ಪಿಒಕೆಗೆ ರೋಗಿಗಳ ಸುರಿಯುತ್ತಿದೆ ಪಾಕ್! | ಪಂಜಾಬ್ ಪ್ರಾಂತ್ಯ ಸೇರಿ ವಿವಿಧೆಡೆಯ ಕೊರೋನಾಬಾಧಿತರನ್ನು ಸ್ಥಳಾಂತರಿಸುತ್ತಿದೆ ಪಾಪಿಸ್ತಾನ| ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊರೋನಾಪೀಡಿತರಿಗೆ ಕ್ವಾರಂಟೈನ್ | ಸ್ಥಳೀಯರಿಂದ ತೀವ್ರ ವಿರೋಧ
ಮುಜಫರಾಬಾದ್(ಜೂ.14):: ಕೊರೋನಾ ವೈರಸ್ ನಿಯಂತ್ರಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ‘ಪಾಕ್ ಆಕ್ರಮಿತ ಕಾಶ್ಮೀರ’ (ಪಿಒಕೆ)ವನ್ನು ಕೊರೋನಾ ರೋಗಿಗಳ ಡಂಪಿಂಗ್ ಯಾರ್ಡ್ ಮಾಡಿಕೊಂಡಿರುವ ಸಂಗತಿ ಬಯಲಾಗಿದೆ. ಪಾಕಿಸ್ತಾನದ ಈ ನಡೆ ವಿರುದ್ಧ ಪಿಒಕೆಯಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಜಮ್ಮು- ಕಾಶ್ಮೀರದ ಒಂದು ಭಾಗವಾಗಿರುವ, ಆದರೆ ತಾನು ಅತಿಕ್ರಮಿಸಿಕೊಂಡಿರುವ ಪಿಒಕೆಯಲ್ಲಿ ಈವರೆಗೂ ಪಾಕಿಸ್ತಾನ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಿಲ್ಲ. ಆದರೆ ತನ್ನ ಅತ್ಯಂತ ಜನನಿಬಿಡ ಹಾಗೂ ತುಸು ಸಂಪದ್ಭರಿತ ಪ್ರದೇಶವಾಗಿರುವ ಪಂಜಾಬ್ ಅನ್ನು ಕೊರೋನಾದಿಂದ ಮುಕ್ತವಾಗಿಟ್ಟುಕೊಳ್ಳಲು ಅಲ್ಲಿನ ರೋಗಿಗಳನ್ನು ಪಿಒಕೆಗೆ ಸ್ಥಳಾಂತರಿಸುತ್ತಿದೆ. ದೇಶದ ಇತರೆ ಭಾಗಗಳಲ್ಲಿರುವ ರೋಗಿಗಳನ್ನೂ ಇಲ್ಲಿಗೇ ಸಾಗಿಸುತ್ತಿದೆ ಎಂದು ಹೇಳಲಾಗಿದೆ.
ಪಿಒಕೆಯಲ್ಲಿ ಮೊದಲೇ ಆರೋಗ್ಯ ಕೇಂದ್ರಗಳು ಕಡಿಮೆ. ಆದರೂ ಅಲ್ಲಿನ ಆಸ್ಪತ್ರೆಗಳಿಗೆ ವೆಂಟಿಲೇಟರ್ ಹಾಗೂ ವೈದ್ಯ ಸಿಬ್ಬಂದಿಗೆ ಪಿಪಿಇ ಕಿಟ್ ಕೂಡ ಕೊಡದೆ ಸತಾಯಿಸುತ್ತಿದೆ. ಜತೆಗೆ ಪಿಒಕೆಯಲ್ಲಿ ಪಾಕಿಸ್ತಾನದ ವಿವಿಧೆಡೆಯ ಜನರಿಗಾಗಿ ಹಲವು ಕ್ವಾರಂಟೈನ್ ಕೇಂದ್ರಗಳನ್ನು ತೆರೆದಿದೆ. ಮೊದಲೇ ವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಿರುವ ಪಿಒಕೆಗೆ ಕೊರೋನಾ ರೋಗಿಗಳು ಹಾಗೂ ಕ್ವಾರಂಟೈನ್‌ನಲ್ಲಿಡಬೇಕಾದ ವ್ಯಕ್ತಿಗಳನ್ನು ಕರೆತರುತ್ತಿರುವುದರಿಂದ ಜನರು ರೊಚ್ಚಿಗೆದ್ದಿದ್ದಾರೆ. ಪಾಕಿಸ್ತಾನದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯವಿರುವಷ್ಟುವೈದ್ಯಕೀಯ ಸಿಬ್ಬಂದಿಯೂ ಅಲ್ಲ. ಆಸ್ಪತ್ರೆಗಳೂ ಇಲ್ಲ. ಸದ್ಯ ಆ ದೇಶದಲ್ಲಿ 1.25 ಲಕ್ಷ ಮಂದಿ ಸೋಂಕಿತರು ಇದ್ದಾರೆ. 2463 ಮಂದಿ ಮೃತಪಟ್ಟಿದ್ದಾರೆ.
ಆಗಿರುವುದೇನು?
- ಪಂಜಾಬ್ ಸೇರಿದಂತೆ ಪಾಕಿಸ್ತಾನದ ವಿವಿಧೆಡೆ ಕೊರೋನಾ ಪ್ರಕರಣ ತೀವ್ರ ಹೆಚ್ಚಳ
- ಆಕ್ರಮಿತ ಕಾಶ್ಮೀರದಲ್ಲಿ 2 ತಿಂಗಳಿಂದ ಸೋಂಕಿತರ ಕ್ವಾರಂಟೈನ್ ಮಾಡುತ್ತಿರುವ ಪಾಕ್
- ಕಳೆದ ತಿಂಗಳು ಭೇಟಿ ನೀಡಿ ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದ ಕ್ರಿಕೆಟಿಗ ಅಫ್ರಿದಿಗೆ ಸೋಂಕು
- ಆರೋಗ್ಯ ವ್ಯವಸ್ಥೆಯೇ ಸರಿಯಾಗಿಲ್ಲದ ತಮ್ಮಲ್ಲಿಗೆ ರೋಗಿಗಳ ರವಾನೆಗೆ ಸ್ಥಳೀಯರ ತೀವ್ರ ವಿರೋಧ
ಹೀಗೇಕೆ?
ಪಂಜಾಬ್ ಪ್ರಾಂತ್ಯ ತುಸು ಸಂಪದ್ಭರಿತ ಹಾಗೂ ಜನನಿಬಿಡ. ಹೀಗಾಗಿ ಆ ಪ್ರದೇಶವನ್ನು ಕೊರೋನಾದಿಂದ ಮುಕ್ತವಾಗಿಟ್ಟುಕೊಳ್ಳಲು ಅಲ್ಲಿನ ರೋಗಿಗಳನ್ನು ಪಿಒಕೆಗೆ ಸ್ಥಳಾಂತರಿಸುತ್ತಿದೆ. ಜೊತೆಗೆ ದೇಶದ ಇತರೆ ಭಾಗಗಳಲ್ಲಿರುವ ರೋಗಿಗಳನ್ನೂ ಇಲ್ಲಿಗೇ ಸಾಗಿಸುತ್ತಿದೆ.