Twitter Campaign : ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರಿಂದ ‘ಅಪೀಲ್‌ ಡೇ’

By Kannadaprabha NewsFirst Published Jan 3, 2022, 7:57 AM IST
Highlights
  •  ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರಿಂದ ‘ಅಪೀಲ್‌ ಡೇ’
  •  ಅನಿವಾಸಿ ಕನ್ನಡಿಗರ ಫೋರಂಗೆ ಉಪಾಧ್ಯಕ್ಷರ ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟ್ವೀಟರ್‌ ಅಭಿಯಾನ
  •  ಅಂತಾರಾಷ್ಟ್ರೀಯ ಕನ್ನಡಿಗರ ಒಕ್ಕೂಟ ಸಾರಥ್ಯ
  • 30 ದೇಶಗಳ ಕನ್ನಡಿಗರಿಂದ 20 ಸಾವಿರಕ್ಕೂ ಹೆಚ್ಚು ಟ್ವೀಟ್‌

ದುಬೈ (ಡಿ.03): ಕರ್ನಾಟಕದಿಂದ (karnataka)  ಹೊರಗೆ ವಾಸಿಸುತ್ತಿರುವ ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಅನಿವಾಸಿ ಕನ್ನಡಿಗರು (kannadiga)  ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೋರಿ ಭಾನುವಾರ ವಿಶ್ವಾದ್ಯಂತ ಟ್ವೀಟರ್‌ ಅಭಿಯಾನ (Twitter ) ನಡೆಸಿದರು. ಜನವರಿ 2ನೇ ತಾರೀಖನ್ನು ‘ಎನ್‌ಆರ್‌ಐ ಅಪೀಲ್‌ ಡೇ’ ಎಂದು ಆಚರಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.  ಅಂತಾ ರಾಷ್ಟ್ರೀಯ ಕನ್ನಡಿಗರ ಒಕ್ಕೂಟವು ಟ್ವೀಟರ್‌ ಅಭಿಯಾನ ನಡೆಸಿತು. ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭವಾದ ಅಭಿಯಾನಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳಾಗಿವೆ. ದುಬೈನಲ್ಲಿ (dubai) ನೆಲೆಸಿರುವ ಹಿದಾಯತ್‌ ಅಡ್ಡೂರ್‌ ನೇತೃತ್ವದಲ್ಲಿ ಅಭಿಯಾನ ನಡೆಯಿತು.

30ಕ್ಕೂ ಹೆಚ್ಚು ದೇಶದಿಂದ ಟ್ವೀಟ್‌:  ಎನ್‌ಆರ್‌ಐ (NRI) ಫೋರಂಗೆ ಉಪಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬುದೂ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಕನ್ನಡಪರ ಸಂಘಟನೆಗಳ (Pro Kannada Organisations)  ಸಹಯೋಗದೊಂದಿಗೆ 30ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಟ್ವೀಟ್‌ ಮಾಡಿದ್ದಾರೆ. ಕಳೆದ ವರ್ಷವೂ ಜ.2ರಂದು ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಬೇಡಿಕೆಗಳು ಈಡೇರದ ಪರಿಣಾಮ ಮತ್ತೊಮ್ಮೆ ಟ್ವೀಟರ್‌ ಅಭಿಯಾನ ಆರಂಭಿಸಿದ್ದಾರೆ.

13 ವರ್ಷಗಳ ಹಿಂದೆ ಅನಿವಾಸಿ ಕನ್ನಡಿಗರಿಗೆಂದೇ ಸ್ಥಾಪಿತವಾದ ಕನ್ನಡಿಗರ ಅನಿವಾಸಿ ಭಾರತೀಯ (Indian) ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅವರಿಗೆ ಬಿಡುವಿಲ್ಲದ ಕಾರಣದಿಂದ ಈ ಸಮಿತಿಯ ಕಾರ್ಯಕಲಾಪಗಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಉಪಾಧ್ಯಕ್ಷರಿಗೆ ನೀಡಲಾಗಿದೆ. ಆದರೆ ಕಳೆದ 4 ವರ್ಷಗಳಿಂದ ಉಪಾಧ್ಯಕ್ಷರ ನೇಮಕವೇ ಆಗಿಲ್ಲ. ಉಪಾಧ್ಯಕ್ಷರನ್ನು ನೇಮಿಸಬೇಕೆಂಬುದು ಅನಿವಾಸಿ ಕನ್ನಡಿಗರ ಬೇಡಿಕೆಯಾಗಿದೆ.

