
ನವದೆಹಲಿ (ಜು.1): ಆಪರೇಷನ್ ಸಿಂದೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಹಲವಾರು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ಮಿಲಿಟರಿ ದಾಳಿ ನಡೆಸಿದ ನಂತರ, ಪಾಕಿಸ್ತಾನ ಸಂಪೂರ್ಣ ಬರ್ಬಾದ್ ಆಗಿದೆ. ಈಗ ತನ್ನ ಮಿಲಿಟರಿ ಶಸ್ತ್ರಾಗಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್, ಟರ್ಕಿಯೊಂದಿಗಿನ ತನ್ನ ರಕ್ಷಣಾ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದೆ. ಭಾರತೀಯ ಅಧಿಕಾರಿಗಳು ಇದನ್ನು "ಅಪಾಯಕಾರಿ ಮತ್ತು ಪ್ರಚೋದನಕಾರಿ ಮಿಲಿಟರಿ ಲಕ್ಷಣ" ಎಂದು ಬಣ್ಣಿಸಿದ್ದಾರೆ.
ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನವು ಸುಮಾರು $20 ಮಿಲಿಯನ್‌ಗೆ 80 KARGI ಲೊಯಟರಿಂಗ್ ಮನಿಷನ್‌ಗಳನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ. 500 ನಾಟಿಕಲ್-ಮೈಲಿ ವ್ಯಾಪ್ತಿ ಇರುವ ಇದು, 15,000 ಅಡಿ ಹಾರಾಟದ ಮಟ್ಟ ಮತ್ತು 18 ಕೆಜಿ ಸಿಡಿತಲೆಗಳನ್ನು ಹೊಂದಿರುವ ಟರ್ಕಿಶ್ ಡ್ರೋನ್‌ಗಳಾಗಿವೆ.
ಪಾಕಿಸ್ತಾನವು ಒಪ್ಪಂದೇತರ ಆಧಾರದ ಮೇಲೆ 50 YIHA UAV ಗಳನ್ನು ಪಡೆದುಕೊಂಡಿದೆ ಮತ್ತು 550 ಕ್ಕೂ ಹೆಚ್ಚು UAV ಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ, ಜೊತೆಗೆ ಆಂಟಿ-ಜಾಮಿಂಗ್ ವ್ಯವಸ್ಥೆಗಳು ಮತ್ತು ನೆಲದ ನಿಯಂತ್ರಣ ಕೇಂದ್ರಗಳನ್ನು ಸಹ ಸ್ವಾಧೀನಪಡಿಸಿಕೊಳ್ಳಲಿದೆ. ಈ ವ್ಯವಸ್ಥೆಗಳು ನಿಖರವಾದ ದಾಳಿ ಮತ್ತು ವಂಚನೆ ತಂತ್ರಗಳಿಗೆ ಅವಕಾಶ ನೀಡುತ್ತವೆ ಎಂದು ಮೂಲಗಳು ತಿಳಿಸಿವೆ.
ರಕ್ಷಣಾ ತಜ್ಞರ ಪ್ರಕಾರ, ಈ ಪಾಲುದಾರಿಕೆಯು ಉಪಗ್ರಹ ತಂತ್ರಜ್ಞಾನ, ಸೈಬರ್ ಯುದ್ಧ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಜಂಟಿ ಉದ್ಯಮಗಳಿಗೆ ವಿಸ್ತರಿಸುತ್ತದೆ, ಇದು ಪಾಕಿಸ್ತಾನದ ಮಿಲಿಟರಿ ಸಾಮರ್ಥ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಚೀನಾದ ನಂತರ ಟರ್ಕಿ ಪಾಕಿಸ್ತಾನದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿದೆ, 2015–2019 ಮತ್ತು 2020–2024 ರ ನಡುವೆ ಪಾಕಿಸ್ತಾನಕ್ಕೆ ಟರ್ಕಿಯ ಶಸ್ತ್ರಾಸ್ತ್ರ ರಫ್ತು ಶೇ. 103 ರಷ್ಟು ಹೆಚ್ಚಾಗಿದೆ. ಪ್ರಮುಖ ಒಪ್ಪಂದಗಳಲ್ಲಿ ಬೇರಕ್ತಾರ್ ಟಿಬಿ2 ಡ್ರೋನ್‌ಗಳು ಮತ್ತು ಕೆಮಾಂಕೆಸ್ ಕ್ರೂಸ್ ಕ್ಷಿಪಣಿಗಳ ಸ್ವಾಧೀನ, ಯುದ್ಧತಂತ್ರದ ದಾಳಿಗಳಿಗಾಗಿ ಆಸಿಸ್‌ಗಾರ್ಡ್ ಸೊಂಗರ್ ಸಶಸ್ತ್ರ ಯುಎವಿಗಳ ಖರೀದಿ, ಪಾಕಿಸ್ತಾನದ ನೌಕಾಪಡೆಯನ್ನು ಆಧುನೀಕರಿಸಲು ನಾಲ್ಕು ಮಿಲ್ಜೆಮ್-ವರ್ಗದ ಕಾರ್ವೆಟ್‌ಗಳಿಗೆ $1.5 ಬಿಲಿಯನ್ ಒಪ್ಪಂದ ಮತ್ತು ಪಾಕಿಸ್ತಾನದ ಅಗೋಸ್ಟಾ 90 ಬಿ ಜಲಾಂತರ್ಗಾಮಿ ನೌಕೆಗಳಿಗೆ ಅಪ್‌ಗ್ರೇಡ್ ಮಾಡುವುದು ಎಲ್ಲವೂ ಸೇರಿದೆ.
ಆಪರೇಷನ್ ಸಿಂದೂರ್ ಸಂಘರ್ಷದ ಸಮಯದಲ್ಲಿ, ಟರ್ಕಿ ಕೇವಲ ಪೂರೈಕೆದಾರನಾಗಿರಲಿಲ್ಲ, ಬದಲಾಗಿ ಸಕ್ರಿಯ ಯುದ್ಧ ಪಾಲುದಾರನಾಗಿತ್ತು. ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ 350 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಪೂರೈಕೆ ಮಾಡಿತ್ತು. ಇದರಲ್ಲಿ ಬೇರಕ್ತಾರ್ ಟಿಬಿ2ಗಳು, ವೈಎಚ್‌ಎಗಳು ಮತ್ತು ಸೊಂಗಾರ್‌ಗಳು ಸೇರಿವೆ. ಟರ್ಕಿಶ್ ಮಿಲಿಟರಿ ಕಾರ್ಯಕರ್ತರು ಭಾರತೀಯ ಪಡೆಗಳ ವಿರುದ್ಧ ರಿಯಲ್ ಟೈಮ್ ಸ್ಟ್ರೈಕ್ ಆಪರೇಷನ್‌ಗಳಲ್ಲಿ ಭಾಗಿಯಾಗಿದ್ದರು.
ಭಾರತೀಯ ಪ್ರತಿದಾಳಿಗಳಲ್ಲಿ ಕನಿಷ್ಠ ಇಬ್ಬರು ಟರ್ಕಿಶ್ ಅಡ್ವೈಸರ್‌ಗಳು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ, ಇದು ಅಂಕಾರಾದ ನೇರ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