* ಯುರೋಪ್‌ನ ದ್ವೀಪ ದೇಶ ಸೈಪ್ರಸ್‌ನಲ್ಲಿ ಬೆಳಕಿಗೆ
* ಡೆಲ್ಟಾ, ಒಮಿಕ್ರೋನ್ ಸಮ್ಮಿಶ್ರಣದ ವೈರಸ್ ಇದು
* ಈ ರೂಪಾಂತರಿ ಬಗ್ಗೆ ಆತಂಕ ಅನಗತ್ಯ
ನಿಕೋಸಿಯಾ(ಜ.10): ಜಗತ್ತು ಡೆಲ್ಟಾ ಹಾಗೂ ಒಮಿಕ್ರೋನ್(Omicron) ಕೋವಿಡ್ ತಳಿಗಳ ಹಾವಳಿಯಿಂದ ತತ್ತರಿಸುತ್ತಿರುವಾಗಲೇ ಕೊರೋನಾ ವೈರಸ್‌ನ ಮತ್ತೊಂದು ರೂಪಾಂತರಿ ತಳಿ ‘ಡೆಲ್ಟಾಕ್ರೋನ್’(Deltacron) ಪತ್ತೆಯಾಗಿದೆ. ಯುರೋಪ್(Europe) ಖಂಡದ ದ್ವೀಪ ದೇಶ ಸೈಪ್ರಸ್ ವಿಜ್ಞಾನಿಗಳು(Cyprus Scientists) ಈ ಹೊಸ ತಳಿ ಪತ್ತೆ ಹಚ್ಚಿದ್ದಾರೆ. ಈ ವೈರಸ್‌ನಲ್ಲಿ ಡೆಲ್ಟಾಮತ್ತು ಒಮಿಕ್ರೋನ್ ಎರಡೂ ತಳಿಗಳ ಕೆಲ ಗುಣಗಳಿವೆ.
ಸೈಪ್ರಸ್‌ನಲ್ಲಿ ಕೋವಿಡ್ ದೃಢಪಟ್ಟ 25 ರೋಗಿಗಳ ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಿದಾಗ ಅವರ ಪೈಕಿ ಕೆಲವರಲ್ಲಿ ಡೆಲ್ಟಾಮತ್ತು ಒಮಿಕ್ರೋನ್ ರೂಪಾಂತರಿ ತಳಿಗಳ ಒಂದಷ್ಟು ಗುಣಗಳ ಮಿಶ್ರಣವಿರುವ ವೈರಸ್ ಪತ್ತೆಯಾಗಿದೆ. ಇದಕ್ಕೆ ‘ಡೆಲ್ಟಾಕ್ರೋನ್’ ಎಂದು ವಿಜ್ಞಾನಿಗಳು ಕರೆದಿದ್ದಾರಾದರೂ, ಅಧಿಕೃತವಾಗಿ ಇನ್ನೂ ಹೆಸರು ಇಟ್ಟಿಲ್ಲ. ಇನ್ನು, ತಕ್ಷಣಕ್ಕೆ ಈ ರೂಪಾಂತರಿ ತಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಕುರಿತು ಅಧ್ಯಯನ ನಡೆಸಿದ ಸೈಪ್ರಸ್ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.
Coronavirus : ನಾವಂದುಕೊಂಡಂತಿಲ್ಲ ಓಮಿಕ್ರೋನ್, WHO ಕೊಟ್ಟ ಶಾಕಿಂಗ್ ಮಾಹಿತಿ
‘ಹೊಸ ರೂಪಾಂತರಿ ತಳಿಯಲ್ಲಿ ಡೆಲ್ಟಾ ತಳಿಯ ಕೆಲ ಜೆನೆಟಿಕ್ ಗುಣಗಳು ಹಾಗೂ ಒಮಿಕ್ರೋನ್ ತಳಿಯ ಕೆಲ ಜೆನೆಟಿಕ್ ಗುಣಗಳು ಮಿಶ್ರಿತವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ’ ಎಂದು ಸೈಪ್ರಸ್‌ನ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಪತ್ತೆಯಾಗಿದ್ದೇಗೆ?
