
ಟೆಲ್ ಅವಿವಾ: ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆಯೊಂದರ ಮೇಲೆ ರಾಕೆಟ್ ದಾಳಿ ನಡೆದಿದ್ದು, ಮಕ್ಕಳು ಮಹಿಳೆಯರು ಸೇರಿದಂತೆ 500ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ದಾಳಿಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆಸ್ಪತ್ರೆ ಮುಂದೆ ಅಳಿದುಳಿದ ತಮ್ಮವರಿಗಾಗಿ ಜನ ಹುಡುಕಾಟ ನಡೆಸುತ್ತಿರುವ ದೃಶ್ಯ ಮನಕಲಕುವಂತಿದೆ. ಗಾಜಾ ಆಸ್ಪತ್ರೆ ಮುಂಭಾಗ ಜನಸಾಗರ ಸೇರಿದ್ದು, ಘಟನೆಯಲ್ಲಿ ಬದುಕುಳಿದವರ ಸ್ಥಳಾಂತರ ನಡೆಯುತ್ತಿದೆ. ತಮ್ಮವರ ಹುಡುಕಾಟಕ್ಕೆ ಪ್ಯಾಲೇಸ್ತೀನ್ ಜನ ಪರದಾಡುತ್ತಿರುವ ದೃಶ್ಯ ಅಲ್ಲಿ ಕಂಡು ಬಂದಿದೆ. ಇತ್ತ ಯುದ್ಧದ ಕಾರಣದಿಂದ ಬಹುತೇಕ ಆಸ್ಪತ್ರೆಗಳಲ್ಲಿ ಇರುವ ಮೂಲ ಸೌಕರ್ಯವೇ ಸರ್ವನಾಶವಾಗಿದ್ದು, ಗಾಯಾಳುಗಳಿಗೆ ಸಾವೇ ಗತಿ ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದು, ಯುದ್ಧದಿಂದಾಗಿ ಅಮಾಯಕ ನಾಗರಿಕರು ಪ್ರಾಣ ಬಿಡುವಂತಾಗಿದೆ
ಇತ್ತ ಗಾಜಾದ ನಗರ ಆಸ್ಪತ್ರೆ ಮೇಲೆ ನಡೆದ ದಾಳಿಯಿಂದ 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಹುತೇಕ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ರಾಕೆಟ್ ದಾಳಿಯನ್ನು ಪ್ಯಾಲೇಸ್ತೇನ್ ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್ ರಾಯಭಾರಿಯಾಗಿರುವ ರಿಯಾದ್ ಮನ್ಸೂರ್ ಈ ಬಗ್ಗೆ ಮಾತನಾಡಿದ್ದು, ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಇಸ್ರೇಲ್ ಪ್ರಧಾನಿ ಅವನೊಬ್ಬ ದೊಡ್ಡ ಸುಳ್ಳುಗಾರ, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ (Al Ahli Hospital) ಮೇಲಿನ ದಾಳಿಯ ಬಗ್ಗೆ ಇಸ್ರೇಲ್ ಸುಳ್ಳು ಹೇಳುತ್ತಿದೆ. ಇಸ್ರೇಲ್‌ನ ಡಿಜಿಟಲ್ ವಕ್ತಾರ ಒಂದು ಟ್ವಿಟ್ ಮಾಡಿದ್ರು ಅದರಲ್ಲಿ ಆಸ್ಪತ್ರೆ ಸುತ್ತಮುತ್ತ ಹಮಾಸ್ ಉಗ್ರರಿದ್ದಾರೆ, ಅವರ ಮೇಲೆ ದಾಳಿ ಮಾಡುತ್ತೇವೆ ಎಂದಿದ್ದರು. ನಂತರ ಆ ಟ್ವಿಟ್‌ನ್ನು ಡಿಲಿಟ್ ಮಾಡಲಾಗಿದೆ. ಆ ಟ್ವಿಟ್‌ನ ಪ್ರತಿ ನಮ್ಮ ಬಳಿ ಇದೆ. ಆಸ್ಪತ್ರೆ ಮೇಲೆ ಮಾರಣಾಂತಿಕ ದಾಳಿಯನ್ನು ನಡೆಸಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಗೆ ಈಗ ಇಸ್ರೇಲಿ ಪ್ರಧಾನಿ ನೆತನ್ಯಾಹು, ಇಸ್ಲಾಮಿಕ್ ಜಿಹಾದ್ (Islamic Jihad) ಅನ್ನು ದೂಷಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇತ್ತ ಹಮಾಸ್ ಸಂಘಟನೆ (Hamas Organisation) ಈ ದಾಳಿಯನ್ನು ಇಸ್ರೇಲೇ ಮಾಡಿದೆ ಗಾಜಾಪಟ್ಟಿಯಲ್ಲಿ ಇಸ್ರೇಲ್ ಹತ್ಯಾಕಾಂಡವನ್ನೇ ನಡೆಸಿದೆ. ಆಸ್ಪತ್ರೆ ಮೇಲೆ ದಾಳಿ ಮಾಡುವ ಮೂಲಕ ಅಮಾನವೀಯ ವರ್ತನೆ ತೋರಿದೆ ಎಂದು ಆರೋಪಿಸಿದ್ದರೆ, ಇತ್ತ ಇಸ್ರೇಲ್ ಈ ಆರೋಪವನ್ನು ಬಲವಾಗಿ ನಿರಾಕರಿಸಿದೆ. ಇದೊಂದು ಹಮಾಸ್ ಉಗ್ರರೇ (Hamas Terrorist) ಇಸ್ರೇಲ್‌ನತ್ತ ಹಾರಿ ಬಿಟ್ಟ ರಾಕೆಟೊಂದು ಮಿಸ್ ಫೈರ್ ಆಗಿ ಗಾಜಾ ಪಟ್ಟಿಯ (Gaza Strip) ಆಸ್ಪತ್ರೆ ಮೇಲೆ ಬಿದ್ದಿದೆ. ಇದನ್ನು ನಾವೂ ಮಾಡಿಯೇ ಇಲ್ಲ ಎಂದು ಇಸ್ರೇಲ್ ಹೇಳಿದ್ದು, ಟ್ವಿಟ್ಟರ್‌ನಲ್ಲಿ ವೀಡಿಯೋ ಸಮೇತ ಪೋಸ್ಟ್ ಹಾರಿ ಬಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