
ನೇಪಾಳ ಪ್ರಧಾನಿ ರೇಸಲ್ಲಿ ಕುಲ್ಮನ್ ಘೀಸಿಂಗ್:
ಕಠ್ಮಂಡು: ಜೇನ್ ಜಿ ಸಮುದಾಯದ ಆಕ್ರೋಶಕ್ಕೆ ಹೊತ್ತಿ ಉರಿದ ನೇಪಾಳದಲ್ಲಿ ಜೇನ್ ಜಿ ಸಮುದಾಯದವರು ದೇಶವನ್ನು ಮುನ್ನಡೆಸಲು ನ್ಯಾಯಾಧೀಶೆ ಸುಶೀಲಾ ಕುರ್ಕಿ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದರು. ಆದರೆ ಅವರು ಜವಾಬ್ದಾರಿ ಹೊರಲು ಸಿದ್ಧರಿಲ್ಲದೇ ಹಿಂದೆ ಸರಿದ ಕಾರಣ ಈಗ ಮತ್ತೊಬ್ಬ ನೇಪಾಳಿ ನಾಯಕ ಕುಲ್ಮನ್ ಘೀಸಿಂಗ್ ಅವರ ಹೆಸರು ಕೇಳಿ ಬಂದಿದೆ. ಅವರು ಯಾರು ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.
ಭಾರತದಲ್ಲಿ ಶಿಕ್ಷಣ ಪಡೆದಿರುವ ಕುಲ್ಮನ್ ಘೀಸಿಂಗ್:
ನೇಪಾಳದ ಹೊಸ ಪ್ರಧಾನಿ ರೇಸಲ್ಲಿರುವ ಕುಲ್ಮನ್ ಘೀಸಿಂಗ್ ಅವರು ವಿದ್ಯಾಭ್ಯಾಸ ಮಾಡಿದ್ದು ಭಾರತದಲ್ಲಿ. ನೇಪಾಳದ ವಿದ್ಯುತ್ ನಿಗಮದ ಮಾಜಿ ಸಿಇಒ ಆಗಿರುವ ಘೀಸಿಂಗ್ ಅವರ ಹೆಸರು ನೇಪಾಳ ದೇಶದ ಹಂಗಾಮಿ ನಾಯಕನ ಸ್ಥಾನಕ್ಕೆ ಮುನ್ನೆಲೆಗೆ ಬಂದಿದೆ. ಕೆಪಿ ಶರ್ಮಾ ಓಲಿ ರಾಜೀನಾಮೆಯ ನಂತರ ಝೆನ್ ಜೀ ಸಮುದಾಯದವರು ಕುಲ್ಮನ್ ಘೀಸಿಂಗ್ ಅವರ ಹೆಸರನ್ನು ಆಯ್ಕೆ ಮಾಡಿದ್ದರು. ನೇಪಾಳದಲ್ಲಿ ಪ್ರಸ್ತುತ ಸೇನಾಡಳಿತ ಜಾರಿಯಲ್ಲಿದ್ದು, ರಾಷ್ಟ್ರವ್ಯಾಪಿ ನಿರ್ಬಂಧಗಳನ್ನು ವಿಧಿಸಿ ಗುರುವಾರ ಬೆಳಗ್ಗೆಯವರೆಗೂ ಕರ್ಫ್ಯೂ ವಿಧಿಸಲಾಗಿದೆ. ಈ ನಡುವೆ ಕುಲ್ಮನ್ ಘೀಸಿಂಗ್ ಅವರ ಹೆಸರು ನೇಪಾಳದ ಹಂಗಾಮಿ ನಾಯಕನ ಸ್ಥಾನಕ್ಕೆ ಕೇಳಿ ಬಂದಿದೆ.
ದೇಶದಲ್ಲಿ ಲೋಡ್ ಶೆಡ್ಡಿಂಗ್ ಕೊನೆಗೊಳಿಸಿದ್ದ ಘೀಸಿಂಗ್..