- ಸೈಪ್ರಸ್‌ನಲ್ಲಿ ಕೋವಿಡ್ ಸೋಂಕಿತ 25 ಮಂದಿಯ ಜೀನೋಮ್ ಸೀಕ್ವೆನ್ಸಿಂಗ್
- ಕೆಲವರಲ್ಲಿ ಡೆಲ್ಟಾ, ಒಮಿಕ್ರೋನ್ ರೂಪಾಂತರಿಗಳ ಒಂದಷ್ಟು ಗುಣಗಳು ಪತ್ತೆ
- ಎರಡೂ ರೂಪಾಂತರಿಗಳ ವಂಶವಾಹಿ ಗುಣಗಳು ಮಿಶ್ರವಾಗಿರುವುದು ಬೆಳಕಿಗೆ
- ‘ಡೆಲ್ಟಾಕ್ರೋನ್’ ಎಂದು ತಾತ್ಕಾಲಿಕ ನಾಮಕರಣ ಮಾಡಿದ ಸೈಪ್ರಸ್ ವಿಜ್ಞಾನಿಗಳು
- ತಕ್ಷಣಕ್ಕೆ ಈ ರೂಪಾಂತರಿ ಬಗ್ಗೆ ಆತಂಕ ಅನಗತ್ಯ ಎನ್ನುತ್ತಾರೆ ಸೈಪ್ರಸ್ ವಿವಿ ತಜ್ಞರು
ಒಮಿಕ್ರೋನ್ ಡೆಲ್ಟಾಗಿಂತ ಶೇ.105ರಷ್ಟು ವೇಗವಾಗಿ ಹಬ್ಬುತ್ತೆ: ಅಧ್ಯಯನ ವರದಿ
ಪ್ಯಾರಿಸ್: ಕೋವಿಡ್ 19(Covid19) ರ ಹೊಸ ರೂಪಾಂತರಿ ಒಮಿಕ್ರೋನ್ ಡೆಲ್ಟಾಕ್ಕಿಂತ ಶೇ.105 ರಷ್ಟು ವೇಗವಾಗಿ ಹರಡುತ್ತದೆ ಎಂಬುದು ಫ್ರೆಂಚ್ ವಿಜ್ಞಾನಿಗಳು(French Scientists) ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಈ ಹಿಂದಿನ ವರದಿಗಳು ಶೇ.70ರಷ್ಟು ಹೆಚ್ಚು ವೇಗವಾಗಿ ಹಬ್ಬುತ್ತದೆ ಎಂದಿದ್ದರು.
ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್ ವೈರಸ್ ತೀವ್ರತೆ ಕಡಿಮೆಯಾಗಿದ್ದರೂ ವೇಗವಾಗಿ ದ್ವಿಗುಣಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಡೆಲ್ಟಾಕ್ಕಿಂತ ವೇಗವಾಗಿ ಮೇಲ್ಭಾಗದ ಶ್ವಾಸೇಂದ್ರಿಯ ಪದರದ ಮೇಲೆ ದಾಳಿ ಮಾಡುತ್ತದೆ ಆದರೆ ಶ್ವಾಸಕೋಶಗಳಿಗೆ ಗಂಭೀರ ಸ್ವರೂಪದಲ್ಲಿ ಘಾಸಿ ಮಾಡುವಷ್ಟುಶಕ್ತಿಶಾಲಿಯಾಗಿಲ್ಲ. ಹೀಗಾಗಿ ಈ ಮೊದಲಿನ ರೂಪಾಂತರಿಗಳಿಗೆ ಹೋಲಿಸಿದರೆ ಒಮಿಕ್ರೋನ್‌ನಿಂದ ಜನರು ಗಂಭೀರ ಸ್ವರೂಪದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ. ಆದರೆ ಡೆಲ್ಟಾಗಿಂತ(Delta) ಹೆಚ್ಚಿನ ಪ್ರಮಾಣದಲ್ಲಿ ಯುವಕರು ಒಮಿಕ್ರೋನ್ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಮೆಡ್ ರಿಕ್ಸಿವ್ ವೆಬ್‌ಸೈಟಿನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಫ್ರಾನ್ಸ್‌ನಲ್ಲಿ(France) ನಡೆಸಿದ 131,478 ಕೋವಿಡ್ ಪರೀಕ್ಷೆಗಳ ಅಲ್ಫಾ, ಡೆಲ್ಟಾಹಾಗೂ ಒಮಿಕ್ರೋನ್‌ನ ಜಿನೋಮ್ ಸೀಕ್ವೆನ್ಸಿಂಗ್ ಮಾದರಿಯ ಆಧಾರದ ಮೇಲೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
chinese xian city lockdown: ಚೀನಾದ ಕ್ಸಿಯಾನ್ ನಗರ ಸಂಪೂರ್ಣ ಬಂದ್, ವೈರಸ್ ಹಬ್ಬಲು ಕಾರಣ ಪಾಕಿಸ್ತಾನ!
