ಉಕ್ರೇನಲ್ಲಿ ರಷ್ಯಾ ವಶದಲ್ಲಿದ್ದ ಬೃಹತ್‌ ಡ್ಯಾಂ ಸ್ಫೋಟ: ಸಾವಿರಾರು ಜನ ಜಾನುವಾರುಗಳು ಕಂಗಾಲು

By Kannadaprabha NewsFirst Published Jun 7, 2023, 6:31 AM IST
Highlights

ರಷ್ಯಾ ಹಾಗೂ ಉಕ್ರೇನ್‌ ನಡುವೆ 16 ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಅತ್ಯಂತ ಭೀಕರ ಎನ್ನಲಾದ ಘಟನೆಯೊಂದು ಮಂಗಳವಾರ ಸಂಭವಿಸಿದ್ದು, ದಕ್ಷಿಣ ಉಕ್ರೇನ್‌ನ ಖೇರ್ಸನ್‌ ಬಳಿ ರಷ್ಯಾದ ವಶದಲ್ಲಿದ್ದ ಸೋವಿಯತ್‌ ಕಾಲದ ಬೃಹತ್‌ ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡಿದೆ.

ಕೀವ್‌: ರಷ್ಯಾ ಹಾಗೂ ಉಕ್ರೇನ್‌ ನಡುವೆ 16 ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಅತ್ಯಂತ ಭೀಕರ ಎನ್ನಲಾದ ಘಟನೆಯೊಂದು ಮಂಗಳವಾರ ಸಂಭವಿಸಿದ್ದು, ದಕ್ಷಿಣ ಉಕ್ರೇನ್‌ನ ಖೇರ್ಸನ್‌ ಬಳಿ ರಷ್ಯಾದ ವಶದಲ್ಲಿದ್ದ ಸೋವಿಯತ್‌ ಕಾಲದ ಬೃಹತ್‌ ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡಿದೆ. ಪರಿಣಾಮ, ಖೇರ್ಸನ್‌ ಹಾಗೂ ಕ್ರಿಮಿಯಾದ ಸುಮಾರು 100 ಹಳ್ಳಿ ಹಾಗೂ ಪಟ್ಟಣಗಳು ಮುಳುಗಡೆ ಭೀತಿ ಎದುರಿಸುತ್ತಿದ್ದು, ಜನರು ಜೀವ ಉಳಿಸಿಕೊಳ್ಳಲು ಊರು ತೊರೆಯುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಕೂಡಲೇ ಜಾಗ ಖಾಲಿ ಮಾಡಬೇಕೆಂದು ಎರಡೂ ದೇಶಗಳು ಆದೇಶ ಹೊರಡಿಸಿವೆ. ಅಣೆಕಟ್ಟೆಇರುವ ನೋವಾ ಕಖೋವ್ಕಾ ಊರು ಈಗಾಗಲೇ ಮುಳುಗಿದೆ.

ಉದ್ದೇಶಪೂರ್ವಕವಾಗಿ ರಷ್ಯಾ ಈ ಡ್ಯಾಂ ಹಾಗೂ ಜಲವಿದ್ಯುತ್‌ ಉತ್ಪಾದನೆ (hydroelectric power plant) ಘಟಕವನ್ನು ಸ್ಫೋಟಿಸಿದೆ ಎಂದು ಉಕ್ರೇನ್‌ ಆರೋಪಿಸಿದ್ದರೆ, ಉಕ್ರೇನ್‌ ದೇಶವೇ ಇದನ್ನು ಸ್ಫೋಟಿಸಿದೆ ಎಂದು ರಷ್ಯಾ ಆರೋಪಿಸಿದೆ. ಡ್ಯಾಂ ಧ್ವಂಸದಿಂದ ಯಾವ ದೇಶಕ್ಕೆ ಅನುಕೂಲವಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಎರಡೂ ದೇಶಗಳ ವಶದಲ್ಲಿರುವ ಊರುಗಳು ಇದರಿಂದಾಗಿ ಮುಳುಗಲಿವೆ. ಜೊತೆಗೆ, 2014ರಿಂದ ರಷ್ಯಾದ ವಶದಲ್ಲಿರುವ ಉಕ್ರೇನ್‌ನ ಕ್ರಿಮಿಯಾ ಪ್ರದೇಶಕ್ಕೆ ಕುಡಿಯುವ ನೀರಿನ ಪೂರೈಕೆ ನಿಲ್ಲಲಿದೆ. ಹಾಗೆಯೇ ಉಕ್ರೇನ್‌ನಲ್ಲಿ ರಷ್ಯಾದ ವಶದಲ್ಲಿರುವ ಯುರೋಪ್‌ನ ಅತಿದೊಡ್ಡ ಝಪೋರಿಜಿಯಾ (Zaporizhia)ಅಣುಸ್ಥಾವರ ಇದರಿಂದ ಅಪಾಯಕ್ಕೆ ಸಿಲುಕಿದೆ. ಈ ಅಣುಸ್ಥಾವರದ ಕೂಲಿಂಗ್‌ ವ್ಯವಸ್ಥೆಗೆ ಡ್ಯಾಂ ನೀರು ಬಳಕೆಯಾಗುತ್ತಿತ್ತು.

