ಆಸ್ಪತ್ರೆಗಳೇ ಹಮಾಸ್‌ ಉಗ್ರರ ತಂಗುದಾಣ, ಗಾಜಾ ಶಿಫಾ ಆಸ್ಪತ್ರೆಯಲ್ಲಿ ವಿದೇಶಿ ಒತ್ತೆಯಾಳುಗಳು ಪತ್ತೆ

Published : Nov 21, 2023, 08:58 AM IST
ಆಸ್ಪತ್ರೆಗಳೇ ಹಮಾಸ್‌ ಉಗ್ರರ ತಂಗುದಾಣ, ಗಾಜಾ ಶಿಫಾ ಆಸ್ಪತ್ರೆಯಲ್ಲಿ ವಿದೇಶಿ ಒತ್ತೆಯಾಳುಗಳು ಪತ್ತೆ

ಸಾರಾಂಶ

ಹಮಾಸ್‌ ಉಗ್ರರು ಆಸ್ಪತ್ರೆಗಳನ್ನು ತಮ್ಮ ತಂಗುದಾಣಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮೊದಲಿನಿಂದಲೂ ಆರೋಪಿಸುತ್ತಿರುವ ಇಸ್ರೇಲ್‌ ಸೇನೆ, ಈ ಕುರಿತು ಸಾಕ್ಷ್ಯ ನೀಡುವ ಮತ್ತಷ್ಟು ಉದಾಹರಣೆಗಳನ್ನು ಸೋಮವಾರ ಬಿಡುಗಡೆ ಮಾಡಿದೆ.

ಗಾಜಾ (ನ.21): ಹಮಾಸ್‌ ಉಗ್ರರು ಆಸ್ಪತ್ರೆಗಳನ್ನು ತಮ್ಮ ತಂಗುದಾಣಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮೊದಲಿನಿಂದಲೂ ಆರೋಪಿಸುತ್ತಿರುವ ಇಸ್ರೇಲ್‌ ಸೇನೆ, ಈ ಕುರಿತು ಸಾಕ್ಷ್ಯ ನೀಡುವ ಮತ್ತಷ್ಟು ಉದಾಹರಣೆಗಳನ್ನು ಸೋಮವಾರ ಬಿಡುಗಡೆ ಮಾಡಿದೆ.

‘ಶಿಫಾ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ, ಆಸ್ಪತ್ರೆಯ 10 ಮೀಟರ್‌ ಆಳದಲ್ಲಿ 55 ಮೀಟರ್‌ ಉದ್ದದ ಸುರಂಗ ಪತ್ತೆಯಾಗಿದೆ. ಇದು ಆಸ್ಪತ್ರೆಯನ್ನು ಉಗ್ರರು ತಮ್ಮ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದರು ಎಂಬುದಕ್ಕೆ ಸಾಕ್ಷಿ’ ಎಂದು ಸೇನೆ ಒಂದು ವಿಡಿಯೋದಲ್ಲಿ ಹೇಳಿದೆ.

ಮತ್ತೊಂದು ವಿಡಿಯೋದಲ್ಲಿ, ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ ವೇಳೆ ಅಪಹರಿಸಿದ್ದ ಒಬ್ಬ ನೇಪಾಳಿ ಹಾಗೂ ಒಬ್ಬ ಥಾಯ್ಲೆಂಡ್‌ ಪ್ರಜೆಯನ್ನು ಆಸ್ಪತ್ರೆಯಲ್ಲಿ ಒತ್ತೆ ಇಟ್ಟುಕೊಂಡಿದ್ದು ಕಂಡುಬಂದಿದೆ. ಅವರಿಬ್ಬರಿಗೂ ದಾಳಿ ವೇಳೆ ಆದ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ. ಆದರೆ ಒಬ್ಬ ಒತ್ತೆ ಇಟ್ಟುಕೊಂಡಿದ್ದ ಒಬ್ಬ ಇಸ್ರೇಲಿ ಯೋಧನನ್ನು ಹತ್ಯೆಗೈಯಲಾಗಿದ ಎಂದು ಹೇಳಿದೆ.

ಆಸ್ಟ್ರೇಲಿಯಾ ಸಮುದ್ರತೀರದಲ್ಲಿ ಕಾಣಿಸಿಕೊಂಡ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ, ನಿಬ್ಬೆರಗಾದ ಪ್ರವಾಸಿಗರು

ಶಿಫಾ ಬಳಿಕ ಮತ್ತೊಂದು ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ
ಗಾಜಾದ ಅತ್ಯಂತ ದೊಡ್ಡ ಆಸ್ಪತ್ರೆಯಾದ ಶಿಫಾ ಆಸ್ಪತ್ರೆ ಮೇಲೆ ದಾಳಿ ಮಾಡಿ ಅದನ್ನು ಖಾಲಿ ಮಾಡಿದ ಇಸ್ರೇಲಿ ಸೇನೆ, ಇದೀಗ ಉತ್ತರ ಗಾಜಾದ ಇನ್ನೊಂದು ಪ್ರಮುಖ ಆಸ್ಪತ್ರೆ ಮೇಲೆ ದಾಳಿ ಆರಂಭಿಸಿದೆ.

