
ನವದೆಹಲಿ: ಐರೋಪ್ಯ ಒಕ್ಕೂಟ-ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಈ ಒಪ್ಪಂದದಿಂದಾಗಿ ಪಾಕಿಸ್ತಾನದ ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದ್ದು, ಸುಮಾರು 10 ದಶಲಕ್ಷ ಉದ್ಯೋಗಕ್ಕೆ ಸಂಕಷ್ಟ ಬಂದೊದಗಿದೆ.
ಪಾಕಿಸ್ತಾನದ ಜವಳಿ, ಉಡುಪು ಸೇರಿ ವಿವಿಧ ಉತ್ಪನ್ನಗಳಿಗೆ ಐರೋಪ್ಯ ಒಕ್ಕೂಟವೇ 2ನೇ ಅತಿದೊಡ್ಡ ಮಾರುಕಟ್ಟೆ. ಈ ಹಿನ್ನೆಲೆಯಲ್ಲಿ ಭಾರತ-ಇಯು ನಡುವೆ ಇದೀಗ ನಡೆದಿರುವ ‘ಮದರ್ ಆಫ್ ಆಲ್ ಡೀಲ್ಸ್’ ಕುರಿತು ಪಾಕಿಸ್ತಾನದ ರಫ್ತುದಾರರ ನಿದ್ದೆಗೆಡಿಸಿದೆ.
ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸರ್ಕಾರ ಈ ಒಪ್ಪಂದದ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಲು ಮುಂದಾಗಿದೆ. ಜತೆಗೆ ಐರೋಪ್ಯ ಒಕ್ಕೂಟ ಜತೆಗೆ ಮಾತುಕತೆಯನ್ನೂ ಆರಂಭಿಸಿದೆ ಎಂದು ಪಾಕ್ ವಿದೇಶಾಂಗ ಕಚೇರಿ ವಕ್ತಾರ ತಾಹಿರ್ ಅಂದ್ರಾಬಿ ಹೇಳಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಭಾರತದ ರಫ್ತುದಾರರಿಗೆ ತೆರಿಗೆ ರಹಿತವಾಗಿ ಯುರೋಪ್‌ಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ ಸಿಗಲಿದೆ. ಇದರಿಂದ ಈವರೆಗೆ ಯುರೋಪ್ ಜತೆಗಿನ ಜಿಎಸ್‌ಪಿಪ್ಲಸ್ (ಜನರಲೈಸ್ಡ್ ಸ್ಕೀಂ ಆಫ್ ಪ್ರಿಫರೆನ್ಸಸ್ ಪ್ಲಸ್) ಕಾರ್ಯಕ್ರಮದಡಿ ಪಾಕಿಸ್ತಾನಕ್ಕೆ ಸಿಗುತ್ತಿರುವ ತೆರಿಗೆ ಅನುಕೂಲಗಳು ಇದ್ದೂ ಇಲ್ಲದಂತಾಗಲಿದೆ.
ಜಿಎಸ್‌ಪಿಪ್ಲಸ್ ಅಡಿ ಪಾಕಿಸ್ತಾನದ ಶೇ.80ರಷ್ಟು ಉತ್ಪನ್ನಗಳು, ಅದರಲ್ಲೂ ಮುಖ್ಯವಾಗಿ ಜವಳಿ ಮತ್ತು ಬಟ್ಟೆಗಳು ಸುಂಕ ಮುಕ್ತವಾಗಿ ಯುರೋಪ್ ಮಾರುಕಟ್ಟೆ ಪ್ರವೇಶಿಸುತ್ತಿದ್ದವು. ಇದರ ಲಾಭ ಪಡೆದು ಪಾಕಿಸ್ತಾನ 5.70 ಲಕ್ಷ ಕೋಟಿ ರು. ನಷ್ಟು ಜವಳಿ ಮತ್ತು ಉಡುಪುಗಳನ್ನು ರಫ್ತು ಮಾಡುತ್ತಿದೆ. ಆದರೆ, ಭಾರತವು ಶೇ.12ರಷ್ಟು ತೆರಿಗೆಯ ನಡುವೆಯೂ 5 ಲಕ್ಷ ಕೋಟಿ ರು.ನಷ್ಟು ಬಟ್ಟೆ, ಜವುಳಿ ರಫ್ತು ಮಾಡುತ್ತಿದೆ. ಒಂದು ವೇಳೆ ಭಾರತಕ್ಕೆ ತೆರಿಗೆ ವಿನಾಯ್ತಿ ಸಿಕ್ಕರೆ ಪಾಕಿಸ್ತಾನದ ಜವಳಿ ಮತ್ತು ಬಟ್ಟೆ ರಫ್ತಿಗೆ ಭಾರೀ ಹೊಡೆತ ಪಕ್ಕಾ ಎಂದೇ ಹೇಳಲಾಗುತ್ತಿದೆ.
ಸ್ಪರ್ಧಾತ್ಮಕತೆ ಹೆಚ್ಚುವ ಜತೆಗೆ ಉತ್ಪಾದನಾ ವೆಚ್ಚವೂ ಪಾಕಿಸ್ತಾನದ ಪಾಲಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ವಿದ್ಯುತ್ ದರ ಶೇ.25ರಿಂದ 30ರಷ್ಟು ಹೆಚ್ಚಿದೆ. ಹೀಗಾಗಿ ಭಾರತ-ಇಯು ನಡುವಿನ ಒಪ್ಪಂದದಿಂದಾಗಿ ಪಾಕಿಸ್ತಾನದ 10 ದಶಲಕ್ಷ ಉದ್ಯೋಗಕ್ಕೆ ಕುತ್ತುಬಂದೊದಗುವ ಅಪಾಯ ಎದುರಾಗಿದೆ.
ತಲ್ಲಣ
- 5 ಲಕ್ಷ ಕೋಟಿ ಬಿಸಿನೆಸ್, 10 ಲಕ್ಷ ನೌಕರಿಗೆ ಕುತ್ತು?
- ಒಪ್ಪಂದ ಪರಿಶೀಲನೆಗೆ ಪಾಕ್ ನಿರ್ಧಾರ
ಈವರೆಗೆ ಶೂನ್ಯ ತೆರಿಗೆಯಡಿ ಪಾಕ್‌ನಿಂದ ಇಯುಗೆ ವಾರ್ಷಿಕ ₹5.7 ಲಕ್ಷ ಕೋಟಿ ಮೌಲ್ಯದ ಜವಳಿ
ಶೇ.12ರಷ್ಟು ತೆರಿಗೆ ಇದ್ದರೂ ಯುರೋಪ್‌ಗೆ ಭಾರತದಿಂದ 5 ಲಕ್ಷ ಕೋಟಿ ಮೌಲ್ಯದ ಜವಳಿ ರಫ್ತು
ಇದೀಗ ಭಾರತದ ಉತ್ಪನ್ನಕ್ಕೆ ಸುಂಕ ಕಡಿತ ಬಳಿಕ ಭಾರತ ಉತ್ಪನ್ನ ಅಗ್ಗವಾಗಿ ರಫ್ತು ಹೆಚ್ಚಳ ನಿರೀಕ್ಷೆ
ಇದರಿಂದ ಇದನ್ನೇ ನಂಬಿರುವ ಪಾಕ್‌ನ 10 ಲಕ್ಷ ಜನರಿಗೆ ಆತಂಕ. ರಫ್ತು ಕುಸಿಯುವ ಕಳವಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