ಮಂಗಳನ ಮೇಲೆ ನಾಸಾ ರೋವರ್‌ ಇಳಿಸಿದ್ದು ಬೆಂಗಳೂರಿನ ಸ್ವಾತಿ! ಬಿಂದಿ ಫೋಟೊ ವೈರಲ್

By Kannadaprabha News  |  First Published Feb 20, 2021, 7:50 AM IST

 ನಾಸಾ ಕಳುಹಿಸಿದ ‘ಪರ್ಸೀವರೆನ್ಸ್‌’ ರೋವರ್‌ ಯಶಸ್ವಿಯಾಗಿ ಕೆಂಪು ಗ್ರಹದ ಮೇಲೆ ಇಳಿದಿದೆ. ವಿಶೇಷವೆಂದರೆ, ನಾಸಾ ಪರವಾಗಿ ಅತ್ಯಾಧುನಿಕ ರೋವರನ್ನು ಇಳಿಸಿದವರು ಬೆಂಗಳೂರು ಮೂಲದ ವಿಜ್ಞಾನಿ


 ವಾಷಿಂಗ್ಟನ್‌ (ಫೆ.20):  ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವೇ ಎಂಬುದನ್ನು ಪತ್ತೆಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿದ ‘ಪರ್ಸೀವರೆನ್ಸ್‌’ ರೋವರ್‌ ಯಶಸ್ವಿಯಾಗಿ ಕೆಂಪು ಗ್ರಹದ ಮೇಲೆ ಇಳಿದಿದೆ. ವಿಶೇಷವೆಂದರೆ, ನಾಸಾ ಪರವಾಗಿ ಅತ್ಯಾಧುನಿಕ ರೋವರನ್ನು ಇಳಿಸಿದವರು ಬೆಂಗಳೂರು ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್‌. 

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಮೋಹನ್‌ ಹಾಗೂ ಜ್ಯೋತಿ ಅವರ ಪುತ್ರಿಯಾಗಿರುವ ಸ್ವಾತಿ, ನಾಸಾದಲ್ಲಿ ‘ಜಿಎನ್‌ ಅಂಡ್‌ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್‌ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Tap to resize

Latest Videos

undefined

ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್, 400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..!

ಸ್ವಾತಿ 1 ವರ್ಷದ ಮಗುವಾಗಿದ್ದಾಗಲೇ ಅವರ ತಂದೆ-ತಾಯಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಉತ್ತರ ವರ್ಜೀನಿಯಾ ಹಾಗೂ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಬೆಳೆದ ಸ್ವಾತಿ, ಕಾರ್ನೆಲ್‌ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್‌ ಮತ್ತು ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ, ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ)ಯಲ್ಲಿ ಏರೋನಾಟಿಕ್ಸ್‌/ ಆಸ್ಟ್ರೋನಾಟಿಕ್ಸ್‌ ವಿಷಯದಲ್ಲಿ ಎಂ.ಎಸ್‌. ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ನಾಸಾದಿಂದ ಶನಿ ಗ್ರಹಕ್ಕೆ ಕ್ಯಾಸಿನಿ ನೌಕೆಯನ್ನು ಕಳುಹಿಸಿದ ಯೋಜನೆಯಲ್ಲಿ, ಚಂದ್ರನಲ್ಲಿಗೆ ಗ್ರೇಲ್‌ ನೌಕೆಯನ್ನು ಕಳುಹಿಸಿದ ಯೋಜನೆಯಲ್ಲೂ ಇವರು ಕೆಲಸ ಮಾಡಿದ್ದಾರೆ. 2013ರಲ್ಲಿ ಆರಂಭವಾದ ನಾಸಾದ ಮಂಗಳಯಾನ-2020 ಯೋಜನೆಯಲ್ಲಿ ಶುರುವಿನಿಂದಲೂ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಜೊತೆಗೆ ಬಲವಾದ ನಂಟು ಹೊಂದಿರುವ ಸ್ವಾತಿ, ಪ್ರತಿ ಮೂರ್ನಾಲ್ಕು ವರ್ಷಕ್ಕೊಮ್ಮೆ ಇಲ್ಲಿಗೆ ಬಂದುಹೋಗುತ್ತಾರೆ. ಸ್ವಾತಿಯವರ ಅಪ್ಪ-ಅಮ್ಮ ಬೆಂಗಳೂರಿನಲ್ಲಿ ಮನೆ ಹೊಂದಿದ್ದು, ವರ್ಷದಲ್ಲಿ ಕೆಲ ಕಾಲ ಇಲ್ಲೇ ನೆಲೆಸುತ್ತಾರೆ. ಅಲ್ಲದೆ ಬೆಂಗಳೂರು ಹಾಗೂ ಭಾರತದ ಅನೇಕ ಭಾಗಗಳಲ್ಲಿ ಇವರ ಸಂಬಂಧಿಕರಿದ್ದಾರೆ. ಸ್ವಾತಿ ಅವರ ಪತಿ ಸಂತೋಷ್‌ ಅಮೆರಿಕದಲ್ಲಿ ಮಕ್ಕಳ ರೋಗ ತಜ್ಞರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಸ್ವಾತಿ ಮೋಹನ್ ಪ್ರೊಫೈಲ್ ಇಲ್ಲಿದೆ