ನೇಪಾಳದ ವಿದ್ಯುತ್ ನಿಗಮದ ಸಿಇಒ ಆಗಿ ಕೆಲಸ ಮಾಡಿದ್ದ ಘೀಸಿಂಗ್ ಅವರು ನೇಪಾಳವನ್ನು ಹಲವು ವರ್ಷಗಳಿದ ಕಾಡುತ್ತಿದ್ದ ಲೋಡ್ ಶೆಡ್ಡಿಂಗ್ ಅನ್ನು ಕೊನೆಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಅವರೊಬ್ಬ ಇಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದಾರೆ. ಭಾರತದ ಜೇಮ್ಸೆಡ್‌ಪುರದಲ್ಲಿರುವ ರಿಜನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಅವರು ಇಲೆಕ್ಟ್ರಿಕಲ್ ವಿಷಯದಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ನಂತರ ನೇಪಾಳದ ಫುಲ್‌ಚೌಕ್‌ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾನಿಲಯದಲ್ಲಿ ಪವರ್ ಸಿಸ್ಟಂ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ.
ಅವಧಿಗೆ ಮೊದಲೇ ಅವರನ್ನು ಹುದ್ದೆಯಿಂದ ವಜಾ ಮಾಡಿದ್ದ ಓಲಿ ಸರ್ಕಾರ
ಘೀಸಿಂಗ್ ಅವರು 1994 ರಲ್ಲಿ ನೇಪಾಳ ವಿದ್ಯುತ್ ಪ್ರಾಧಿಕಾರದಲ್ಲಿ (NEA) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಪದೋನ್ನತಿ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದರು. 2016 ರಲ್ಲಿ ಘೀಸಿಂಗ್ ಅವರು ನೇಪಾಳ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. ಇವರು ಈ ಸ್ಥಾನಕ್ಕೆ ಏರಿದ ನಂತರ ಆಗ ದೇಶವನ್ನು ಕಾಡುತ್ತಿದ್ದ 18 ಗಂಟೆಗಳ ದಿನನಿತ್ಯದ ವಿದ್ಯುತ್ ಕಡಿತವನ್ನು ತೆಗೆದುಹಾಕುವ ಮೂಲಕ ಮನೆಮಾತಾಗಿದ್ದರು. ನಾಲ್ಕು ವರ್ಷಗಳ ಅವಧಿಯ ನಂತರ, ಅವರನ್ನು 2020 ರಲ್ಲಿ ಬದಲಾಯಿಸಲಾಯಿತು ಆದರೆ 2021 ರಲ್ಲಿಅವರು ಆ ಹುದ್ದೆಗೆ ಮರಳಿ ಬಂದರು.
ಆದರೆ 2025ರ ಮಾರ್ಚ್ 24 ರಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರವು ಅವರನ್ನು ನೇಪಾಳ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕ ಹುದ್ದೆಯಿಂದ ತೆಗೆದು ಹಾಕಿತ್ತು. ಅವರ ಅಧಿಕಾರಾವಧಿ ಆಗಸ್ಟ್‌ನಲ್ಲಿ ಕೊನೆಗೊಳ್ಳುತ್ತಿತ್ತು. ಆದರೆ ಅದಕ್ಕೂ 4 ತಿಂಗಳ ಮೊದಲೇ ಅವರನ್ನು ಆ ಹುದ್ದೆಯಿಂದ ತೆಗೆದು ಹಾಕಿತ್ತು. ಅವರ ಸ್ಥಾನಕ್ಕೆ ಹಿತೇಂದ್ರ ದೇವ್ ಶಕ್ಯಾ ಅವರನ್ನು ನೇಮಿಸಲಾಯಿತು. ಕುಲ್ಮನ್ ಘೀಸಿಂಗ್ ಅವರನ್ನು ವಜಾ ಮಾಡಿದ್ದಕ್ಕೆ ವಿರೋಧ ಪಕ್ಷಗಳು ಹಾಗೂ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವರ ವಜಾ ಮಾಡುವುದಕ್ಕೆ ಅವರ ಕಾರ್ಯಕ್ಷಮತೆಗಿಂತ ರಾಜಕೀಯ ಹಿತಾಸಕ್ತಿಯೇ ಕಾರಣ ಎಂದು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ನಂಗೆ ಕಚ್ತಿಯಾ ಅಂತಾ ಕೇಳುತ್ತಾ ಹಾವಿನೊಂದಿಗೆ ಕುಡುಕನ ಚೆಲ್ಲಾಟ: ಎರಡು ಬಾರಿ ಕಚ್ಚಿದ ಹಾವು
ಇದನ್ನೂ ಓದಿ: ಗ್ಯಾಂಗ್ ರೇ*ಪ್: 26ರ ಹರೆಯದ ಮಾತು ಬಾರದ ಕಿವಿ ಕೇಳದ ಗರ್ಭಿಣಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