
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಆತ್ಮಹ*ತ್ಯಾ ದಾಳಿ ನಡೆದಿದ್ದು, ಈ ಹೊಣೆಯನ್ನು ಬಲೂಚ್ ಲಿಬರೇಶನ್ ಫ್ರಂಟ್ (BLF) ತೆಗೆದುಕೊಂಡಿದೆ. ನೊಕುಂದಿ ಪ್ರದೇಶದ ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಪ್ರಧಾನ ಕಚೇರಿ ಬಳಿಯಲ್ಲಿ ಈ ದಾಳಿ ನಡೆಸಲಾಗಿದೆ. ರೆಕೊ ದಿಕ್ ಮತ್ತು ಸಂಡಕ್ ಗಣಿಗಾರಿಕೆ ಯೋಜನೆಗಳಿಗೆ ಸಂಬಂಧಿಸಿ ವಿದೇಶಿ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ಈ ಸ್ಥಳ ಮೀಸಲಿರಿಸಲಾಗಿತ್ತು. ಗಣಿಗಾರಿಕೆ ಸಿಬ್ಬಂದಿ ವಾಸ್ತವ್ಯವಿದ್ದ ಸ್ಥಳದ ಕಾಂಪೌಂಡ್‌ನಲ್ಲಿ ಆತ್ಮ*ಹತ್ಯಾ ದಾಳಿ ನಡೆದಿದೆ ಎಂದು ವರದಿಯಾಗಿದೆ.
ನವೆಂಬರ್ 30ರ ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಈ ದಾಳಿ ನಡೆದಿದೆ. ಬಲೂಚ್ ದಂಗೆಕೋರ ಗುಂಪು ಮೊದಲು ಎಫ್‌ಸಿ ಪ್ರಧಾನ ಕಚೇರಿ ಬಳಿಯ ಕಾಂಪೌಂಡ್‌ನಲ್ಲಿ ಐದು ಬೃಹತ್ ಸ್ಫೋಟಗಳನ್ನು ನಡೆಸಿದೆ. ನಂತರ ಅಲ್ಲಿದ್ದ ಭದ್ರತಾ ಪಡೆ ಮೇಲೆ ಗುಂಡಿನ ದಾಳಿಯನ್ನು ನಡೆಸಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಸಾವು-ನೋವುಗಳ ಮಾಹಿತಿಯನ್ನು ಪಾಕಿಸ್ತಾನ ಮತ್ತು ಬಲೂಚ್ ದಂಗೆಕೋರ ಗುಂಪು ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ದಾಳಿ ಬಳಿಕ ಚಾಗೈ ಜಿಲ್ಲೆಯ ವ್ಯಾಪ್ತಿಗೆ ಬರುವ ಬಲೂಚಿಸ್ತಾನದ ನೊಕುಂದಿ ಪ್ರದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಈ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಬಲೂಚ್ ಲಿಬರೇಶನ್ ಫ್ರಂಟ್ (BLF) ವಕ್ತಾರ ಮೇಜರ್ ಘ್ವಾರಾಮ್ ಬಲೂಚ್, ತಮ್ಮ ಸಾಧೋ ಆಪರೇಷನಲ್ ಬೆಟಾಲಿಯನ್ (SOB) ಘಟಕ ಈ ದಾಳಿ ನಡೆಸಿದೆ. ಪಾಕಿಸ್ತನ ಸರ್ಕಾರದ ಗಣಿಗಾರಿಕೆ ಯೋಜನೆಯ ವಿದೇಶಿ ತಜ್ಞರು, ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಗೆ ಕೆಲಸ ಮತ್ತು ವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಹೇಳಿದ್ದಾನೆ.
