
ಬಲೂಚಿಸ್ತಾನ್ ಪ್ರಾಂತ್ಯವು ಮತ್ತೊಮ್ಮೆ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಬಲೂಚ್ ಲಿಬರೇಶನ್ ಆರ್ಮಿ (BLA) ಇಂದು ಬೆಳಿಗ್ಗೆ 6 ಗಂಟೆಯಿಂದಲೇ 'ಆಪರೇಷನ್ ಹೆರೋಫ್ 2.0' ಆರಂಭಿಸಿದ್ದು, ಪ್ರಾಂತ್ಯದ 10 ಪ್ರಮುಖ ನಗರಗಳಲ್ಲಿ ಪಾಕಿಸ್ತಾನಿ ಸೇನೆ ಮತ್ತು ISI ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಕ್ವೆಟ್ಟಾ ಸೇರಿದಂತೆ ನೋಶ್ಕಿ, ಗ್ವಾದರ್ ಮತ್ತು ಮಸ್ತುಂಗ್‌ನಂತಹ ನಗರಗಳು ಈಗ ಬಲೂಚ್ ಹೋರಾಟಗಾರರ ನಿಯಂತ್ರಣಕ್ಕೆ ಸಿಲುಕಿದಂತೆ ಭಾಸವಾಗುತ್ತಿದೆ.
ಬಿಎಲ್‌ಎಯ ಅತ್ಯಂತ ಅಪಾಯಕಾರಿ ಪಡೆಯಾದ 'ಮಜೀದ್ ಬ್ರಿಗೇಡ್', ಕ್ವೆಟ್ಟಾ ಮತ್ತು ಗ್ವಾದರ್ ಸೇರಿದಂತೆ ಐದು ನಗರಗಳಲ್ಲಿ ಭೀಕರ ಆತ್ಮಹತ್ಯಾ ದಾಳಿಗಳನ್ನು ನಡೆಸಿದೆ. ದಾಳಿಯ ವೇಳೆ ಹೋರಾಟಗಾರರು ಪಾಕಿಸ್ತಾನಿ ಸೇನಾ ಶಿಬಿರಗಳೊಳಗೆ ನುಗ್ಗಿದ್ದು, ಭೀಕರ ಗುಂಡಿನ ಚಕಮಕಿ ಮುಂದುವರೆದಿದೆ. ಫತಾಹ್ ಸ್ಕ್ವಾಡ್ ಮತ್ತು ಜಿರಾಬ್ ತಂಡಗಳು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿವೆ ಎಂದು ಬಿಎಲ್‌ಎ ತಿಳಿಸಿದೆ.
ಈ ದಾಳಿಯಲ್ಲಿ ಕನಿಷ್ಠ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಬಿಎಲ್‌ಎ ತಿಳಿಸಿದೆ. ಮಸ್ತುಂಗ್ ಮತ್ತು ಕಲಾತ್‌ನಲ್ಲಿ ಪಾಕಿಸ್ತಾನಿ ಪೊಲೀಸ್ ಕಟ್ಟಡಗಳನ್ನು ಬಲೂಚ್ ಹೋರಾಟಗಾರರು ವಶಪಡಿಸಿಕೊಂಡಿದ್ದು, ಸೈನಿಕರ ಚಲನವಲನ ತಡೆಯಲು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ. ಕ್ವೆಟ್ಟಾದಲ್ಲಿ ನಡೆದ ದಾಳಿಯಲ್ಲಿ 7 ಪೊಲೀಸರು ಸಾವನ್ನಪ್ಪಿರುವ ವರದಿಯಾಗಿದೆ.
ಡೆಪ್ಯೂಟಿ ಕಮಿಷನರ್ ಒತ್ತೆಯಾಳು: ಬೀದಿಗಿಳಿದ ಬಲೂಚ್ ಪಡೆಗಳು
ನೋಶ್ಕಿ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಮೊಹಮ್ಮದ್ ಹುಸೇನ್ ಅವರನ್ನು ಬಲೂಚ್ ಹೋರಾಟಗಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊ ಬಿಡುಗಡೆ ಮಾಡಿದ್ದಾರೆ. ರಾಜಧಾನಿ ಕ್ವೆಟ್ಟಾದಲ್ಲಿ ಹೋರಾಟಗಾರರು ಬ್ಯಾಂಕ್‌ವೊಂದನ್ನು ದೋಚಿ ಸ್ಫೋಟಿಸಿದ್ದು, ಶಸ್ತ್ರಾಸ್ತ್ರಗಳೊಂದಿಗೆ ಬಹಿರಂಗವಾಗಿ ಸಂಚರಿಸುತ್ತಿದ್ದಾರೆ. ಹಲವಾರು ಪೊಲೀಸ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಮೌನಕ್ಕೆ ಶರಣಾದ ಪಾಕ್ ಸೇನೆ
ಇಷ್ಟೆಲ್ಲಾ ಭೀಕರ ದಾಳಿಗಳು ನಡೆದಿದ್ದರೂ ಪಾಕಿಸ್ತಾನಿ ಸೇನೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸ್ಥಳೀಯ ವರದಿಗಳ ಪ್ರಕಾರ, ಸೇನೆ ಮತ್ತು ಹೋರಾಟಗಾರರ ನಡುವೆ ಇನ್ನೂ ಕಾದಾಟ ನಡೆಯುತ್ತಲೇ ಇದೆ. ಈ ಸಂಘರ್ಷದಲ್ಲಿ ಮೂವರು ಬಿಎಲ್‌ಎ ಹೋರಾಟಗಾರರು ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