ಇಂಡೋನೇಷಿಯನ್‌ ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಸಾವಿರಾರು ರೋಗಿಗಳು ಮತ್ತು ನಿರಾಶ್ರಿತರು ತಂಗಿದ್ದು, ಅವರನ್ನು ಹಮಾಸ್‌ ಉಗ್ರರು ಮಾನವ ತಡೆಗೋಡೆಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಶಂಕೆ ಇಸ್ರೇಲಿ ಸೇನೆಯದ್ದು. ಹೀಗಾಗಿ ಸೋಮವಾರ ಈ ಆಸ್ಪತ್ರೆ ಮೇಲೆ ಇಸೇಲಿ ಸೇನೆ ಆರಂಭಿಸಿದೆ. ಈ ವೇಳೆ ಹಮಾಸ್‌ ಉಗ್ರರು ಕೂಡಾ ಪ್ರತಿದಾಳಿ ನಡೆಸುತ್ತಿರುವ ಕಾರಣ ಆಸ್ಪತ್ರೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಗುಂಡಿನ ಕಾಳಗದ ಸದ್ದು ಕೇಳಿಬಂದಿದೆ. ಈ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ ನಡೆಸಿದ ದಾಳಿಯ ಪರಿಣಾಮ ಆಸ್ಪತ್ರೆಯಲ್ಲಿದ್ದ 600 ರೋಗಿಗಳು, 200 ಆರೋಗ್ಯ ಕಾರ್ಯಕರ್ತರು ಮತ್ತು 2000ಕ್ಕೂ ಹೆಚ್ಚು ನಿರಾಶ್ರಿತರು ಅಲ್ಲಿಂದ ಜಾಗ ಖಾಲಿ ಮಾಡುವಂತಾಗಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಆರೋಪಿಸಿದೆ.

ಇಸ್ರೇಲ್‌ಗೆ ರಹಸ್ಯವಾಗಿ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ? ಹಮಾಸ್‌ ವಿರುದ್ಧದ ಯುದ್ಧದಲ್ಲಿ ಯಹೂದಿ ರಾಷ್ಟ್ರಕ್ಕೆ ಬೆಂಬಲ!

ಸ್ಥಳಾಂತರ:
23 ಲಕ್ಷ ಜನ ಸಂಖ್ಯೆಯ ಗಾಜಾದಲ್ಲಿ ಇದೀಗ ಶೇ.25ರಷ್ಟು ಜನರು, ಇಸ್ರೇಲಿ ದಾಳಿಯ ಪರಿಣಾಮ ತಮ್ಮ ವಾಸ ಸ್ಥಳ ತೊರೆದಿದ್ದಾರೆ. ಈ ಪೈಕಿ 9 ಲಕ್ಷ ನಿರಾಶ್ರಿತರು ವಿಶ್ವಸಂಸ್ಥೆಯ ನಿರಾಶ್ರಿತರ ಶಿಬಿರಗಳಲ್ಲಿ ಅತ್ಯಂತ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಗಾಜಾ ಅಧಿಕಾರಿಗಳ ಪ್ರಕಾರ ಇದುವರೆಗೂ 11500 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, 2500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ ಇಸ್ರೇಲ್‌ ಕಡೆ 1200 ಜನರು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

ಹಮಾಸ್‌ ಉಗ್ರ ನಾಯಕ ಸಿನ್ವರ್‌ ಪತ್ತೆಗೆ ಇಸ್ರೇಲ್ ಸ್ಕೆಚ್:
ಅ.7 ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ್ದ ಹತ್ಯಾಕಾಂಡದ ಹಿಂದಿನ ರೂವಾರಿಯ ಕುರಿತು ಇಸ್ರೇಲ್‌ ಸೇನಾ ಪಡೆಗಳು ಈಗ ಶೋಧ ಆರಂಭಿಸಿವೆ.

6 ವರ್ಷಗಳಿಂದ ಹಮಾಸ್‌ ಉಗ್ರ ಸಂಘಟನೆಯನ್ನು ಸಿನ್ವರ್‌ (61) ಮುನ್ನಡೆಸುತ್ತಿದ್ದು ಅನೇಕ ಇಸ್ರೇಲಿ ಪ್ರದೇಶಗಳ ಮೇಲಿನ ದಾಳಿಗೆ ಕಾರಣನಾಗಿದ್ದಾನೆ. ಇಸ್ರೇಲ್‌ ಸೇನೆ ಈತನ ಭಾವಚಿತ್ರವನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಅಂಟಿಸಿದ್ದು, ‘ಹಿಟ್ಲರ್‌ ಬಂಕರ್‌ನಲ್ಲಿ ಅಡಗಿದ್ದ ರೀತಿ ಸಿನ್ವರ್‌ ಸುರಂಗದಲ್ಲಿ ಅಡಗಿ ಕುಳಿತಿದ್ದಾನೆ’ ಎಂದು ಶೀರ್ಷಿಕೆ ಕೊಟ್ಟು ಆತನ ಪತ್ತೆಗಾಗಿ ಬಲೆ ಬೀಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!