ಎಂಬಿಪಾ, ಕ್ಯಾ.ಕಾರ್ಣಿಕ್‌ ಬೆಂಬಲ

ಟ್ವೀಟರ್‌ ಅಭಿಯಾನಕ್ಕೆ ಸ್ಪಂದಿಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್‌ (MB Patil) ‘ಇದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂಬ ಭರವಸೆ ನೀಡಿದ್ದಾರೆ. ರಾಜ್ಯ ಬಿಜೆಪಿ (BJP) ವಕ್ತಾರ ಕ್ಯಾ.ಗಣೇಶ್‌ ಕಾರ್ಣಿಕ್‌, ‘ಇದು ಬಹಳ ಸಮಯದಿಂದ ಈಡೇರದ ಬೇಡಿಕೆಯಾಗಿದೆ. ಹಾಗಾಗಿ ಇದರ ಕುರಿತಾಗಿ ಶೀಘ್ರವಾಗಿ ಸರ್ಕಾರ ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವವರಿಗೆ ವಿಮಾನ ನಿಲ್ದಾಣದಲ್ಲಿ ವಿನಾಕಾರಣ ಕಿರುಕುಳ ನೀಡುವ ಹಲವು ದೂರುಗಳು ಕೇಳಿಬರುತ್ತಿವೆ. ಈ ಕುರಿತು ಸರ್ಕಾರ ಸರಿಯಾದ ನಿಯಮ ರೂಪಿಸಬೇಕು. ಕನ್ನಡಿಗರ (Kannadiga) ಅನಿವಾಸಿ ಭಾರತೀಯ ಸಮಿತಿಗೆ ಶೀಘ್ರ ಉಪಾಧ್ಯಕ್ಷರನ್ನು ನೇಮಿಸಬೇಕು. ಕೋವಿಡ್‌ (Covid)  ಸಮಯದಲ್ಲಿ ಎನ್‌ಆರ್‌ಐಗಳು ಬಹಳ ಕಷ್ಟಕ್ಕೆ ಸಿಲುಕಿದ್ದರು. ಆ ಸಮಯದಲ್ಲಿ ಸರ್ಕಾರವನ್ನು ಸಂಪರ್ಕಿಸಲು ಸರಿಯಾದ ಮಾರ್ಗಗಳಿರಲಿಲ್ಲ. ಹಾಗಾಗಿ ಇದಕ್ಕೆ ಸರಿಯಾದ ಕಾನೂನು ರೂಪಿಸಬೇಕು. ಅನಿವಾಸಿ ಕನ್ನಡಿಗರ ಗುರುತಿನ ಚೀಟಿಯಾಗಿ ಜಾರಿಗೆ ತಂದಿರುವ ‘ಎನ್‌ಒಆರ್‌ಕೆಎ’ ಕಾರ್ಡ್‌ ವಿತರಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.

ಬೇಡಿಕೆ ಈಡೇರುವವರೆಗೆ ಹೋರಾಟ:    ಟ್ವೀಟರ್‌ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಅನಿವಾಸಿಗಳ ಬೇಡಿಕೆ ಈಡೇರಿಸಲು ನಮ್ಮ ಹೋರಾಟ ಟ್ವೀಟರ್‌ಗೆ ಸೀಮಿತವಾಗಿಲ್ಲ. ಮಾಜಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ (Ganesh Karnik) ಖುದ್ದಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಬೇಡಿಕೆಗಳನ್ನು ಸಲ್ಲಿಸಲಿದ್ದಾರೆ. ಬಸವರಾಜ ಬೊಮ್ಮಾಯಿ (Basavaraj Bommai)  ಅವರು ನಮ್ಮ ಬೇಡಿಕೆ ಈಡೇರಿಸುವರೆಂಬ ಆಶಾಭಾವನೆ ಇದೆ. ಭರವಸೆ ಈಡೇರುವವರೆಗೂ ಸರ್ಕಾರಕ್ಕೆ ದಿನನಿತ್ಯ ವಿಭಿನ್ನ ರೀತಿಯಲ್ಲಿ ಬೇಡಿಕೆಗಳನ್ನು ನೆನಪಿಸುತ್ತಿರುತ್ತೇವೆ.

 ಹಿದಾಯತ್‌ ಅಡ್ಡೂರ್‌, ಸಂಚಾಲಕ, ಅಂತಾರಾಷ್ಟ್ರೀಯ ಕನ್ನಡಿಗರ ಒಕ್ಕೂಟ

click me!