ಹಣದುಬ್ಬರವಲ್ಲ, ಹೈಪರ್‌ ಹಣದುಬ್ಬರದತ್ತ ಪಾಕ್‌, ಸಾಲ ತೀರಿಸುವ ಅವಧಿ ವಿಸ್ತರಿಸಿದ ಚೀನಾ!

By Santosh NaikFirst Published Apr 1, 2023, 7:40 PM IST
Highlights

ಪಾಕಿಸ್ತಾನ 1965ರ ನಂತರ ಅತ್ಯಂತ ಭೀಕರ ಹಣದುಬ್ಬರ ಎದುರಿಸುತ್ತಿದೆ ಅನ್ನೋದು ದಾಖಲೆಗಳಿಂದ ಸ್ಪಷ್ಟವಾಗಿದೆ. ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ ಹಣದುಬ್ಬರ ಶೇ. 35ರಷ್ಟು ಏರಿಕೆಯಾಗಿದೆ. ಇದು ಕಳೆದ 58 ವರ್ಷಗಳ ದಾಖಲೆ. ಇದರ ನಡುವೆ ಚೀನಾ ತನ್ನ 16 ಸಾವಿರ ಕೋಟಿ ಸಾಲ ತೀರಿಸುವ ಅವಧಿಯನ್ನು ವಿಸ್ತರಣೆ ಮಾಡಿದೆ.
 

ನವದೆಹಲಿ (ಏ.1): ಪಾಕಿಸ್ತಾನದ ಸರ್ಕಾರ ದೇಶದ ಹಣದುಬ್ಬರದ ವಿಚಾರವಾಗಿ ಶನಿವಾರ ಆಘಾತಕಾರಿ ವರದಿಯನ್ನು ಪ್ರಕಟ ಮಾಡಿದೆ. ಪಾಕಿಸ್ತಾನ ಸರ್ಕಾರದ ಅಂಕಿ ಅಂಶ ಸಚಿವಾಲಯವು ಮಾರ್ಚ್‌ 2022 ರಿಂದ ಮಾರ್ಚ್‌ 2023ರವರೆಗೆ ಪಾಕಿಸ್ತಾನದಲ್ಲಿ ಆಗಿರುವ ಹಣದುಬ್ಬರ ಪ್ರಮಾಣದ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಪಾಕ್‌ನಲ್ಲಿ ಬರೋಬ್ಬರಿ 35.57%ರಷ್ಟು ಹಣದುಬ್ಬರ ದಾಖಲಾಗಿದೆ. ಇದು 1965ರ ನಂತರ ದೇಶದ ಗರಿಷ್ಠ ಮಟ್ಟದ ಹಣದುಬ್ಬರ ಎನ್ನಲಾಗಿದೆ. ಇದೇ ವೇಳೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ, ಚೀನಾ 16,000 ಕೋಟಿ ರೂಪಾಯಿ ಸಾಲ ಮರುಪಾವತಿಸಲು ನೀಡಿದ್ದ ಕಾಲಾವಕಾಶವನ್ನು ವಿಸ್ತರಿಸಿದೆ. ಈ ಮಾಹಿತಿಯನ್ನು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ನೀಡಿದ್ದಾರೆ.  ಪಾಕಿಸ್ತಾನದಲ್ಲಿ, ಕಳೆದ ಒಂದು ವರ್ಷದಲ್ಲಿ ಹಣದುಬ್ಬರದ ದೊಡ್ಡ ಪರಿಣಾಮವು ಆಹಾರ, ಸಾರಿಗೆ ಮತ್ತು ಮದ್ಯದ ಮೇಲೆ ಆಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಆಹಾರ ಪದಾರ್ಥಗಳ ಬೆಲೆಗಳು 47.2% ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಸಾರಿಗೆಯು 54.9% ರಷ್ಟು ದುಬಾರಿಯಾಗಿದೆ, ಮದ್ಯದ ಬೆಲೆಯಲ್ಲಿ 50% ರಷ್ಟು ಹೆಚ್ಚಳವನ್ನು ದಾಖಲಿಸಲಾಗಿದೆ. ಪಾಕಿಸ್ತಾನದಲ್ಲಿ ಹಣದುಬ್ಬರವು ನಗರಗಳಿಗಿಂತ ಹಳ್ಳಿಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಕಳೆದ ಒಂದು ವರ್ಷದಲ್ಲಿ ಹಣದುಬ್ಬರ ಶೇ.38.8ರಷ್ಟು ಹೆಚ್ಚಿದ್ದರೆ, ನಗರಗಳಲ್ಲಿ ಶೇ.32ರಷ್ಟು ಏರಿಕೆಯಾಗಿದೆ. ವರದಿಗಳ ಪ್ರಕಾರ ಗ್ರಾಮದಲ್ಲಿ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ.

