
ವೈದ್ಯಕೀಯ ಕ್ಷೇತ್ರವೂ ಉದ್ಯೋಗಿಗಳಿಗೆ ಬಿಡುವು ಹಾಗೂ ವಿರಾಮವನ್ನು ನೀಡದ ವೃತ್ತಿ ಕ್ಷೇತ್ರವೆನಿಸಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಕನಿಷ್ಠ ನೀರು ಊಟ ಸೇವಿಸುವುದಕ್ಕೂ ಸಮಯವಿಲ್ಲದಂತಹ ಸ್ಥಿತಿ ಇದೆ. ಇದು ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ರೋಗಿಗಳಿಗಿಂತ ಹೆಚ್ಚು ತಾವೇ ಸುಸ್ತಾಗುವಂತೆ ಮಾಡುತ್ತದೆ. ಆದರೆ ಇಲ್ಲೊಬ್ಬ ನರ್ಸ್ ವಿರಾಮ ಇಲ್ಲದ ತನ್ನ ವೃತ್ತಿಯಿಂದ ಬಿಡುವು ಪಡೆದುಕೊಳ್ಳುವುದಕ್ಕೆ ಮಾಡಿದ ಕೆಲಸ ಕೇಳಿದರೆ ನೀವು ಬೆಚ್ಚಿ ಬೀಳೋದಂತು ಗ್ಯಾರಂಟಿ.
ಹೌದು ರಾತ್ರಿ ಪಾಳಿಯಲ್ಲಿ ತನ್ನ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಪುರುಷ ನರ್ಸ್ ಓರ್ವ 10 ರೋಗಿಗಳನ್ನು ಕೊಲೆ ಮಾಡಿದಂತಹ ಘಟನೆ ನಡೆದಿದೆ., ಆತನಿಗೆ ನ್ಯಾಯಾಲಯ ಈಗ ಜೀವಾವಧಿ ಶಿಕ್ಷೆ ಘೋಷಿಸಿದೆ. ಪೂರ್ವ ಜರ್ಮನಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಿಬಿಸಿ ವರದಿಯ ಪ್ರಕಾರ ಈ ನರ್ಸ್ 10 ರೋಗಿಗಳನ್ನು ಕೊಲೆ ಮಾಡಿದ್ದು, ಇನ್ನುಳಿದ 27 ಜನರನ್ನು ಕೊಲೆ ಮಾಡುವುದಕ್ಕೆ ಯತ್ನಿಸಿದ್ದ. ಈತ ರಾತ್ರಿ ಪಾಳಿ ಮಾಡುತ್ತಿದ್ದ ಸಮಯದಲ್ಲೆಲ್ಲಾ ಹೆಚ್ಚು ಹೆಚ್ಚು ರೋಗಿಗಳು ಸಾವನ್ನಪ್ಪುತ್ತಿರುವುದು ಹಾಗೂ ಅವರ ಆರೋಗ್ಯ ಇದ್ದಕ್ಕಿದ್ದಂತೆ ಕ್ಷೀಣಿಸುವುದು ಗಮನಕ್ಕೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ ವೈದ್ಯರು ಹಾಗೂ ಇತರ ಆರೋಗ್ಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ ನಂತರ ಆತನನ್ನು ಬಂಧಿಸಲಾಗಿತ್ತು. ಆರೋಪಿಯೂ 2023 ಹಾಗೂ 2024ರ ಅವಧಿಯಲ್ಲಿ ಈ ಕೃತ್ಯವೆಸಗಿದ್ದಾನೆ. ಜರ್ಮನಿಯ ವೂರ್ಸೆಲೆನ್‌ನಲ್ಲಿರುವ ಆಸ್ಪತ್ರೆಯಲ್ಲಿ ಈ ಭಯಾನಕ ಘಟನೆ ನಡೆದಿವೆ.
ಈ ಆಘಾತಕರಿ ಘಟನೆಯ ವಿಚಾರಣೆ ನಡೆಸಿದ ಜರ್ಮನಿಯ ಸ್ಥಳೀಯ ನ್ಯಾಯಾಲಯ ಮಾನವೀಯತೆ ಮರೆತ ಈ ನರ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 44 ವರ್ಷದ ಪ್ರಾಯದ ಈ ನರ್ಸ್ ಹೆಚ್ಚಿನ ಸೇವೆಯ ಅಗತ್ಯ ಇದ್ದ ವೃದ್ಧರು ಮತ್ತು ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅತಿಯಾದ ಪ್ರಮಾಣದಲ್ಲಿ ಮಾರ್ಫಿನ್ ಮತ್ತು ಮಿಡಜೋಲಮ್ ಎಂಬ ಒಂದು ರೀತಿಯ ನಿದ್ರಾಜನಕವನ್ನು ಇಂಜೆಕ್ಟ್ ಮಾಡಿದ್ದ. ಹೀಗೆ ಮಾಡುವುದರಿಂದ ಈ ಔಷಧಿಯ ಅಮಲಿನಲ್ಲಿರುತ್ತಿದ್ದ ರೋಗಿಗಳು ರಾತ್ರಿಯೆಲ್ಲಾ ಯಾವುದೇ ಸಹಾಯದ ಬೇಡಿಕೆ ಇಲ್ಲದೇ ನಿರ್ಜೀವವಾಗಿ ಮಲಗುತ್ತಿದ್ದರು. ಈ ರೀತಿ ರೋಗಿಗಳಿಗೆ ಆತ ಇಂಜೆಕ್ಟ್ ಮಾಡಿದ್ದರಿಂದ ರಾತ್ರಿಯಿಡೀ ಅವರಿಗೆ ಆರೈಕೆ ಮಾಡಬೇಕಾಗಿಲ್ಲ ಎಂದು ವಿಚಾರಣೆ ನಡೆಸಿದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಹೆಚ್ಚಿನ ಮಟ್ಟದ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಆತ ಕಿರಿಕಿರಿ ತೋರ್ಪಡಿಸಿದನು ಹಾಗೂ ಸಹಾನುಭೂತಿಯ ಕೊರತೆ ಅವನಲ್ಲಿತ್ತು ಹಾಗೂ ಆತ ಜೀವನ ಮತ್ತು ಸಾವಿನ ಮಾಸ್ಟರ್‌ನಂತೆ ಕೆಲಸ ಮಾಡಿದನು ಎಂದು ನ್ಯಾಯಾಲಯ ಆರೋಪಿಸಿದೆ. ಅಲ್ಲದೇ 15 ವರ್ಷಗಳ ನಂತರವೂ ಅವನನ್ನು ಬೇಗನೆ ಬಿಡುಗಡೆ ಮಾಡುವುಕ್ಕೆ ನ್ಯಾಯಾಲಯ ತಡೆ ನೀಡಿದೆ.
