
ಸಿಡ್ನಿ (ಏ.15): ಇಲ್ಲಿನ ವೆಸ್ಟ್‌ನಲ್ಲಿರುವ ವೇಕ್ಲಿಯಲ್ಲಿನ ಚರ್ಚ್ ಒಂದರಲ್ಲಿ ಧರ್ಮೋಪದೇಶ ಸಮಾರಂಭ ನಡೆಯುತ್ತಿದ್ದಾಗ ಉಪದೇಶ ಮಾಡುತ್ತಿದ್ದ ಬಿಷಪ್ ಮೇಲೆ ಏಕಾಏಕಿ ಕಿಡಿಗೇಡಿಗಳು ಚೂರಿಯಿಂದ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಹಲವರಿಗೆ ಕಿಡಿಗೇಡಿಗಳು ಇರಿದಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಬಗ್ಗೆ ವರದಿಯಾಗಿಲ್ಲ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಡ್ನಿ ಮಾಲ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಇರಿದ ಹಂತಕ: 9 ತಿಂಗಳ ಮಗುವನ್ನು ಅಪರಿಚಿತರ ಕೈಗಿಟ್ಟು ಪ್ರಾಣ ಬಿಟ್ಟ ತಾಯಿ
ವೇಕ್ಲಿಯಲ್ಲಿರುವ ಕ್ರೈಸ್ಟ್ ದಿ ಗುಡ್ ಶೆಫರ್ಡ್ ಚರ್ಚ್‌ನಲ್ಲಿ ಬಿಷಪ್ ಲೈವ್ ನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಬಿಷಪ್ ಆರೋಗ್ಯ ಸ್ಥಿತಿ ಗಂಭೀರವಿದ್ದು, ಗಾಯಗೊಂಡವರಲ್ಲಿ 60, 50, 30 ಮತ್ತು 20 ವರ್ಷ ವಯಸ್ಸಿನ ನಾಲ್ವರು ಪುರುಷರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಮಾಲ್ ನಲ್ಲಿ ನಡೆದಿದ್ದ ದಾಳಿಗೆ 6 ಮಂದಿ ಸಾವು:
ಸಿಡ್ನಿಯ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್ ಶಾಪಿಂಗ್ ಸೆಂಟರ್‌ನಲ್ಲಿ ಆರು ಮಂದಿಯನ್ನು ಇರಿದು ಕೊಂದ ಮೂರು ದಿನಗಳ ಅಂತರದಲ್ಲಿ ಈ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ನಗರದ ಬೋಂದಿ ಜಂಕ್ಷನ್ ಬಳಿಯಿರುವ ವೆಸ್ಟ್‌ಫೀಲ್ಡ್ ಶಾಪಿಂಗ್ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಇರಿಯುವ ಮೂಲಕ ಆರು ಮಂದಿಯ ದಾರುಣ ಸಾವಿಗೆ ಕಾರಣನಾಗಿದ್ದ ಇದು ಇಡೀ ಸಿಡ್ನಿಯನ್ನು ತಲ್ಲಗೊಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಚರ್ಚ್‌ನಲ್ಲಿ ದಾಳಿಯಾಗಿದೆ.
ಸಿಡ್ನಿಯ ಶಾಪಿಂಗ್ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದ ವ್ಯಕ್ತಿ, ಐವರ ಸಾವು!
ವೆಸ್ಟ್‌ಫೀಲ್ಡ್ ಶಾಪಿಂಗ್ ಮಾಲ್ ನಲ್ಲಿ ದಾಳಿ ಮಾಡಿದ ವ್ಯಕ್ತಿ ಜೊಯೆಲ್ ಕಾಚಿ (40) ಎಂಬಾತನಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಆತ ಚಾಕುವಿನಿಂದ ಇರಿಯುತ್ತಿದ್ದ ವೇಳೆ ತುರ್ತು ಕರೆಗೆ ಸ್ಪಂದಿಸಿ ತನ್ನ ಪ್ರಾಣದ ಹಂಗನ್ನೂ ತೊರೆದು ಮಹಿಳಾ ಇನ್ಸ್‌ಪೆಕ್ಟರ್ ಆ್ಯಮಿ ಸ್ಕಾಟ್ ಗುಂಡಿಕ್ಕಿ ಜೊಯೆಲ್ ಕಾಚಿಯನ್ನು ಕೊಂದಿದ್ದಳು. ಇದರಿಂದ ಬಾರೀ ಸಂಭವನೀಯ ಪ್ರಾಣಹಾನಿಯನ್ನು ತಪ್ಪಿಸಿದ್ದಳು. ಸದ್ಯ ಈಕೆಯನ್ನು ಶ್ಲಾಘಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