ಬಾಂಗ್ಲಾದೇಶದಲ್ಲಿ ಭಾರಿ ಅಗ್ನಿ ದುರಂತ: ಏಳಂತಸ್ಥಿನ ಕಟ್ಟಡದಲ್ಲಿ ಬೆಂಕಿ : 43 ಜನ ಬಲಿ

By Anusha KbFirst Published Mar 1, 2024, 11:38 AM IST
Highlights

ನೆರೆಯ ಬಾಂಗ್ಲಾದೇಶದ ರಾಜಧಾನಿಯಲ್ಲಿ ಭಾರಿ ಅಗ್ನಿ ಅನಾಹುತವೊಂದು ಸಂಭವಿಸಿದ್ದು, ಕನಿಷ್ಠ 43 ಮಂದಿ ಸಾವನ್ನಪ್ಪಿದ್ದಾರೆ.  

ಢಾಕಾ: ನೆರೆಯ ಬಾಂಗ್ಲಾದೇಶದ ರಾಜಧಾನಿಯಲ್ಲಿ ಭಾರಿ ಅಗ್ನಿ ಅನಾಹುತವೊಂದು ಸಂಭವಿಸಿದ್ದು, ಕನಿಷ್ಠ 43 ಮಂದಿ ಸಾವನ್ನಪ್ಪಿದ್ದಾರೆ.  ರಾಜಧಾನಿ ಢಾಕಾದಲ್ಲಿದ್ದ 7 ಅಂತಸ್ಥಿನ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಕನಿಷ್ಠ 43 ಮಂದಿ ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.  ಈ ಅವಘಡದಲ್ಲಿ ಇದುವರೆಗೆ 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದೇಶ ಆರೋಗ್ಯ ಸಚಿವ ಸಮಂತ್ ಲಾಲ್ ಸೇನ್ ಹೇಳಿದ್ದಾರೆ. ಗಾಯಾಳುಗಳಿಗೆ ಢಾಕಾದ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಮೀಪದಲ್ಲೇ ಇರುವ  ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಢಾಕಾದ  ಬೈಲೆ ರಸ್ತೆಯಲ್ಲಿರುವ ಪ್ರಸಿದ್ಧ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ರಾತ್ರಿ 9.50 ರ ಸುಮಾರೊಗೆ ಬೆಂಕಿ ಕಾಣಿಸಿಕೊಂಡಿದ್ದು, ಇದು ವೇಗವಾಗಿ ಮೇಲಿನ ಮಹಡಿಗಳಿಗೂ ವ್ಯಾಪಿಸಿದ್ದು,  ಹಲವು ಜನರನ್ನು ಹೊರಗೆ ಬಾರದೇ ಒಳಗೆ ಸಿಲುಕುವಂತೆ ಮಾಡಿದೆ.  ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ 2 ಗಂಟೆಯಲ್ಲಿ ಬೆಂಕಿಯನ್ನು ಹತ್ತೋಟಿಗೆ ತಂದಿದ್ದಾರೆ. ಅಲ್ಲದೇ 75ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಬೈಲೇ ರೋಡ್‌ನ ಈ 7 ಅಂತಸ್ಥಿನ ಕಟ್ಟದಲ್ಲಿ ಮುಖ್ಯವಾಗಿ ರೆಸ್ಟೋರೆಂಟ್‌ಗಳು ಬಟ್ಟೆ ಅಂಗಡಿಗಳು ಮೊಬೈಲ್ ಶಾಪ್‌ಗಳು ಇದ್ದವು ಎಂದು ಅಗ್ನಿ ಶಾಮಕದಳದ ಅಧಿಕಾರಿ ಮೊಹಮ್ಮದ್ ಶಿಹಾಬ್ ಹೇಳಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ಬೆಂಕಿ ಅವಘಡ ಪ್ರಕರಣ; 36 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಬೆಂಕಿಗಾಹುತಿ!

ನಾವು 6ನೇ ಮಹಡಿಯಲ್ಲಿದ್ದಾಗ ದಟ್ಟ ಹೊಗೆ ಕಟ್ಟಡದ ಮೇಲ್ಬಾಗಕ್ಕೆ ಬಿರುಸಾಗಿ ಬರುತ್ತಿರುವುದು ಕಾಣಿಸಿತ್ತು. ನಾವು ನೀರಿನ ಪೈಪ್ ಬಳಸಿ ಬಿಲ್ಡಿಂಗ್‌ನಿಂದ ಕೆಳಗೆ ಇಳಿದೆವು. ಆದರೆ ಕೆಲವರು ಮೇಲಿನಿಂದ ಹಾರಿದ ಪರಿಣಾಮ ಕೆಲವರು ಗಾಯಗೊಂಡಿದ್ದಾರೆ ಎಂದು ಹೊಟೇಲ್ ಮ್ಯಾನೇಜರ್ ಸೋಹೆಲ್ ಹೇಳಿದ್ದಾರೆ. ಇನ್ನೂ ಕೆಲವರು ಮೇಲ್ಛಾವಣಿಯಲ್ಲಿ ಬಾಕಿಯಾಗಿದ್ದು, ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದಾರೆ. 

ಅಲ್ಲಾಹನಿಗೆ ನಮನಗಳು, ನಾವು ನಮ್ಮ ಮಕ್ಕಳು ಪತ್ನಿ ಸೇರಿದಂತೆ ಎಲ್ಲಾ ಮಕ್ಕಳು ಹಾಗೂ ಹೆಣ್ಣುಮಕ್ಕಳನ್ನು ಕೆಳಗೆ ಕಳುಹಿಸಿ ಮೇಲೆ ನಾವು ಗಂಡಸರು ಮಾತ್ರ ಉಳಿದೆವು. ಅಗ್ನಿ ಶಾಮಕ ಸಿಬ್ಬಂದಿ ನಮ್ಮ ಜೊತೆಗಿದ್ದರು ನಂತರ ಕೊನೆಗೂ ನಮ್ಮನ್ನು ರಕ್ಷಿಸಿದರು ಎಂದು ಅನಾಹುತದಲ್ಲಿ ಪಾರಾದ ಪರಿಸರ ವಿಜ್ಞಾನಿ ಕಮ್ರುಜ್ಜಮನ್ ಮಜುಮ್ದರ್ ಹೇಳಿದ್ದಾರೆ.

ಕೋಚಿಂಗ್ ಸೆಂಟರ್‌ಗೆ ಬೆಂಕಿ: ಜೀವ ಉಳಿಸಿಕೊಳ್ಳಲು ಕೇಬಲ್ ವೈರ್‌ ಹಿಡಿದಿಳಿದ ವಿದ್ಯಾರ್ಥಿಗಳು

click me!