ಹಮಾಸ್ ಉಗ್ರರಿಗೆ ಚೀನಾ ಸರ್ಕಾರ ಶಸ್ತ್ರಾಸ್ತ್ರ ಮತ್ತು ಸಂವಹನ ಸಾಧನಗಳನ್ನು ಪೂರೈಕೆ ಮಾಡುತ್ತಿದೆ ಎಂದು ಇಸ್ರೇಲ್ ಸೇನೆ ಅನುಮಾನ ವ್ಯಕ್ತಪಡಿಸಿದೆ.
ಜೆರುಸಲೇಂ: ಹಮಾಸ್ ಉಗ್ರರಿಗೆ ಚೀನಾ ಸರ್ಕಾರ ಶಸ್ತ್ರಾಸ್ತ್ರ ಮತ್ತು ಸಂವಹನ ಸಾಧನಗಳನ್ನು ಪೂರೈಕೆ ಮಾಡುತ್ತಿದೆ ಎಂದು ಇಸ್ರೇಲ್ ಸೇನೆ ಅನುಮಾನ ವ್ಯಕ್ತಪಡಿಸಿದೆ. ಹಮಾಸ್ ಹಾರಿಬಿಟ್ಟ ರಾಕೆಟ್ ಗಳು ಮತ್ತು ಅವರು ಬಳಸಿರುವ ಸಂವಹನ ಸಾಧನಗಳ ಬಗ್ಗೆ ಇಸ್ರೇಲ್ ಸೇನೆ ಅಧ್ಯಯನ ನಡೆಸಿದ್ದು, ಈ ಅಧ್ಯಯನ ಚೀನಾ ಮತ್ತು ಹಮಾಸ್ ಉಗ್ರರ ನಡುವಿನ ಸಂಬಂಧವನ್ನು ತೋರಿಸುತ್ತಿದೆ. ಅಲ್ಲದೇ ಇಸ್ರೇಲ್‌ನ ಗುಪ್ತಚರ ವಿಭಾಗವೂ ಈ ಬಗ್ಗೆ ತನಿಖೆ ನಡೆಸಿದ್ದು, ಹಮಾಸ್ ಉಗ್ರರು ಚೀನಾ ಮೂಲದ ಶಸ್ತ್ರಾಸ್ತ್ರ ಬಳಕೆ ಮಾಡಿದ್ದಾರೆ ಎಂದು ಹೇಳಿದೆ.
ನಮ್ಮ ಸಹನೆ ಪರೀಕ್ಷಿಸಬೇಡಿ: ನೆತನ್ಯಾಹು ಗುಡುಗು
ರಫಾ: ಉತ್ತರ ಗಾಜಾ ಪ್ರದೇಶದಲ್ಲಿ ತಾವು ನೀಡಿರುವ ಸೂಚನೆಯಂತೆ ನಾಗರಿಕರನ್ನು ಸ್ಥಳಾಂತರಿಸಲು ಅಡ್ಡಿ ಮಾಡುತ್ತಿರುವ ಹಮಾಸ್ ಬಂಡುಕೋರರಿಗೆ ಸಹಾಯ ಮಾಡುತ್ತಿರುವ ಹಿಜ್ಬುಲ್ಲಾ ಸಂಘಟನೆ ಹಾಗೂ ಇರಾನ್‌ಗೆ ಬೆಂಜಮಿನ್ ನೆತನ್ಯಾಹು (Benjamin Netanyahu) ತಮ್ಮ ಸಹನೆ ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ಸಂಸತ್ತು (ನೆಸೆಟ್) ಉದ್ದೇಶಿಸಿ ಮಾತನಾಡಿದ ಅವರು, ‘ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರನ್ನು (Hamas) ಸದೆಬಡಿಯಲು ಸಮಸ್ತ ವಿಶ್ವ ಸಮುದಾಯ ಒಂದುಗೂಡಬೇಕು. ಇದು ನಿಮ್ಮದೇ ಯುದ್ಧ. ಗಾಜಾ ಪಟ್ಟಿಯಲ್ಲಿರುವ (Gaza Strip) ಅಮಾಯಕ ನಾಗರಿಕರ ಸ್ಥಳಾಂತರ ವಿಚಾರದಲ್ಲಿ ತಮ್ಮ ಸಹನೆಯನ್ನು ಪರೀಕ್ಷಿಸಿದರೆ ಹಿಜ್ಬುಲ್ಲಾ ಹಾಗೂ ಇರಾನ್‌ಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ’ ಎನ್ನುವ ಮೂಲಕ ಬೆಂಜಮಿನ್ ಹಮಾಸ್ ಬೆಂಬಲಿಗರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಗಾಜಾ ವಶ ಯತ್ನ ತಪ್ಪು: ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಬೈಡೆನ್ ಎಚ್ಚರಿಕೆ
ವಾಷಿಂಗ್ಟನ್: ಗಾಜಾ ಪಟ್ಟಿ ಪ್ರದೇಶದ ಮೇಲೆ ಭೂದಾಳಿ ನಡೆಸಿ ಅದರ ವಶಕ್ಕೆ ಇಸ್ರೇಲ್ ಸಜ್ಜಾಗಿದೆ ಎಂಬ ವರದಿಗಳ ನಡುವೆಯೇ, ಗಾಜಾ ವಶದ ಯತ್ನವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಿರೋಧಿಸಿದ್ದಾರೆ. ‘ಉಗ್ರರನ್ನು ಸದೆಬಡಿಯುವ ಉದ್ದೇಶದಿಂದ ಸಂಪೂರ್ಣ ದೇಶ ಹಾಳು ಮಾಡುವುದು ತಪ್ಪು ನಿರ್ಧಾರ. ಗಾಜಾ಼ ಮೇಲೆ ದಾಳಿ ಮಾಡುವಾಗ ಇಸ್ರೇಲ್ ಯುದ್ಧ ನೀತಿ ಗಮನದಲ್ಲಿಟ್ಟುಕೊಳ್ಳಬೇಕು. ಗಾಜಾಕ್ಕೆ ಇಸ್ರೇಲ್ ನೀರಿನ ಪೂರೈಕೆಯನ್ನೂ ನಿಲ್ಲಿಸಿದ್ದು ಬಹಳ ಅಮಾನವೀಯ ಕೃತ್ಯ. ಜೊತೆಗೆ ಗಾಜಾ ಪ್ರದೇಶವನ್ನು ಮರು ಆಕ್ರಮಿಸುವ ಇಸ್ರೇಲ್ ನಿರ್ಧಾರ ತಪ್ಪು’ ಎಂದಿದ್ದಾರೆ.
