‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

By Kannadaprabha NewsFirst Published May 25, 2020, 10:05 AM IST
Highlights

ಅಮೆರಿಕ ನಮ್ಮನ್ನು ಹೊಸ ಶೀತಲ ಸಮರಕ್ಕೆ ತಳ್ಳುತ್ತಿದೆ: ಚೀನಾ| ‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

ಬೀಜಿಂಗ್(ಮೇ.25)‌: ಚೀನಾ ಜೊತೆಗಿನ ಸಂಬಂಧವನ್ನು ಅಮೆರಿಕವು ಹೊಸ ಶೀತಲ ಸಮರದತ್ತ ತಳ್ಳುತ್ತಿದೆ. ಕೊರೋನಾ ವೈರಸ್‌ ನಡುವೆಯೇ ಚೀನಾದ ಮೇಲೆ ರಾಜಕೀಯ ವೈರಸ್‌ನ ದಾಳಿ ಆರಂಭವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಕಿಡಿಕಾರಿದ್ದಾರೆ.

ಕೊರೋನಾ ಬಿಕ್ಕಟ್ಟಿನ ವಿಷಯದಲ್ಲಿ ಚೀನಾ ವಿರುದ್ಧ ರೂಪುಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಅಭಿಪ್ರಾಯಗಳು, ಹಾಂಗ್‌ಕಾಂಗನ್ನು ನಿಯಂತ್ರಿಸಲು ಚೀನಾ ಹೊಸ ಕಾಯ್ದೆ ಜಾರಿಗೆ ತರುತ್ತಿರುವುದು, ವಾಣಿಜ್ಯ ಸಮರ ಇತ್ಯಾದಿ ವಿಷಯಗಳಲ್ಲಿ ಇತ್ತೀಚೆಗೆ ಚೀನಾ ಇಕ್ಕಟ್ಟಿಗೆ ಸಿಲುಕಿದೆ. ಅಮೆರಿಕವಂತೂ ಚೀನಾ ವಿರುದ್ಧ ಪದೇಪದೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖಾರ ಪ್ರತಿಕ್ರಿಯೆ ನೀಡಿರುವ ಚೀನಾ ಸರ್ಕಾರ, ಅಮೆರಿಕದಲ್ಲಿನ ಕೆಲ ರಾಜಕೀಯ ಶಕ್ತಿಗಳು ನಮ್ಮನ್ನು ಶೀತಲ ಸಮರದತ್ತ ನೂಕುತ್ತಿವೆ ಎಂದು ಹೇಳಿದೆ.

ಚೀನಾ ಮೇಲೆ ‘ದಾಳಿ’ ನಡೆಸಲು ಹಾಗೂ ಚೀನಾ ವಿರುದ್ಧ ಅಪಪ್ರಚಾರ ನಡೆಸಲು ವಾಷಿಂಗ್ಟನ್‌ನಿಂದ ಪದೇಪದೇ ಪ್ರಯತ್ನ ನಡೆಯುತ್ತಿದೆ. ಕೊರೋನಾ ವೈರಸ್‌ನಿಂದ ಆಗಿರುವ ಹಾನಿಯ ಜೊತೆಗೆ ಅಮೆರಿಕ ಈಗ ರಾಜಕೀಯ ವೈರಸ್ಸನ್ನು ಹರಡುತ್ತಿದೆ. ಚೀನಾಕ್ಕೆ ಕೆಟ್ಟಹೆಸರು ತರಲು ಹಾಗೂ ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಲು ಲಭಿಸುವ ಯಾವುದೇ ಅವಕಾಶವನ್ನೂ ಅಮೆರಿಕ ಕೈಬಿಡುತ್ತಿಲ್ಲ.

ಚೀನಾ ವಿರುದ್ಧ ಕೆಲ ರಾಜಕಾರಣಿಗಳು ಕಟ್ಟುಕತೆ ಹಾಗೂ ಸುಳ್ಳುಗಳನ್ನು ಹರಡುತ್ತಿದ್ದಾರೆ. ಚೀನಾ ವಿರುದ್ಧ ಸಾಕಷ್ಟುಷಡ್ಯಂತ್ರಗಳನ್ನು ರೂಪಿಸಿದ್ದಾರೆ. ಕೊರೋನಾ ವೈರಸ್‌ನ ಸಂತ್ರಸ್ತನಾಗಿರುವ ಚೀನಾವನ್ನೇ ಕೆಲವರು ವಿಶ್ವಾಸಾರ್ಹತೆಯ ಹೆಸರಿನಲ್ಲಿ ಬಲಿಪಶು ಮಾಡುತ್ತಿದ್ದಾರೆ. ಚೀನಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಯತ್ನಿಸುತ್ತಿರುವುದು ಹೇಯ ಕೃತ್ಯ ಎಂದು ವಾಂಗ್‌ ಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!