Nepal Floods: 3 ದಶಕದ ಭೀಕರ ಪ್ರವಾಹಕ್ಕೆ ಪುಟ್ಟ ದೇಶ ತತ್ತರ, 400ರ ಗಡಿಯ ಸನಿಹ ಸಾವಿನ ಸಂಖ್ಯೆ

Published : Aug 28, 2026, 06:19 AM IST
Nepal Floods

ಸಾರಾಂಶ

ಕಳೆದ ಮೂರೂವರೆ ದಶಕಗಳಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿರುವ ನೇಪಾಳದಲ್ಲಿ 360ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ನಾಪತ್ತೆಯಾಗಿದ್ದಾರೆ. ಈ ದುರಂತದಲ್ಲಿ ಕರ್ನಾಟಕದ 8 ಮಂದಿ ಸಿಲುಕಿದ್ದು, ಅವರ ರಕ್ಷಣೆಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ತೆರೆದಿದೆ.

ಕಾಠ್ಮಂಡು (ಆ.28): ಕಳೆದ ಮೂರೂವರೆ ದಶಕಗಳಲ್ಲೇ ಭೀಕರ ಭೀಕರ ಪ್ರವಾಹಕ್ಕೆ ಸಿಲುಕಿರುವ ನೇಪಾಳದಲ್ಲಿ ಮೃತಪಟ್ಟವರ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಹೆಚ್ಚು ಜನ ನಾಪತ್ತೆ ಆಗಿದ್ದಾರೆ. ದುರಂತದಲ್ಲಿ ನಾಪತ್ತೆಯಾಗಿರುವ 288 ಭಾರತೀಯರು ಸೇರಿದಂತೆ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ದೇಶದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ನೈಸರ್ಗಿಕ ದುರಂತವಾಗಿ ಮಾರ್ಪಟ್ಟಿದೆ.

ಬುಧವಾರ ಸಂಭವಿಸಿದ ಈ ಜಲಪ್ರಳಯವು ನೇಪಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ. ಗುರುವಾರ ಕಾರ್ಯಾಚರಣೆ ವೇಳೆ ಮತ್ತಷ್ಟು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ. ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಾಫ್ಲೆ ನೀಡಿರುವ ಮಾಹಿತಿಯಂತೆ ಚಿತ್ವಾನ್‌ನಲ್ಲಿ 108, ನವಲ್‌ಪರಾಸಿ ಪೂರ್ವದಲ್ಲಿ 62, ಧಾಡಿಂಗ್‌ನಲ್ಲಿ 27, ಗೋರ್ಖಾದಲ್ಲಿ 20, ರಸುವಾದಲ್ಲಿ 17, ನವಲ್‌ಪರಾಸಿ ವೆಸ್ಟ್‌ನಲ್ಲಿ 15, ನುವಾಕೋಟ್‌ನಲ್ಲಿ 12 ಹಾಗೂ ತನಹುನ್‌ನಲ್ಲಿ 9 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

800 ಜನರ ರಕ್ಷಣೆ: ಇನ್ನು ದುರಂತದಿಂದಾಗಿ 35 ಸೇತುವೆಗಳು, 45 ತೂಗುಸೇತುವೆಗಳು ಹಾಗೂ 40 ಕಿ.ಮೀ.ಗೂ ಹೆಚ್ಚು ಉದ್ದದ ಮುಖ್ಯ ರಸ್ತೆಗಳು ಕೊಚ್ಚಿಹೋಗಿವೆ. ಕಾಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ದೇಶದ ಪ್ರಮುಖ ರಸ್ತೆ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ. ಸದ್ಯ ರಕ್ಷಣಾ ಪಡೆಗಳು 800ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರವಾಹಪೀಡಿತ ಪ್ರದೇಶಗಳಿಗೆ ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಸುನಿಲ್ ಲಮ್ಶಾಲ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಶದ 80 ಯಾತ್ರಿಕರು ಕಣ್ಮರೆ: ಸದ್ಗುರು ಕಣ್ಣೀರು

ಕಾಠ್ಮಂಡು: ನೇಪಾಳ ಭೀಕರ ಪ್ರವಾಹದಲ್ಲಿ ಈಶ ಫೌಂಡೇಶನ್‌ ತಂಡದ 80 ಯಾತ್ರಿಕರು ನಾಪತ್ತೆಯಾದ ಘಟನೆ ನೆನೆದು ಸದ್ಗರು ಕಣ್ಣೀರು ಸುರಿಸಿದ ಘಟನೆ ಗುರುವಾರ ನಡೆದಿದೆ. ನಾಪತ್ತೆಯಾದವರ ಕುರಿತು ಮಾಹಿತಿ ವೇಳೆ ಅವರು ಗದ್ಗದಿತರಾದರು.

