ಅಮೆರಿಕಕ್ಕೆ ಒಳನುಸುಳಲು ಯತ್ನಿಸಿದ ಭಾರತೀಯ ಮೂಲದ ಕುಟುಂಬ ಸಾವು!

By Santosh NaikFirst Published Apr 1, 2023, 12:53 PM IST
Highlights

ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದ  ಭಾರತೀಯ ಮೂಲದ 8 ಸದಸ್ಯರಿದ್ದ ಕುಟುಂಬ  ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರಲ್ಲಿ 6 ಮಂದಿ ವಯಸ್ಕರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.
 

ನವದೆಹಲಿ (ಏ.1): ಕೆನಡಾ ದೇಶದಿಂದ ಅಮೆರಿಕಕ್ಕೆ ಅಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದ ಭಾರತೀಯ ಮೂಲದ 8 ಸದಸ್ಯರ ಕುಟುಂಬ ಕೆನಡಾ-ಅಮೆರಿಕಾ ಗಡಿಯಲ್ಲಿನ ಸೇಂಟ್‌ ಲಾರೆನ್ಸ್‌ ನದಿಯಲ್ಲಿ ಮುಳುಗಿ ಸಾವು ಕಂಡಿದೆ. ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರ ಶವಗಳನ್ನು ಕೆನಡಾ ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ದೋಣಿಯ ಮೂಲಕ ಸೇಂಟ್‌ ಲಾರೆನ್ಸ್‌ ನದಿಯನ್ನು ದಾಡಿ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಭಾರತೀಯ ಕುಟುಂಬ ಯತ್ನ ಮಾಡುತ್ತಿತ್ತು ಎಂದು ರಾಯಿಟರ್ಸ್‌ ತಿಳಿಸಿದೆ. ಮೃತರಲ್ಲಿ ಆರು ಮಂದಿ ವಯಸ್ಕರಾಗಿದ್ದು, ಇಬ್ಬರು ಮಕ್ಕಳಾಗಿದ್ದಾರೆ. ಇದರಲ್ಲಿ ಎರಡು ಹೆಚ್ಚುವರಿ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ರೊಮೇನಿಯನ್‌ ಮೂಲದ ಕೆನಡಾ ಪ್ರಜೆಯಾಗಿರುವ ಒಂದು ಶಿಶು ಹಾಗೂ ಹಾಗೂ ಭಾರತೀಯ ಮೂಲದ ಮಹಿಳೆಯೊಬ್ಬಳ ಶವ ಕೂಡ ಇದರಲ್ಲಿ ಸಿಕ್ಕಿದೆ' ಎಂದು ಅಕ್ವೆಸಾಸ್ನೆ ಮೊಹಾಕ್ ಪೊಲೀಸ್ ಸೇವೆಯ ಮುಖ್ಯಸ್ಥ ಶಾನ್ ಡುಲುಡೆ ರಾಯಿಟರ್ಸ್‌ಗೆ ತಿಳಿಸಿದರು. ಕೆನಡಾ-ಯುಎಸ್ ಗಡಿಯನ್ನು ರೂಪಿಸುವ ಸೇಂಟ್ ಲಾರೆನ್ಸ್ ನದಿ ತೀರ ಪ್ರದೇಶದ ಕೆಸರಿನಲ್ಲಿ ಗುರುವಾರ ಮೃತದೇಹಗಳು ಪತ್ತೆಯಾಗಿವೆ.

ರೊಮೇನಿಯಾ ಮತ್ತು ಭಾರತದ ಎರಡು ಕುಟುಂಬಗಳು ಇದರಲ್ಲಿ ಸಾವು ಕಂಡಿದೆ ಎಂದು ಬಿಬಿಸಿ ವರದಿ ಮಾಡಿದೆ. ಪೋಲೀಸರ ಪ್ರಕಾರ, ಮೊದಲ ದೇಹವು ಸ್ಥಳೀಯ ಕಾಲಮಾನ 17:00 (21:00 GMT) ಸುಮಾರಿಗೆ ಯುಎಸ್‌-ಕೆನಡಾ ಗಡಿಯ ನಡುವಿನ ಮೊಹಾಕ್ ಪ್ರದೇಶದ ಅಕ್ವೆಸಾಸ್ನೆಯಲ್ಲಿರುವ ತ್ಸಿ ಸ್ನೈಹ್ನೆಯಲ್ಲಿನ ನದಿ ತೀರದ ಕೆಸರಿನ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.  ಗುರುವಾರ ಆರು ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬುಧವಾರ ರಾತ್ರಿ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಿದ್ದಾರೆ. ಪೊಲೀಸ್ ಹೆಲಿಕಾಪ್ಟರ್ ನೀರಿನಲ್ಲಿ ಎರಡು ದೇಹಗಳನ್ನು ಗುರುತಿಸಿದೆ.  'ಒಟ್ಟು ಎಂಟು ಮೃತದೇಹಗಳನ್ನು ಈಗ ನೀರಿನಿಂದ ಹೊರತೆಗೆಯಲಾಗಿದೆ. ಎಲ್ಲರೂ ಕೆನಡಾದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು'ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Illegal Immigration: 75 ಲಕ್ಷ ತೆತ್ತು ಅಕ್ರಮವಾಗಿ ಅಮೆರಿಕ ಪ್ರವೇಶದ ರಹಸ್ಯ!