ಈ ದಾಳಿ ನಡೆದ ಪ್ರದೇಶವನ್ನು ವಿದೇಶಿ ಹೂಡಿಕೆಗೆ ಅತ್ಯಂತ "ಸುರಕ್ಷಿತ" ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಹೇಳಿಕೊಂಡಿತ್ತು. ಇದೀಗ ಇದೇ ಸ್ಥಳವನ್ನು ಗುರಿಯಾಗಿಸಿಕೊಂಡು ಬಲೂಚ್ ಲಿಬರೇಶನ್ ಫ್ರಂಟ್ ದಾಳಿ ನಡೆಸಿದೆ. ನಾಕುಂದಿ ಪ್ರದೇಶದಲ್ಲಿರುವ ರಿಕೊ ಡಿಕ್ ಮತ್ತು ಸೈಂದಕ್ ಗಣಿಗಾರಿಕೆ ಯೋಜನೆಗಳ ಬಗ್ಗೆ ಪಾಕಿಸ್ತಾನ ವಿಶ್ವಾದ್ಯಂತ ಪ್ರಚಾರ ಮಾಡಿ ವಿದೇಶಿ ಬಂಡವಾಳ ಆಕರ್ಷಿಸಿತ್ತು.
ಇದನ್ನೂ ಓದಿ: ಏರ್‌ಟೆಲ್‌ನಿಂದ ವರ್ಷಪೂರ್ತಿ ನೆಮ್ಮದಿ ನೀಡುವ ಎರಡು ಹೊಸ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್
ಕಳೆದ ಕೆಲವು ದಿನಗಳಿಂದ ರೆಕೊ ಡಿಕ್ ಮತ್ತು ಸೈಂದಾಕ್ ಗಣಿಗಾರಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಡೀ ಜಗತ್ತನ್ನು ಪಾಕಿಸ್ತಾನ ಸರ್ಕಾರ ಆಹ್ವಾನಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆದ ಸಭೆಯಲ್ಲಿ ಹೂಡಿಕೆಗೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಆಹ್ವಾನಿಸಿದ್ದರು. ಜೂನ್ ಸಭೆಯಲ್ಲಿ ರಿಕೊ ಡಿಕ್ ಗಣಿಯಲ್ಲಿ ಹೂಡಿಕೆ ಮಾಡಲು ಅಮೆರಿಕವನ್ನು ಔಪಚಾರಿಕವಾಗಿ ಆಹ್ವಾನಿಸಿದ್ದರು.
ರೆಕೊ ಡಿಕ್ ಗಣಿ ವಿಶ್ವದ ಅತಿದೊಡ್ಡ ಚಿನ್ನ - ತಾಮ್ರದ ಗಣಿಗಳಲ್ಲಿ ಒಂದಾಗಿದೆ. ಇಲ್ಲಿ ಪೂರ್ಣ ಪ್ರಮಾಣದ ಗಣಿಗಾರಿಕೆ ನಡೆದಿಲ್ಲ. ಈ ಎರಡು ಯೋಜನೆಗಳು ಟ್ರಿಲಿಯನ್ಗಟ್ಟಲೆ ಡಾಲರ್ ಮೌಲ್ಯದ ಚಿನ್ನ ಮತ್ತು ತಾಮ್ರವನ್ನು ಹೊಂದಿದೆ. ಈ ಕಾರಣದಿಂದ ಪಾಶ್ಚಿಮಾತ್ಯ ದೇಶಗಳು ಹೂಡಿಕೆ ಮಾಡಬೇಕು ಎಂದು ಪಾಕಿಸ್ತಾನ ಮನವಿ ಮಾಡಿಕೊಂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕದ ರಫ್ತು-ಆಮದು ಬ್ಯಾಂಕ್ ( EXIM) ರಿಕೊ ಡಿಕ್ ಗಣಿಗಾರಿಕೆ ಯೋಜನೆಗಾಗಿ ಪಾಕಿಸ್ತಾನಕ್ಕೆ ಸುಮಾರು 35 ಸಾವಿರ ಕೋಟಿ ಪಾಕಿಸ್ತಾನಿ ರೂಪಾಯಿ ಸಾಲ ನೀಡಿದೆ. ಹಾಗಾಗಿ ಯೋಜನೆಗೆ ಸಂಬಂಧಿಸಿದಂತೆ ವಿದೇಶಿ ತಂತ್ರಜ್ಞರು ಈ ಭಾಗದಲ್ಲಿ ಕೆಲಸ ಆರಂಭಿಸಿದ್ದರು. ಈ ಸಿಬ್ಬಂದಿ ವಾಸವಾಗಿದ್ದ ಸ್ಥಳದಲ್ಲಿಯೇ ದಾಳಿ ನಡೆದಿದೆ. ಈ ದಾಳಿಯು ಭದ್ರತೆ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