ನೇಪಾಳ ಪ್ರವಾಹದಲ್ಲಿ ಸಿಕ್ಕಿಬಿದ್ದ 8 ಕನ್ನಡಿಗರು, ಕನ್ನಡಿಗರ ರಕ್ಷಣೆಗೆ ಸರ್ಕಾರದ ಕ್ರಮ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕ ಮೂಲ ಪ್ರವಾಸಿಗರು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ನೇಪಾಳ ರಾಜಧಾನಿ ಕಠ್ಮಂಡುಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನೇಪಾಳದಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ರಾಜ್ಯದ ನಿವಾಸಿಗಳು ಸಿಲುಕಿರುವ ಶಂಕೆಯಿದೆ. ಸದ್ಯ ಬೆಂಗಳೂರು ಮೂಲದ 8 ಮಂದಿ ನೇಪಾಳದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಅವರ ಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ. ಹೀಗಾಗಿಯೇ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಸಂತ್ರಸ್ತರು ಮತ್ತು ಅವರ ಕುಟುಂಬದವರಿಗೆ ನೆರವು ನೀಡುವ ಉದ್ದೇಶದೊಂದಿಗೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆದಿದೆ.

ಅದರ ಪ್ರಕಾರ ಸಾರ್ವಜನಿಕರು 1070 (ಟೋಲ್‌ಫ್ರೀ) ಅಥವಾ 080 2253707ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಕರೆ ಮಾಡಲು ಸಾಧ್ಯವಾಗದಿದ್ದರೆ seockarnataka@gmail.com ಈಮೇಲ್‌ಗೆ ಸಂತ್ರಸ್ತರ ಮಾಹಿತಿಯನ್ನು ಕಳುಹಿಸಬಹುದಾಗಿದೆ. ನೇಪಾಳದಲ್ಲಿ ಕುಟುಂಬದವರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕೆಯಿದ್ದರೆ ಅವರ ಪೂರ್ಣ ಹೆಸರು, ಮೊಬೈಲ್‌ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ, ಸಮಯ ಮತ್ತು ಖಾಯಂ ವಿಳಾಸದ ವಿವರಗಳೊಂದಿಗೆ ಮಾಹಿತಿಯನ್ನು ನೀಡಬೇಕು ಎಂದು ಸರ್ಕಾರ ಕೋರಿದೆ.

8 ಜನರು ಸಿಲುಕಿರುವ ಮಾಹಿತಿ

ನೇಪಾಳದ ಮಾನಸ ಸರೋವರಕ್ಕೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಸೇರಿ ಕರ್ನಾಟಕ ಮೂಲದ ಒಟ್ಟು 8 ಮಂದಿ ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಅವರ ಜತೆಗೆ ಇನ್ನಷ್ಟು ಜನರು ನೇಪಾಳದಲ್ಲಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರುವ ಅನುಮಾನವಿದೆ. ಹೀಗಾಗಿ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಪಾಳಕ್ಕೆ ಕಳುಹಿಸಲು ಮುಂದಾಗಿದೆ.

ನೇಪಾಳದಲ್ಲಿನ ಕನ್ನಡಿಗರ ಮಾಹಿತಿ ಪಡೆಯಲು ಕೇಂದ್ರ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ನಾಪತ್ತೆ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ದೊರೆತ ಕೂಡಲೇ ಅದನ್ನು ಕೇಂದ್ರ ಸಚಿವಾಲಯಗಳಿಗೆ ಕಳುಹಿಸಿ ಪತ್ತೆಗೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ರಹ್ಮಪುತ್ರ ನದಿಗೆ ಚೀನಾದಿಂದ ವಿಶ್ವದ ಅತೀ ದೊಡ್ಡ ಡ್ಯಾಂ: ಈಶಾನ್ಯ ಭಾರತಕ್ಕೆ ನೇಪಾಳದಂತೆಯೇ ಜಲಸ್ಫೋಟದ ಎಚ್ಚರಿಕೆ!
ಮಾಜಿ ಕೇಂದ್ರ ಸಚಿವರ ಸೊಸೆ ನೇಪಾಳ ಪ್ರವಾಹದಲ್ಲಿ ನಾಪತ್ತೆ, ಜೊತೆಯಲ್ಲಿದ್ದ 31 ಯಾತ್ರಿಕರೂ ಮಿಸ್ಸಿಂಗ್