ಇಸ್ರೇಲ್‌ನಲ್ಲಿ ಅಗತ್ಯ ವಸ್ತುಗಳಿಗೆ ತತ್ವಾರ
ಇಸ್ರೇಲ್- ಪ್ಯಾಲಿಸ್ತೇನ್ ಯುದ್ಧದ ಪರಿಣಾಮ ಅಲ್ಲಿನ ಗಾಜಾ ಪಟ್ಟಿಯಲ್ಲಿ ನೀರು, ಆಹಾರಕ್ಕೂ ತೀವ್ರ ತತ್ವಾರ ತಲೆದೋರಿದ ಬೆನ್ನಲ್ಲೇ ಇತ್ತ ಇಸ್ರೇಲ್‌ನ ಸೂಪರ್ ಮಾರ್ಕೆಟ್‌ಗಳಲ್ಲೂ ಅಗತ್ಯ ವಸ್ತುಗಳಿಗೆ ಕೊರತೆ ಎದುರಾಗಿದೆ ಎಂದು ಇಸ್ರೇಲ್‌ನಲ್ಲಿ ನೆಲೆಸಿರುವ ಮಂಗಳೂರು ಮೂಲದ ಯೂಟ್ಯೂಬರ್ ಜ್ಯೋತಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ. ಇಸ್ರೇಲ್‌ನ ಸೂಪರ್ ಮಾರ್ಕೆಟ್‌ವೊಂದಕ್ಕೆ ತೆರಳಿರುವ ಜ್ಯೋತಿ, ಅಲ್ಲಿನ ಅಗತ್ಯ ವಸ್ತುಗಳ ಟ್ರೇಗಳು ಖಾಲಿಯಾಗಿರುವುದನ್ನು ತೋರಿಸಿದ್ದಾರೆ.
ಇಸ್ರೇಲ್ ಯುದ್ಧ: ವೈದ್ಯಕೀಯ ಸೌಲಭ್ಯ ಅನ್ನಾಹಾರವಿಲ್ಲದೇ ಸಾವಿರಾರು ಜನ ಸಾವನ್ನಪ್ಪುವ ಆತಂಕ
ಕಾರಣವೇನು?:
ಗಾಜಾ ಪಟ್ಟಿಯ ಮೇಲೆ ಯುದ್ಧ ಸಾರಿರುವ ಇಸ್ರೇಲ್, 72 ಗಂಟೆಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಹಾಗಾಗಿ ತನ್ನ ದೇಶದ ಜನರಿಗೆ ಮುಂದಿನ 72 ಗಂಟೆಗಳಿಗೆ ಸಾಕಾಗುವಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡಲು ಸೂಚಿಸಿದೆ. ಪರಿಣಾಮ ಇಸ್ರೇಲಿಗರು ದೊಡ್ಡ ಸಂಖ್ಯೆಯಲ್ಲಿ ಮಾರುಕಟ್ಟೆಗೆ ದೌಡಾಯಿಸಿ ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ಹೊರಗಿನಿಂದ ಸಾಕಷ್ಟು ಸಾಮಗ್ರಿ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಟೊಮೆಟೊ, ತರಕಾರಿ, ಹಣ್ಣು ಇತ್ಯಾದಿ ಅನೇಕ ವಸ್ತುಗಳು ಖಾಲಿಯಾಗಿವೆ ಎಂದು ತಮ್ಮ ವಿಡಿಯೊದಲ್ಲಿ ಅವರು ವಿವರಿಸಿದ್ದಾರೆ. ಇವತ್ತಿನವರೆಗೆ ಸೇಫಾಗಿದ್ದೀವಿ. ಆದರೆ ಯುದ್ಧ ತುಂಬ ಇನ್ನೂ ಜೋರಾಗಿ ನಡೆಯುವ ಸಾಧ್ಯತೆಯಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.