ಭಾರತದ ಭೂಮಿ ಗುಳುಂ: ಮಸೂದೆ ಪಾಸ್‌, ನಕ್ಷೆಗೆ ನೇಪಾಳ ಅಸ್ತು!

By Kannadaprabha NewsFirst Published Jun 14, 2020, 7:50 AM IST
Highlights

ನೇಪಾಳ ಭಂಡತನ: ಭಾರತದ ಭೂಮಿ ಸೇರಿಸಿದ ನಕ್ಷೆಗೆ ಅಸ್ತು| ಲಿಪುಲೇಖ್‌, ಕಾಲಾಪಾನಿ ಸೇರಿ 3 ಸ್ಥಳ ಸೇರ್ಪಡೆ| ಸಂಸತ್ತಲ್ಲಿ ಮಸೂದೆ ಪಾಸ್‌| ಚೀನಾ ಕುಮ್ಮಕ್ಕು?

ಕಾಠ್ಮಂಡು(ಜೂ.14): ಭಾರತದ ತೀವ್ರ ವಿರೋಧವನ್ನೂ ಲೆಕ್ಕಿಸದೆ, ಭಾರತದ ಮೂರು ಭೂಭಾಗಗಳನ್ನು ಸೇರ್ಪಡೆ ಮಾಡಿಕೊಂಡು ತನ್ನ ರಾಜಕೀಯ ಭೂಪಟವನ್ನು ಪರಿಷ್ಕರಿಸುವ ಮಸೂದೆ ಅಂಗೀಕರಿಸುವ ಮೂಲಕ ನೇಪಾಳ ಮೊಂಡುತನ ಮೆರೆದಿದೆ. ಚೀನಾದ ಕುಮ್ಮಕ್ಕಿನಿಂದ ನೇಪಾಳ ತೆಗೆದುಕೊಂಡಿದೆ ಎನ್ನಲಾದ ಈ ಕ್ರಮ, ಉಭಯ ದೇಶಗಳ ನಡುವಣ ಸುದೀರ್ಘ ಸಂಬಂಧಕ್ಕೆ ಕಂಟಕಪ್ರಾಯವಾಗಿದೆ.

ಚೀನಾ ಬೆನ್ನಲ್ಲೇ ಭಾರತಕ್ಕೆ ನೇಪಾಳ ಸಮಸ್ಯೆ; ಗಡಿ ಪೊಲೀಸರಿಂದ ಓರ್ವ ಭಾರತೀಯನ ಹತ್ಯೆ!

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಐತಿಹಾಸಿಕ ದಾಖಲೆಗಳು ಅಥವಾ ಸಾಕ್ಷಿಗಳ ಆಧಾರವಿಲ್ಲದೇ ಕೃತಕವಾಗಿ ಮಾಡಲ್ಪಟ್ಟಇಂಥ ಭೂಭಾಗ ವಿಸ್ತರಣೆಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಅಲ್ಲದೆ ಈ ಬೆಳವಣಿಗೆ, ಪ್ರಸಕ್ತ ಗಡಿವಿವಾದ ಬಗೆ ಹರಿಸುವ ಕುರಿತು ಉಭಯ ದೇಶಗಳು ಪ್ರಸಕ್ತ ಹೊಂದಿರುವ ತಿಳುವಳಿಕೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಭಾರತಕ್ಕೆ ಸೇರಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಲಿಪುಲೇಖ್‌, ಕಾಲಾಪಾನಿ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ಸೇರಿಸಿಕೊಂಡು ರಾಜಕೀಯ ಭೂಪಟ ಪರಿಷ್ಕರಣೆ ಮಾಡುವ ಸಂಬಂಧ ನೇಪಾಳ ಸಂಸತ್ತಿನ ಕೆಳಮನೆಯಲ್ಲಿ ಶನಿವಾರ ಸಂವಿಧಾನಿಕ ತಿದ್ದುಪಡಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಇದು ನೇಪಾಳ ಸಂಸತ್ತಿನ ಮೇಲ್ಮನೆಗೆ ಹೋಗಲಿದ್ದು, ಅಲ್ಲಿ ಅಂಗೀಕಾರವಾದರೆ ಸಂವಿಧಾನದಲ್ಲಿ ತಿದ್ದುಪಡಿಯಾಗಲಿದೆ. ನೇಪಾಳದ ಲಾಂಛನದಲ್ಲೂ ಹೊಸ ನಕ್ಷೆ ಕಾಣಲಿದೆ.

275 ಸದಸ್ಯ ಬಲದ ನೇಪಾಳ ಕೆಳಮನೆಯಲ್ಲಿ 258 ಸದಸ್ಯರು ಶನಿವಾರ ಕಲಾಪಕ್ಕೆ ಹಾಜರಾಗಿದ್ದರು. ಸಂವಿಧಾನ ತಿದ್ದುಪಡಿ ಮಸೂದೆ ಇದಾಗಿದ್ದರಿಂದ ಮೂರನೇ ಎರಡರಷ್ಟುಬಹುಮತ ಕಡ್ಡಾಯವಾಗಿತ್ತು. ಆದರೆ ಕಲಾಪದಲ್ಲಿ ಹಾಜರಿದ್ದ ಎಲ್ಲ 258 ಸಂಸದರೂ ವಿಧೇಯಕ ಪರವಾಗಿ ಮತ ಚಲಾಯಿಸಿ ಒಗ್ಗಟ್ಟು ತೋರಿಸಿದರು.

ಭಾರತದ ಭೂಭಾಗ ಸೇರಿಸಿದ್ದ ನೇಪಾಳ ಹೊಸ ನಕ್ಷೆಗೆ ಬ್ರೇಕ್‌!

ರಕ್ಷಣಾ ದೃಷ್ಟಿಯಿಂದ ಮಹತ್ವದ್ದಾಗಿರುವ, ಲಿಪುಲೇಖ್‌ಗೆ ಸಂಪರ್ಕ ಬೆಸೆಯುವ 80 ಕಿ.ಮೀ. ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮೇ 8ರಂದು ಉದ್ಘಾಟಿಸಿದ್ದರು. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯ ಯಾತ್ರಾರ್ಥಿಗಳಿಗೂ ಈ ರಸ್ತೆ ಸಹಕಾರಿಯಾಗಿತ್ತು. ಆನಂತರ ನೇಪಾಳದ ನಡವಳಿಕೆ ಬದಲಾಗಿತ್ತು. ತನ್ನ ಭೂಭಾಗದಲ್ಲಿ ಈ ರಸ್ತೆ ಹಾದು ಹೋಗುತ್ತದೆ ಎಂದು ಕ್ಯಾತೆ ತೆಗೆದಿತ್ತು. ಇದನ್ನು ಭಾರತ ಅಲ್ಲಗಳೆದಿತ್ತು.

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಭಾರತದ ರಸ್ತೆ ಯೋಜನೆಗೆ ತಗಾದೆ ತೆಗೆದಿರುವ ಚೀನಾ, ಲಿಪುಲೇಖ್‌ ಹೆದ್ದಾರಿ ವಿಷಯದಲ್ಲಿ ನೇಪಾಳಕ್ಕೂ ಕುಮ್ಮಕ್ಕು ನೀಡಿದೆ ಎಂದು ಹೇಳಲಾಗಿದೆ.

click me!