Russia-Ukraine war: ಯುದ್ಧದ ಭೀಕರತೆ ನಡುವೆಯೂ ಉಕ್ರೇನ್ ಸೈನಿಕರ 'ನಾನು ನಾಟು' ಡಾನ್ಸ್, ವಿಡಿಯೋ ವೈರಲ್

ಡ್ಯಾಂ ಸ್ಫೋಟದ ಬೆನ್ನಲ್ಲೇ ಎರಡೂ ದೇಶಗಳು ತುರ್ತು ಸಭೆಗಳನ್ನು (emergency meetings) ನಡೆಸಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಈ ದುರ್ಘಟನೆಯಿಂದ ಉಕ್ರೇನ್‌ನಲ್ಲಿ ಪರಿಸರ ಹಾಗೂ ಜೀವವ್ಯವಸ್ಥೆಗೆ ಸಂಬಂಧಿಸಿದ ಬಹುದೊಡ್ಡ ಆಪತ್ತು ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ಕೆಲ ಗಂಟೆಗಳಲ್ಲಿ ಸಾವಿರಾರು ಜನರು, ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ.

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ


ಮಹತ್ವದ ಡ್ಯಾಂನ ಹಿನ್ನೆಲೆ

  • ಸ್ಫೋಟಗೊಂಡ ನೋವಾ ಕಖೋವ್ಕಾ ಅಣೆಕಟ್ಟು ಉಕ್ರೇನ್‌ನ ಡಿನಿಪ್ರೋ ನದಿಗೆ 1956ರಲ್ಲಿ ನಿರ್ಮಾಣಗೊಂಡಿದೆ
  • ದಕ್ಷಿಣ ಉಕ್ರೇನ್‌ನ ಖೇರ್ಸನ್‌ ನಗರದಿಂದ 30 ಕಿ.ಮೀ. ದೂರದಲ್ಲಿ ಸೋವಿಯತ್‌ ರಷ್ಯಾ ಕಾಲದಲ್ಲಿ ನಿರ್ಮಾಣ
  • ಡ್ಯಾಂ ಗೋಡೆ 30 ಮೀಟರ್‌ ಎತ್ತರ ಹಾಗೂ 3.2 ಕಿ.ಮೀ ಉದ್ದವಿದೆ; ಇದರಲ್ಲಿ ಜಲವಿದ್ಯುತ್‌ ಘಟಕವೂ ಇದೆ
  • ಯುರೋಪ್‌ನ ಅತಿದೊಡ್ಡ ಝಪೋರಿಜಿಯಾ ಅಣುವಿದ್ಯುತ್‌ ಸ್ಥಾವರಕ್ಕೆ ಈ ಡ್ಯಾಂ ನೀರು ಕೂಲೆಂಟ್‌ ಆಗಿ ಬಳಕೆ
  • ಅಮೆರಿಕದ ಯೂಟಾದಲ್ಲಿರುವ ಗ್ರೇಟ್‌ ಸಾಲ್ಟ್‌ ಲೇಕ್‌ನಲ್ಲಿರುವಷ್ಟುನೀರು ಈ ಡ್ಯಾಮ್‌ನಲ್ಲಿ ಸಂಗ್ರಹವಾಗುತ್ತದೆ
  •  ಈ ಡ್ಯಾಮ್‌ನಿಂದ ಖೇರ್ಸನ್‌, ಕ್ರಿಮಿಯಾಕ್ಕೆ ನೀರು ಪೂರೈಕೆ; ಡ್ಯಾಂ ಸ್ಫೋಟದಿಂದ ಇವೆರಡೂ ನಗರಕ್ಕೆ ಅಪಾಯ
  •  2022ರ ಫೆಬ್ರವರಿಯಲ್ಲಿ ರಷ್ಯಾ ಈ ಡ್ಯಾಂ ವಶಪಡಿಸಿಕೊಂಡಿದೆ
click me!