ಟೀವಿ ಶೋ ನೋಡಿ ಬಾಹ್ಯಾಕಾಶ ವಿಜ್ಞಾನಿಯಾದೆ
ನಾನು 9 ವರ್ಷದ ಹುಡುಗಿಯಾಗಿದ್ದಾಗ ಸ್ಟಾರ್‌ ಟ್ರೆಕ್‌ ಎಂಬ ಟೀವಿ ಶೋ ನೋಡುತ್ತಿದ್ದೆ. ಆಗ ನನಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಕುತೂಹಲ ಮೂಡಿತು. ಮನುಷ್ಯ ಇನ್ನೂ ಕಾಲಿಡದ ಪ್ರದೇಶಗಳ ಸುಂದರ ಚಿತ್ರಗಳನ್ನು ನೋಡಿ ನಾನು ಮುಂದೆ ಇಂತಹ ತಾಣಗಳ ಬಗ್ಗೆ ಸಂಶೋಧನೆ ನಡೆಸಬೇಕೆಂದು ನಿರ್ಧರಿಸಿದ್ದೆ. 16ನೇ ವರ್ಷದಲ್ಲಿ ಭೌತಶಾಸ್ತ್ರ ಓದಲು ಆರಂಭಿಸಿದಾಗ ಈ ನಿರ್ಧಾರ ಗಟ್ಟಿಯಾಯಿತು. ನಂತರ ಒಳ್ಳೆಯ ಶಿಕ್ಷಕರು ದೊರೆತರು. ಬಾಹ್ಯಾಕಾಶ ವಿಜ್ಞಾನದ ಕುರಿತ ನನ್ನ ಕನಸಿನ ಬೆನ್ನತ್ತಿ ಇಲ್ಲಿಯವರೆಗೆ ಬಂದು ತಲುಪಿದ್ದೇನೆ.

- ಡಾ.ಸ್ವಾತಿ ಮೋಹನ್‌, ನಾಸಾ ವಿಜ್ಞಾನಿ

ಹಣೆಯಲ್ಲಿ ಬಿಂದಿ ಫೋಟೋ ವೈರಲ್‌
ನಾಸಾ ರೋವರ್‌ ಮಂಗಳ ಗ್ರಹದ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಸ್ವಾತಿ ಮೋಹನ್‌, ನಾಸಾ ಕಚೇರಿಯಿಂದ ನಿರ್ವಹಿಸಿದ್ದರು. ಈ ವೇಳೆ ಅವರು ಹಣೆಯಲ್ಲಿ ಭಾರತೀಯ ಸಂಪ್ರದಾಯದಂತೆ ಹಣೆಬೊಟ್ಟು (ಬಿಂದಿ) ಇಟ್ಟುಕೊಂಡಿದ್ದು ಗಮನ ಸೆಳೆದಿದೆ. ಈ ಕುರಿತ ಫೋಟೋ ಭಾರೀ ವೈರಲ್‌ ಆಗಿದೆ.

click me!