2007 ರಲ್ಲಿ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ್ದಈ ನರ್ಸ್ 2020 ರಿಂದಲೂ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು ಆತನ ಕೆಲಸದ ಪಾಳಿಗಳ ಸಮಯದಲ್ಲಿ ಅಸಾಧಾರಣವಾಗಿ ಹೆಚ್ಚಿನ ರೋಗಿಗಳ ಆರೋಗ್ಯ ಕ್ಷೀಣಿಸುತ್ತಿದ್ದ ಹಿನ್ನೆಲೆ ಸಿಬ್ಬಂದಿ ಮತ್ತು ವೈದ್ಯರು ಅನುಮಾನ ವ್ಯಕ್ತಪಡಿಸಿದ ನಂತರ ಅವನನ್ನು 2024 ರಲ್ಲಿ ಬಂಧಿಸಲಾಯಿತು. ಆತನ ಕೃತ್ಯಗಳ ಬಗ್ಗೆ ಇನ್ನೂ ತನಿಖೆ ನಡೆಯುತ್ತಲೇ ಇದೆ. ಆತನಿಂದ ಇನ್ನೂ ಹೆಚ್ಚಿನ ರೋಗಿಗಳಿಗೆ ಹಾನಿಯಾಗಿದೆಯೇ ಎಂದು ನಿರ್ಧರಿಸಲು ಹಲವಾರು ಶವಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್‌ಗಳು ದೃಢಪಡಿಸಿದ್ದಾರೆ. ಈಗ ಲೆಕ್ಕ ಹಾಕಿದ್ದಲ್ಲದೇ ಇನ್ನೂ ಹೆಚ್ಚುವರಿ ಪ್ರಕರಣಗಳು ದೃಢಪಟ್ಟರೆ, ಈ ನರ್ಸ್ ಇನ್ನಷ್ಟು ಹೆಚ್ಚಿನ ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಶಿಕ್ಷೆಗೊಳಗಾದ ನರ್ಸ್‌ಗೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಇದೆ.
ಈ ಪ್ರಕರಣವು ಜರ್ಮನಿಯಲ್ಲಿ ನಡೆದ ಈ ಹಿಂದಿನ ಕೆಲ ಭೀಕರ ವೈದ್ಯಕೀಯ ಹತ್ಯೆಗಳನ್ನು ನೆನಪು ಮಾಡಿದೆ. 85 ರೋಗಿಗಳನ್ನು ಕೊಂದ ಆರೋಪದ ಮೇಲೆ ಮಾಜಿ ನರ್ಸ್ ನೀಲ್ಸ್ ಹೊಗೆಲ್ ಎಂಬಾತನಿಗೆ 2019 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈತ ಉತ್ತರ ಜರ್ಮನಿಯ ಎರಡು ಆಸ್ಪತ್ರೆಗಳಲ್ಲಿ1999 ಮತ್ತು 2005 ರ ನಡುವೆ ಕೆಲಸ ಮಾಡುತ್ತಿದ್ದಾಗ ತಾನು ಆರೈಕೆ ಮಾಡಬೇಕಾದ ರೋಗಿಗಳಿಗೆ ಮಾರಕ ಪ್ರಮಾಣದ ಹೃದಯದ ಔಷಧಿಗಳನ್ನು ನೀಡಿದ್ದ ಎಂಬುದು ವಿಚಾರಣೆ ವೇಳೆ ಪತ್ತೆಯಾಗಿತ್ತು.
ಇದನ್ನೂ ಓದಿ: ಕ್ಷಮೆ ಕೇಳಿದರೂ ಬಿಡದೆ ಟ್ರೋಲ್: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಯ ವೀಡಿಯೋ ವೈರಲ್ : ಯುವಕ ಸಾವಿಗೆ ಶರಣು
ಇದನ್ನೂ ಓದಿ: ಶಾಂತವಾಗಿದ್ದ ಮುಸ್ಲಿಂ ರಾಷ್ಟ್ರದಲ್ಲೂ ಸ್ಫೋಟ: ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲೇ ಬ್ಲಾಸ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