
ನವದೆಹಲಿ (ಮಾ.14): ತೈಲಸಂಪದ್ಭರಿತ ಗಲ್ಫ್ ಪ್ರದೇಶದಲ್ಲಿನ ಯುದ್ಧದ ಬಿಸಿ ಭಾರತದ ಅಡುಗೆ ಮನೆಗಳಿಗೆ ತಟ್ಟಿದ್ದು, ದೇಶದಲ್ಲಿ ಅನಿಲಕ್ಕಾಗಿ ತತ್ವಾರ ಸೃಷ್ಟಿಯಾಗಿರುವ ಹೊತ್ತಿನಲ್ಲೇ ಇರಾನ್‌ನಿಂದ ಶುಭಸುದ್ದಿಯೊಂದು ಬಂದಿದೆ. ‘ಭಾರತ ನಮ್ಮ ಮಿತ್ರ. ಆದ್ದರಿಂದ ಶೀಘ್ರವೇ ಭಾರತಕ್ಕೆ ಹೋರ್ಮುಜ್ ಜಲಸಂಧಿ ತೆರೆಯಲಿದೆ’ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಹೇಳಿದ್ದಾರೆ. ಇದು ಈ ಬಗ್ಗೆ ಇರಾನ್ ಕಡೆಯಿಂದ ಬಂದಿರುವ ಮೊದಲ ಬಹಿರಂಗ ಹೇಳಿಕೆಯಾಗಿದೆ.
ಇದರ ಬೆನ್ನಲ್ಲೇ ಅಡುಗೆ ಅನಿಲ(ಎಲ್‌ಪಿಜಿ) ತುಂಬಿದ 2 ಭಾರತೀಯ ಹಡಗುಗಳು ಹೋರ್ಮುಜ್ ದಾಟಲು ಇರಾನ್ ಅನುಮತಿ ನೀಡಿದ್ದು, 1 ಹಡಗು ಶುಕ್ರವಾರ ರಾತ್ರಿಯೇ ಹೋರ್ಮುಜ್ ದಾಟಿದೆ. ಇದರಲ್ಲಿ 40 ಸಾವಿರ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಎಂಬ ಅನಿಲ ಹಡಗೂ ಸೇರಿದೆ ಎಂದು ವರದಿಗಳು ತಿಳಿಸಿವೆ. ಇದು ಅನಿಲ ಸಂಕಷ್ಟದ ನಡುವೆ ಭಾರತದ ಪಾಲಿಗೆ ಆಶಾದಾಯಕ ವಿದ್ಯಮಾನ.
ವಿಶ್ವಕ್ಕೆ ಕಚ್ಚಾತೈಲ ಪೂರೈಸುವ ಪ್ರಮುಖ ಮಾರ್ಗವಾದ 50 ಮೈಲಿ ಅಂತರದ ಹೋರ್ಮುಜ್ ಜಲಸಂಧಿ ಇರಾನ್‌ನ ನಿಯಂತ್ರಣದಲ್ಲಿದ್ದು, ಅಲ್ಲಿ ಯಾವುದೇ ಹಡಗು ಸಾಗದಂತೆ ಆ ದೇಶ ನಿರ್ಬಂಧ ವಿಧಿಸಿತ್ತು. ಇದನ್ನು ಮೀರಿ ಜಲಸಂಧಿಯನ್ನು ದಾಟಲು ಮುಂದಾದ ನೌಕೆಗಳ ಮೇಲೆ ದಾಳಿ ನಡೆಸಿತ್ತು. ಪರಿಣಾಮ, ತೈಲ ಹಾಗೂ ಅನಿಲಕ್ಕಾಗಿ ಇರಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವ ಭಾರತದಲ್ಲಿ ಅವುಗಳ ಅಭಾವ ಉಂಟಾಗಿದೆ.
ಇಂತಹ ಹೊತ್ತಿನಲ್ಲಿ, ‘ನಿರ್ಬಂಧಕ್ಕೊಳಗಾಗಿರುವ ಹೋರ್ಮುಜ್ ಮೂಲಕ ಸಾಗಲು ಭಾರತಕ್ಕೆ ಅವಕಾಶ ಸಿಗಲಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ದಿಲ್ಲಿಯಲ್ಲಿ ಉತ್ತರಿಸಿದ ಫಥಾಲಿ, ‘ಹೌದು. ಭಾರತ ನಮ್ಮ ಮಿತ್ರ ಎಂದು ನಾವು ನಂಬಿದ್ದೇವೆ. ಎರಡೂ ರಾಷ್ಟ್ರಗಳ ಹಿತಾಸಕ್ತಿ ಒಂದೇ ಆಗಿದೆ. ಆದಕಾರಣ ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಕಾಣಲಿದೆ (ಹೋರ್ಮುಜ್ ಮೂಲಕ ಸಾಗಲು ಅವಕಾಶ ಸಿಗಲಿದೆ)’ ಎಂದು ಹೇಳಿದರು.
ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ‘ಭಾರತೀಯರ ಸಂಕಷ್ಟ ನಮ್ಮದೂ ಹೌದು. ಅಂತೆಯೇ ನಮ್ಮ ನೋವು ಅವರದ್ದೂ ಆಗಿದೆ. ಹಾಗಾಗಿಯೇ ಭಾರತದವರು ನಮಗೆ ಸಹಾಯ ಮಾಡಿದರು. ಈಗ ನಾವು ಅವರಿಗೆ ನೆರವು ನೀಡುತ್ತೇವೆ. ಈ ಬಗ್ಗೆ ಇರಾನ್‌ನಲ್ಲಿರುವ ಉನ್ನತಾಧಿಕಾರಿಗಳು ನಮಗೆ ಸೂಚನೆ ನೀಡಿದ್ದಾರೆ’ ಎಂದು ಫಥಾಲಿ ತಿಳಿಸಿದರು.
