ಉಗ್ರರ ಕೋಣೆಯಲ್ಲಿ ಇಮ್ರಾನ್‌ ಜೈಲುವಾಸ, ಹುಳ ಹುಪ್ಪಟೆಗಳಿರುವ ಕತ್ತಲ ಕೋಣೇಲಿ ಬಂಧಿ!

By Kannadaprabha NewsFirst Published Aug 9, 2023, 9:08 AM IST
Highlights

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರನ್ನು 9*11 ಅಡಿ ಕೋಣೆಯಲ್ಲಿ ಇರಿಸಲಾಗಿದೆ. ಅದರಲ್ಲಿ ಹುಳ ಹುಪ್ಪಟೆಗಳಿವೆ, ಶೌಚಾಲಯ ಗಬ್ಬು ನಾರುತ್ತಿದೆ. 

ಇಸ್ಲಾಮಾಬಾದ್‌ (ಆ.9): ಪ್ರಧಾನಿಗೆ ನೀಡಿದ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಉಗ್ರರಿಗೆ ಮೀಸಲಿಡಲಾದ ಜೈಲು ಕೋಣೆಯಲ್ಲಿ ಇಡಲಾಗಿದೆ ಎಂದು ‘ದ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷ’ (ಪಿಟಿಐ) ಆರೋಪಿಸಿದೆ. ಹೀಗಾಗಿ ಕೂಡಲೇ ಅವರನ್ನು ಉನ್ನತ ಸೌಕರ್ಯವಿರುವ ಜೈಲು ಕೋಣೆಗೆ ವರ್ಗಾಯಿಸಬೇಕೆಂದು ನ್ಯಾಯಾಲಯಕ್ಕೆ ಪಕ್ಷ ಮನವಿ ಮಾಡಿದೆ.

ಈ ಕುರಿತು ಇಸ್ಲಾಮಾಬಾದ್‌ ಹೈಕೋರ್ಚ್‌ಗೆ ಅರ್ಜಿಯೊಂದನ್ನು ಸಲ್ಲಿಸಿರುವ ಇಮ್ರಾನ್‌ನ ಪಿಟಿಐ ಪಕ್ಷದ ನಾಯಕರು, ‘ಮಾಜಿ ಪ್ರಧಾನಿಯೂ ಆಗಿರುವ ಇಮ್ರಾನ್‌ ಅವರಿಗೆ ಜೈಲಿನಲ್ಲಿ ‘ಬಿ’ ದರ್ಜೆಯ ಕೋಣೆ ನೀಡಲಾಗಿದೆ. 9*11 ಅಡಿ ಅಗಲದ ಕೋಣೆ ಕಳಪೆ ದರ್ಜೆಯ ಸೌಕರ್ಯ ಹೊಂದಿದೆ. ಶೌಚಾಲಯ ಶುಚಿತ್ವವಿಲ್ಲದೇ ನಾರುತ್ತಿದೆ. ಹುಳ-ಹುಪ್ಟಟೆಗಳು ಇರುವ ಇಂಥ ಕತ್ತಲೆ ಕೋಣೆಯನ್ನು ಸಾಮಾನ್ಯವಾಗಿ ಉಗ್ರರಿಗೆ ಮೀಸಲಿರಿಸಲಾಗಿರುತ್ತದೆ. ಜೈಲು ಅಧಿಕಾರಿಗಳು ಮಾಜಿ ಪ್ರಧಾನಿಯನ್ನು ಕ್ರಿಮಿನಲ್‌ಗಳ ರೀತಿಯಲ್ಲಿ ಪರಿಗಣಿಸಿದ್ದು ಅತ್ಯಂತ ಇಕ್ಕಟ್ಟಾದ ಬರಾಕ್‌ನಲ್ಲಿ ಇಟ್ಟಿದ್ದಾರೆ. ಹೀಗಾಗಿ ಕೂಡಲೇ ಅವರಿಗೆ ಉನ್ನತ ದರ್ಜೆಯ ಕೋಣೆ ನೀಡಬೇಕು’ ಎಂದು ಕೋರಿದ್ದಾರೆ.

ಪಿಟಿಐ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಇಮ್ರಾನ್‌ಗೆ ಕೊಕ್‌, ರಾಜಕೀಯ ಜೀವನಕ್ಕೆ ದೊಡ್ಡ ಆಘಾತ, ಜೈಲಲ್ಲಿ ಸಿ ದರ್ಜೆ ಕೈದಿ!