ಸಾವು ಕಂಡವರಲ್ಲಿ ಒಂದು ಮಗು ಮೂರು ವರ್ಷಕ್ಕಿಂತ ಕೆಳಗಿನದ್ದಾಗಿದ್ದು, ಕೆನಡಾದ ಪಾಸ್‌ಪೋರ್ಟ್‌ ಹೊಂದಿದೆ. ಇನ್ನೊಂದು ಮಗು ಕೂಡ ಕೆನಡಾದ ಪ್ರಜೆಯಾಗಿದೆ ಎಂದು ಸ್ಥಳೀಯ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮೃತದೇಹಗಳು ರೊಮೇನಿಯನ್ ಮೂಲದ ಮತ್ತು ಭಾರತೀಯ ಮೂಲದ ಎರಡು ಕುಟುಂಬದ್ದಾಗಿದೆ ಎಂದು ಅಕ್ವೆಸಾಸ್ನೆ ಮೊಹಾಕ್ ಪೊಲೀಸ್ ಸೇವೆಯ ಉಪ ಮುಖ್ಯಸ್ಥ ಲೀ-ಆನ್ ಒ'ಬ್ರೇನ್ ಬಿಬಿಸಿಗೆ ತಿಳಿಸಿದ್ದಾರೆ.  ನಾಪತ್ತೆಯಾದ ಮತ್ತೊಬ್ಬ ವ್ಯಕ್ತಿಯ ಶೋಧ ಕಾರ್ಯ ಗುರುವಾರ ಆರಂಭವಾದ ಬಳಿಕ ಉಳಿದ ಶವಗಳು ಪತ್ತೆಯಾಗಿವೆ.

Indian Freeze Death: ಅಮೆರಿಕಾ- ಕೆನಡಾ ಗಡಿಯಲ್ಲಿ ಕೊರೆವ ಚಳಿಗೆ ಮಗು ಸೇರಿ ನಾಲ್ವರು ಭಾರತೀಯರ ಬಲಿ

ಘಟನೆಯ ಕುರಿತು ಪ್ರತಿಕ್ರಿಯಿಸಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, "ಇದೊಂದು ಹೃದಯವಿದ್ರಾವಕ ಪರಿಸ್ಥಿತಿ. ನಾವು ಏನಾಯಿತು, ಅದು ಹೇಗೆ ಸಂಭವಿಸಿತು ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಇದು ಮತ್ತೆ ಸಂಭವಿಸುವ ಸಾಧ್ಯತೆಗಳನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಬೇಕಾಗಿದೆ" ಎಂದು ಹೇಳಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಜಸ್ಟಿನ್ ಟ್ರುಡೊ ಅವರು ಕಳೆದ ವಾರ ಕೆನಡಾಕ್ಕೆ ಅನಧಿಕೃತವಾಗಿ ಗಡಿ ದಾಟುವ ಮೂಲಕ ಆಶ್ರಯ ಪಡೆಯುವವರನ್ನು ತಡೆಯಲು ಒಪ್ಪಿಕೊಂಡರು. ಕಳೆದ ವರ್ಷ, ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದಲ್ಲಿ ನಾಲ್ವರ ಭಾರತೀಯ ಕುಟುಂಬವು ಯುಎಸ್‌ಗೆ ದಾಟಲು ಪ್ರಯತ್ನಿಸುತ್ತಿರುವಾಗ ಅಪಾರ ಚಳಿಯಿಂದಾಗಿ ಸಾವು ಕಂಡಿತ್ತು.

click me!