
ಟೆಹ್ರಾನ್: 'ರಷ್ಯಾದಿಂದ ತೈಲ ಖರೀದಿಸಿ' ಅಂತ ಅಮೆರಿಕ ಈಗ ಭಾರತ ಸೇರಿದಂತೆ ವಿಶ್ವದ ಬೇರೆ ದೇಶಗಳ ಮುಂದೆ ಗೋಗೆರೆಯುತ್ತಿದೆ ಎಂದು ಇರಾನ್ ಲೇವಡಿ ಮಾಡಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಬಗ್ಗೆ ಮಾತನಾಡಿ, ಅಮೆರಿಕದ ಕಾಲೆಳೆದಿದ್ದಾರೆ. ಒಂದು ಕಾಲದಲ್ಲಿ ರಷ್ಯಾದ ತೈಲ ಖರೀದಿಸದಂತೆ ತಡೆಯಲು ಯತ್ನಿಸಿದ್ದ ಅಮೆರಿಕವೇ ಈಗ ಅದನ್ನು ಖರೀದಿಸಲು ದೇಶಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದರು. ರಷ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತದ ಮೇಲೆ ತಿಂಗಳುಗಟ್ಟಲೆ ಒತ್ತಡ ಹಾಕಿದ್ದ ಅಮೆರಿಕ, ಇರಾನ್ ಜೊತೆಗಿನ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆಗೆ ಹೊಡೆತ ಬಿದ್ದಿದ್ದರಿಂದ ತನ್ನ ನಿಲುವನ್ನು ಬದಲಾಯಿಸಿದೆ. ಈಗ ಅಮೆರಿಕವೇ ಬೇರೆ ದೇಶಗಳನ್ನು ರಷ್ಯಾ ತೈಲ ಖರೀದಿಸಲು ಪ್ರೋತ್ಸಾಹಿಸುತ್ತಿದೆ ಎಂದು ಅಬ್ಬಾಸ್ ಅರಾಗ್ಚಿ ಬೆಟ್ಟು ಮಾಡಿದ್ದಾರೆ.
'ರಷ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತವನ್ನು ಬೆದರಿಸಲು ಅಮೆರಿಕ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡಿತ್ತು. ಇರಾನ್ ಜೊತೆಗಿನ ಎರಡು ವಾರಗಳ ಯುದ್ಧದ ನಂತರ, ಶ್ವೇತಭವನ ಈಗ ಭಾರತ ಸೇರಿದಂತೆ ಇಡೀ ಜಗತ್ತನ್ನು ರಷ್ಯಾದ ಕಚ್ಚಾ ತೈಲ ಖರೀದಿಸುವಂತೆ ಬೇಡಿಕೊಳ್ಳುತ್ತಿದೆ' ಎಂದು ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ. ರಷ್ಯಾದ ವಿರುದ್ಧ ಅಮೆರಿಕದ ಬೆಂಬಲ ಪಡೆಯಲು ಯುರೋಪಿಯನ್ ಸರ್ಕಾರಗಳು ಇರಾನ್ ಮೇಲಿನ ಕಾನೂನುಬಾಹಿರ ಯುದ್ಧವನ್ನು ಬೆಂಬಲಿಸುತ್ತಿವೆ ಎಂದೂ ಅರಾಗ್ಚಿ ಆರೋಪಿಸಿದ್ದಾರೆ. ತೈಲ ಬೆಲೆ ಏರಿಕೆಯಿಂದಾಗಿ ರಷ್ಯಾದ ಆದಾಯವೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂಬ ವರದಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ನಡುವೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ತಪ್ಪಿಸಲು, ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ಹಡಗುಗಳಲ್ಲಿನ ರಷ್ಯಾದ ತೈಲವನ್ನು ಖರೀದಿಸಲು ದೇಶಗಳಿಗೆ 30 ದಿನಗಳ ವಿನಾಯಿತಿ ನೀಡುವುದಾಗಿ ಟ್ರಂಪ್ ಆಡಳಿತ ಘೋಷಿಸಿತ್ತು. ಮಾರ್ಚ್ 12ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ರಷ್ಯಾದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಯುಎಸ್ ಖಜಾನೆ ಇಲಾಖೆ ತಿಳಿಸಿದೆ. ಈ ವಿನಾಯಿತಿ ಏಪ್ರಿಲ್ 11ರವರೆಗೆ ಇರಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಇದೇ ವೇಳೆ, ಭಾರತೀಯ ಹಡಗುಗಳು ಸುರಕ್ಷಿತವಾಗಿ ಹಾದುಹೋಗಲು ಇರಾನ್ ಅನುಮತಿ ನೀಡಿದೆ. ಎರಡು ಎಲ್‌ಪಿಜಿ ಹೊತ್ತ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಅವಕಾಶ ಮಾಡಿಕೊಟ್ಟಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. 'ಭಾರತ ಮತ್ತು ಇರಾನ್ ಸ್ನೇಹಿತರಾಗಿರುವುದರಿಂದ, ಈ ಪ್ರಮುಖ ಜಲಮಾರ್ಗದ ಮೂಲಕ ಭಾರತಕ್ಕೆ ಹೋಗುವ ಹಡಗುಗಳ ಸುರಕ್ಷಿತ ಸಂಚಾರವನ್ನು ನಾವು ಖಚಿತಪಡಿಸುತ್ತೇವೆ' ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