ಮಾಜಿ ಪ್ರಧಾನಿಯ ಘನತೆಗೆ ತಕ್ಕಂತೆ ದಿನಪತ್ರಿಕೆ, ಟೀವಿ, ಟೇಬಲ್‌, ಚೇರ್‌, ಹಾಸಿಗೆ, ಟೀಪಾಟ್‌, ಸ್ವಂತ ವಸ್ತ್ರ, ಆಹಾರಕ್ಕೆ ಅವಕಾಶ ಇರುವ, ಬೇರೆ ಕೈದಿಗಳಿಂದ ದೂರ ಇಡುವ ‘ಎ’ ದರ್ಜೆಯ ಕೋಣೆಯನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ನಡುವೆ ಉಡುಗೊರೆ ಪ್ರಕರಣದಲ್ಲಿ ಇಮ್ರಾನ್‌ಗೆ ನ್ಯಾಯಸಮ್ಮತ ವಿಚಾರಣೆಯ ಅವಕಾಶ ಸಿಕ್ಕಿಲ್ಲ. ಹೀಗಾಗಿ ಪ್ರಕರಣದಲ್ಲಿ ಹೊಸದಾಗಿ ವಿಚಾರಣೆಗೆ ಆದೇಶಿಸಬೇಕು ಎಂದು ಪಿಟಿಐ ಪಕ್ಷ ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದೆ.

5 ವರ್ಷ ಪಾಕ್‌ ಚುನಾವಣೆಯಲ್ಲಿ ಸ್ಪರ್ಧಿಸಂಗಿಲ್ಲ ಇಮ್ರಾನ್‌ ಖಾನ್‌: 3 ವರ್ಷ ಜೈಲು ಶಿಕ್ಷೆ; ತೀರ್ಪು ಬೆನ್ನಲ್ಲೇ ಅರೆಸ್ಟ್‌ 

ಏನಿದು ತೋಶಾಖಾನಾ ಪ್ರಕರಣ?
ತೋಶಾಖಾನಾ ಎಂಬುದು ಪಾಕಿಸ್ತಾನದ ಸರ್ಕಾರಿ ಹುದ್ದೆಗಳಲ್ಲಿರುವ ವ್ಯಕ್ತಿಗೆ ಬಂದ ಉಡುಗೊರೆಗಳನ್ನು ಸಂಗ್ರಹಿಸಿಡುವ ಇಲಾಖೆ. 2018ರಲ್ಲಿ ಪ್ರಧಾನಿಯಾದ ಇಮ್ರಾನ್‌ ಖಾನ್‌ ತಮಗೆ ಬಂದ ಉಡುಗೊರೆಗಳ ಬಗ್ಗೆ ಇಲ್ಲಿಗೆ ಮಾಹಿತಿ ನೀಡಿರಲಿಲ್ಲ. ಬಳಿಕ ಅವರೇ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕನಿಷ್ಠ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಆದರೆ, ಸರ್ಕಾರಕ್ಕೆ ಹಣ ನೀಡಿ ಈ ಉಡುಗೊರೆಗಳನ್ನು ತಾವು ಖರೀದಿಸಿದ್ದಾಗಿಯೂ ಅವರು ಹೇಳಿದ್ದರು. ಇದರ ವಿರುದ್ಧ ಚುನಾವಣಾ ಆಯೋಗ ಹಾಗೂ ಆಡಳಿತಾರೂಢ ಪಿಎಂಎಲ್‌-ಎನ್‌ ಪಕ್ಷ ದೂರು ದಾಖಲಿಸಿ, ಇಮ್ರಾನ್‌ ವಿಷಯ ಮುಚ್ಚಿಡುತ್ತಿದ್ದು, ಇನ್ನೂ ಅನೇಕ ವಿದೇಶಿ ಉಡುಗೊರೆ ಮಾರಿಕೊಂಡು ದುಡ್ಡು ಮಾಡಿಕೊಂಡಿದ್ದಾರೆ ಎಂದು ದೂರಿದ್ದವು. ಇಮ್ರಾನ್‌ ಮಾರಾಟ ಮಾಡಿದ ಉಡುಗೊರೆಗಳ ಪೈಕಿ ಸೌದಿಯ ರಾಜ ನೀಡಿದ್ದ ಗ್ರಾಫ್‌ ವಾಚ್‌, ರೋಲೆಕ್ಸ್‌ ವಾಚುಗಳು, ದುಬಾರಿ ಕಫ್ಲಿಂಕ್‌ಗಳು, ಪೆನ್‌ ಹಾಗೂ ಉಂಗುರಗಳು ಸೇರಿವೆ.

click me!