ಹೈಪರ್‌ ಇನ್‌ಫ್ಲೇಶನ್‌ನತ್ತ ಪಾಕ್: ಜಿಯೋ ನ್ಯೂಸ್ ಪ್ರಕಾರ, ಪಾಕಿಸ್ತಾನ ಈಗ ಅಧಿಕ ಹಣದುಬ್ಬರದತ್ತ ಸಾಗುತ್ತಿದೆ. ವಾಸ್ತವವಾಗಿ, ಅಧಿಕ ಹಣದುಬ್ಬರವು ವಸ್ತುಗಳ ಬೆಲೆ ದ್ವಿಗುಣಗೊಂಡಾಗ ಉಂಟಾಗುವ ಪರಿಸ್ಥಿತಿಯಾಗಿದೆ.ಇದೇ ವೇಳೆ ರಂಜಾನ್ ಮಾಸವಾದ್ದರಿಂದ ಜನರು ಮೊದಲಿಗಿಂತ ಹೆಚ್ಚು ಶಾಪಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಂತರ ಹೆಚ್ಚಿದೆ. ಇದರಿಂದಾಗಿ ಹಣದುಬ್ಬರವೂ ಹೆಚ್ಚಿದೆ.

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ 16,000 ಕೋಟಿ ರೂಪಾಯಿ ಸಾಲ ಮರುಪಾವತಿಸಲು ಚೀನಾ ಹೆಚ್ಚಿನ ಕಾಲಾವಕಾಶ ನೀಡಿದೆ. ಹಿಂದಿನ ಗಡುವಿನ ಪ್ರಕಾರ, ಪಾಕಿಸ್ತಾನವು ಕಳೆದ ವಾರದೊಳಗೆ ಈ ಸಾಲವನ್ನು ಮರುಪಾವತಿ ಮಾಡಬೇಕಾಗಿತ್ತು. ಆದರೆ, ಚೀನಾ ಸರ್ಕಾರ ಮತ್ತು ಅಲ್ಲಿನ ಬ್ಯಾಂಕ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೇಶ ವಿಭಜನೆ ತಪ್ಪೆಂದು ಈಗ ಪಾಕಿಸ್ತಾನ ಜನತೆಗೆ ಅರಿವಾಗಿದೆ: ಮೋಹನ್‌ ಭಾಗವತ್‌

1 ಕೆಜಿ ಹಿಟ್ಟಿಗೆ 185 ರೂಪಾಯಿ: 'ದುನಿಯಾ ನ್ಯೂಸ್' ಟಿವಿ ವಾಹಿನಿಯ ವರದಿ ಪ್ರಕಾರ, ಪ್ರಸ್ತುತ ಪಾಕಿಸ್ತಾನದಲ್ಲಿ ಒಂದು ಕೆಜಿ ಹಿಟ್ಟು 185 ರೂ.ಗೆ ಮಾರಾಟವಾಗುತ್ತಿದೆ. ದೇಶದ ಹೆಚ್ಚಿನ ಜನರು ತಂದೂರಿ ಅಂಗಡಿಗಳಿಂದ ರೊಟ್ಟಿಗಳನ್ನು ಖರೀದಿಸುತ್ತಾರೆ. ಒಂದು ರೊಟ್ಟಿ ಲಾಹೋರ್‌ನಲ್ಲಿ ಸುಮಾರು 40 ರೂಪಾಯಿಗೆ ಲಭ್ಯವಿದೆ. ದುಬಾರಿ ವಿದ್ಯುತ್ ಹಾಗೂ ನಿರ್ವಹಣೆಯಿಂದಾಗಿ ದುಬಾರಿ ಬೆಲೆಗೆ ರೊಟ್ಟಿ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ತಂದೂರಿ ರೋಟಿ ಮಾರಾಟ ಮಾಡುವ ವ್ಯಾಪಾರಿಗಳು ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡ ಸರಕಾರ ಬಡವರಿಗೆ ಉಚಿತವಾಗಿ ಹಿಟ್ಟು ನೀಡುವ ಯೋಜನೆ ಆರಂಭಿಸಿದ್ದರೂ ಅದರ ಪ್ರಯೋಜನ ಸಿಗುತ್ತಿಲ್ಲ.

ಪಾಕ್‌ನಲ್ಲಿ ಇಡೀ ತಿಂಗಳು ಖರೀದಿಸುವ ವಾಹನಕ್ಕಿಂತ ಭಾರತದಲ್ಲಿ ಪ್ರತಿ ದಿನ ಖರೀದಿಸುವ ಕಾರು ದುಪ್ಪಟ್ಟು!

ಸರಕಾರಿ ಅಧಿಕಾರಿಗಳು ಕೂಡ ಈ ಕಳಪೆ ಹಿಟ್ಟನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಉಚಿತ ಹಿಟ್ಟನ್ನು ಸಾಗಿಸುವ ಟ್ರಕ್ ಪ್ರದೇಶವನ್ನು ತಲುಪಿದ ತಕ್ಷಣ, ನೂಕುನುಗ್ಗಲು ಉಂಟಾಗುತ್ತದೆ. ಮಂಗಳವಾರ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇದಾದ ಬಳಿಕ ಪೊಲೀಸರು ಹಸಿವಿನಿಂದ ಕಂಗೆಟ್ಟ ಜನರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.

click me!