದಿಲ್ಲ. ನಂತರ ಆಕೆಯ ಸ್ನೇಹಿತರು ಬಂದು ನೋಡಿದಾಗ ಆಕೆ ನಿದ್ದೆಯಲ್ಲಿಯೇ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ರಾಜ್ಯಲಕ್ಷ್ಮಿ ಆಂಧ್ರಪ್ರದೇಶದ ಬಾಪಟ್ಲಾದ ಕರ್ಮೆಚೇಡು ಎಂಬಲ್ಲಿನ ನಿವಾಸಿಯಾಗಿದ್ದಾರೆ. ಈ ಊರಿನಲ್ಲಿ ಸಣ್ಣ ಕೃಷಿಭೂಮಿಯನ್ನೇ ಅವಲಂಬಿಸಿರುವ ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಕನಸಿನೊಂದಿಗೆ ರಾಜಿ ಅಮೆರಿಕಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ರಾಜ್ಯಲಕ್ಷ್ಮಿ ಅವರ ಹಠಾತ್ ಸಾವನಿಂದಾಗಿ ಅವರ ಕುಟುಂಬ ಆಘಾತಕ್ಕೀಡಾಗಿದೆ. ಆಕೆಯ ಕುಟುಂಬಕ್ಕೆ ನೆರವು ನೀಡುವುದಕ್ಕೆ ಚೈತನ್ಯ ಎಂಬುವವರು ಗೋಫಂಡ್ ಅಭಿಯಾನ ನಡೆಸಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿ ಆಕೆ ಭರವಸೆಯನ್ನು ಹೊಂದಿದ್ದ ಆತ್ಮವಾಗಿದ್ದಳು. ತನ್ನ ಹೆತ್ತವರು ತಮ್ಮ ಕೃಷಿ ಪ್ರಯಾಣವನ್ನು ಮುಂದುವರಿಸಲು ಸಹಾಯ ಮಾಡುವ ಕನಸು ಕಂಡಿದ್ದಳು ಎಂದು ಚೈತನ್ಯ ಬರೆದಿದ್ದಾರೆ.
ಕೃಷಿ ಹಾಗೂ ಜಾನುವಾರುಗಳೇ ಆ ಕುಟುಂಬದ ಪ್ರಾಥಮಿಕ ಜೀವನೋಪಾಯವಾಗಿದ್ದು,ಆ ಕುಟುಂಬದ ರಾಜಿ ಉದ್ಯೋಗ ಆರಂಭಿಸಿದ ನಂತರ ತನ್ನ ಹೆತ್ತವರನ್ನು ಆರ್ಥಿಕವಾಗಿ ಬೆಂಬಲಿಸುವುದು ಅವಳ ಮಹತ್ವಾಕಾಂಕ್ಷೆಯಾಗಿತ್ತು. ಅವರ ಹಠಾತ್ ಮರಣವು ಕುಟುಂಬವನ್ನು ದುಃಖಿತರನ್ನಾಗಿ ಮಾಡಿದಲ್ಲದೇ ಅವರಿಗೆ ತೀವ್ರ ಆರ್ಥಿಕ ಸಂಕಷ್ಟವನ್ನೂ ಉಂಟು ಮಾಡಿದೆ. ಈಗ ಗೋಫಂಡ್ ಮೂಲಕ ಸಂಗ್ರಹಿಸುತ್ತಿರುವ ನಿಧಿಯೂ ಆಕೆಯ ಮೃತದೇಹವನ್ನು ಮರಳಿ ಭಾರತಕ್ಕೆ ತರುವುದಕ್ಕೆ ಹಾಗೂ ಆಕೆಯ ಶೈಕ್ಷಣಿಕ ಸಾಲವನ್ನು ಮುಗಿಸುವುದಕ್ಕೆ ಹಾಗೂ ಆಕೆಯ ಪೋಷಕರಿಗೆ ಸ್ವಲ್ಪ ಆರ್ಥಿಕ ಸಹಾಯ ಮಾಡುವುದಕ್ಕಾಗಿದೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್‌ಗೆ ಮುಂದಾದ ಸರ್ಕಾರ
ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ: ಕಲಿನರಿ ಅಕಾಡೆಮಿ ಆಫ್ ಇಂಡಿಯಾದ ಆರು ವಿದ್ಯಾರ್ಥಿಗಳ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