ಬೀಜಿಂಗ್‌ನಲ್ಲಿ 3 ದಿನದಲ್ಲಿ 46 ಸೋಂಕು: ಮಾರುಕಟ್ಟೆ, ವಸತಿ ಪ್ರದೇಶ ಬಂದ್| ಕೊರೋನಾದ 2ನೇ ದಾಳಿಗೆ ಸಿಲುಕಿದ ಭೀತಿಯಲ್ಲಿ ಚೀನಾ
ಬೀಜಿಂಗ್(ಜೂ.14): ಇಡೀ ವಿಶ್ವಕ್ಕೆ ಮಹಾಮಾರಿ ಸೋಂಕ ಕೊರೋನಾವನ್ನು ಹಬ್ಬಿಸಿ ತನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ನೆಮ್ಮದಿಯಾಗಿದ್ದ ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ ಶುರುವಾಗಿದೆ. ರಾಜಧಾನಿ ಬೀಜಿಂಗ್ ಸೇರಿದಂತೆ ಚೀನಾದಲ್ಲಿ 3 ದಿನಗಳಲ್ಲಿ 46 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಎರಡು ತಿಂಗಳಿನಿಂದ ಒಂದೇ ಒಂದು ಪ್ರಕರಣಗಳಿಲ್ಲದೆ ನೆಮ್ಮದಿಯಾಗಿದ್ದ ಚೀನಾದಲ್ಲಿ ಕೊರೋನಾ 2ನೇ ಬಾರಿಗೆ ದಾಳಿಯಿಟ್ಟ ಮುನ್ಸೂಚನೆಯಿದು ಎಂದೇ ಭಾವಿಸಲಾಗುತ್ತಿದೆ.
ಹೀಗಾಗಿ ಸೋಂಕು ವ್ಯಾಪಕವಾಗಿ ಹಬ್ಬದಂತೆ ತಡೆಯಲು ಬೀಜಿಂಗ್‌ನಲ್ಲಿ ಅತಿ ದೊಡ್ಡ ಸಗಟು ಮಾರುಕಟ್ಟೆಸೇರಿದಂತೆ ಹಲವು ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ ಸೋಂಕು ಪತ್ತೆಯಾದ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ, ಜನರು ಕೊರೋನಾದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು, ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಬೇಕು ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ, ಕೊರೋನಾಕ್ಕೆ ಈವರೆಗೂ ಪರಿಹಾರ ಕಂಡುಕೊಂಡಿಲ್ಲವಾದ್ದರಿಂದ ಇದು ಆಗ್ಗಾಗ್ಗೆ ದಾಳಿಯಿಡುವುದು ಸಾಮಾನ್ಯ. ಆದರೆ, ಬೀಜಿಂಗ್‌ನಲ್ಲಿರುವ 2 ಕೋಟಿ ಮಂದಿ ಈ ಬಗ್ಗೆ ಹೆಚ್ಚು ಜಾಗೃತವಾಗಿರುವ ಕಾರಣ ಕೊರೋನಾ ಆಟ ನಡೆಯಲ್ಲ ಎಂದು ಚೀನಾ ವೈದ್ಯಕೀಯ ತಜ್ಞರು ಪ್ರತಿಪಾದಿಸಿದ್ದಾಗಿ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.