ಅಮೆರಿಕದಲ್ಲಿ ಆಸ್ಪತ್ರೆ ದಾಖಲು ಪ್ರಮಾಣ ಹೆಚ್ಚಳ
ವಾಷಿಂಗ್ಟನ್: ಒಮಿಕ್ರೋನ್ ರೂಪಾಂತರಿ ವೈರಸ್‌ನಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ(Amercia) ಆಸ್ಪತ್ರೆ ದಾಖಲಾಗುವವರ ಪ್ರಮಾಣ ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ ಬಾರಿ ಡೆಲ್ಟಾರೂಪಾಂತರಿ ಸೃಷ್ಟಿಸಿದ್ದ ಭೀಕರ ವಾತಾವರಣವನ್ನೇ ಒಮಿಕ್ರೋನ್ ಸಹ ಸೃಷ್ಟಿಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಳೆದ 7 ದಿನಗಳ ಸರಾಸರಿಯಂತೆ 1.23 ಲಕ್ಷ ಮಂದಿ ಆಸ್ಪತ್ರೆಗೆ(Hospital) ದಾಖಲಾಗಿದ್ದಾರೆ. ಕಳೆದ ವರ್ಷ ಡೆಲ್ಟಾಭೀಕರ ಅಲೆ ಸೃಷ್ಟಿಸಿದ್ದಾಗ 1.32 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಒಮಿಕ್ರೋನ್ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ಆದರೆ ವೈರಸ್‌ನಿಂದ ಮೃತಪಡುವವರ ಪ್ರಮಾಣ ಕಡಿಮೆ ಇದೆ. ದೇಶದಲ್ಲಿ ಡೆಲ್ಟಾಜಾಗವನ್ನು ಒಮಿಕ್ರೋನ್ ಆಕ್ರಮಿಸುತ್ತಿದ್ದು, ಡಿಸೆಂಬರ್ ನಂತರ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದಾಗ್ಯೂ ಒಮಿಕ್ರೋನ್ ಡೆಲ್ಟಾಗಿಂತ ಸೌಮ್ಯ ವೈರಸ್ ಎಂದು ಸಾಬೀತಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಅಮೆರಿಕದಲ್ಲಿ 6.62 ಲಕ್ಷ ಹೊಸ ಕೇಸ್ ದೃಢಪಟ್ಟಿವೆ.
ಮಕ್ಕಳಲ್ಲೂ ಸೋಂಕು ಹೆಚ್ಚಳ:
ಅಮೆರಿಕದಲ್ಲಿ ಕಳೆದ ವಾರದಿಂದ ಈಚೆಗೆ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳು ಹೆಚ್ಚಾಗಿ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮಕ್ಕಳು ಆಸ್ಪತ್ರೆ ಸೇರುವ ಪ್ರಮಾಣ ಸಹ ಹೆಚ್ಚಾಗಿದೆ. ದೇಶದಲ್ಲಿ ಶೇ.50 ರಷ್ಟು 12-18 ವರ್ಷದ ಮಕ್ಕಳು , 5-11 ವರ್ಷದ ಶೇ.16ರಷ್ಟು ಮಕ್ಕಳು ಮಾತ್ರ ಪೂರ್ಣ ಲಸಿಕೆ ಪಡೆದಿದ್ದಾರೆ.