ಈ ಮೊದಲು ಇರಾನ್‌ನ ಮಿತ್ರರಾದ ಚೀನಾ ಮತ್ತು ರಷ್ಯಾಗಷ್ಟೇ ಇಂತಹ ವಿನಾಯಿತಿ ನೀಡಲಾಗಿತ್ತು. ಬಳಿಕ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅರಾಗ್ಚಿ ಜತೆ ಶುಕ್ರವಾರ 4ನೇ ಸುತ್ತಿನ ಮಾತುಕತೆ ನಡೆಸಿದರು. ಈ ವೇಳೆ ಹೋರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ 28 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಕೋರಿದರು. ಇದರ ಬೆನ್ನಲ್ಲೇ ಫಥಾಲಿ ಬಂದ ಹೇಳಿಕೆಯು ತೈಲ ಸಂಕಷ್ಟದ ವೇಳೆಯ ಆಶಾದಾಯಕ ಬೆಳವಣಿಗೆಯಾಗಿದೆ.
ಭಾರತದಲ್ಲಿ ನಡೆದ ನೌಕಾಪಡೆಯ ಸಮರಾಭ್ಯಾಸದಲ್ಲಿ ಭಾಗವಹಿಸಿ ತೆರಳುತ್ತಿದ್ದ ಇರಾನ್‌ನ ‘ಐರಿಸ್ ಡೆನಾ’ ಎಂಬ ಯುದ್ಧನೌಕೆ ಹಿಂದು ಮಹಾಸಾಗರದಲ್ಲಿ ಶ್ರೀಲಂಕಾ ಜಲ ಗಡಿ ಸನಿಹ ಸಾಗುತ್ತಿದ್ದ ವೇಳೆ ಮಾ.4ರಂದು ಅಮೆರಿಕ ಅದರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆ ನೌಕೆಯ ಮೊರೆಗೆ ಭಾರತ ಸ್ಪಂದಿಸಿತ್ತು. ಇದರ ನಡುವೆ, ಅದರ ನೆರವಿಗೆ ಶ್ರೀಲಂಕಾ ಧಾವಿಸಿತ್ತು. ಆದರೆ ಭಾರತದ ಜಲಗಡಿಯಿಂದ ಡೆನಾ ನೌಕೆ ಇದ್ದ ಸ್ಥಳ ದೂರದಲ್ಲಿದ್ದುದರಿಂದ ಭಾರತದ ನೌಕಾಪಡೆ ಯೋಧರಿಗೆ ಅಲ್ಲಿಗೆ ಹೋಗಲಾಗಿರಲಿಲ್ಲ. ಪರಿಣಾಮ ಆ ನೌಕೆ ಮುಳುಗಿತ್ತು.
ಇದರ ಬೆನ್ನಲ್ಲೇ ಇರಾನ್‌ನ ಇನ್ನೊಂದು ಸಮರನೌಕೆಯಾದ ಐರಿಸ್ ಲಾವಣ್‌ಗೆ ಕೊಚ್ಚಿ ಬಂದರಿನಲ್ಲಿ ಭಾರತ ಆಶ್ರಯ ನೀಡಿತ್ತು. ಈ ಮೂಲಕ ಅಮೆರಿಕದ ದಾಳಿಗೆ ಒಳಗಾಗುವ ಅಪಾಯದಲ್ಲಿದ್ದ ಹಡಗಿಗೆ ರಕ್ಷಣೆ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಇರಾನ್ ಕೂಡ ಕೃತಜ್ಞತೆ ಸೂಚಕವಾಗಿ ಭಾರತದ ಪಾಲಿಗೆ ಹೋರ್ಮುಜ್ ಜಲಸಂಧಿಯನ್ನು ತೆರೆಯಲು ನಿರ್ಧರಿಸಿದೆ.
ನೆರವು ಕೊಟ್ಟ ಭಾರತಕ್ಕೆ ನಾವೀಗ ನೆರವಾಗುತ್ತೇವೆ
ಭಾರತ ನಮ್ಮ ಮಿತ್ರ ದೇಶ. ಎರಡೂ ರಾಷ್ಟ್ರಗಳ ಹಿತಾಸಕ್ತಿ ಒಂದೇ ಆಗಿದೆ. ಅದರ ಪರಿಣಾಮ ಕೆಲವೇ ತಾಸಲ್ಲಿ ತಿಳಿಯಲಿದೆ (ಹೋರ್ಮುಜ್ ಮೂಲಕ ಸಾಗಲು ಅವಕಾಶ ಸಿಗಲಿದೆ). ಭಾರತದ ಸಂಕಷ್ಟ ನಮ್ಮದು ಕೂಡ ಹೌದು. ನಮ್ಮ ನೋವು ಅವರದ್ದೂ ಆಗಿದೆ. ಭಾರತದವರು ನಮಗೆ ಸಹಾಯ ಮಾಡಿದ್ದಾರೆ. ಈಗ ಅವರಿಗೆ ನಾವು ನೆರವು ನೀಡುತ್ತೇವೆ. ಇರಾನ್‌ನಲ್ಲಿರುವ ಉನ್ನತಾಧಿಕಾರಿಗಳು ಈಗಾಗಲೇ ನಮಗೆ ಸೂಚನೆ ನೀಡಿದ್ದಾರೆ.
- ಮೊಹಮ್ಮದ್ ಫಥಾಲಿ, ಭಾರತದಲ್ಲಿನ ಇರಾನ್ ರಾಯಭಾರಿ
ಇರಾನ್ ಯುದ್ಧನೌಕೆಗೆ ರಕ್ಷಣೆ ನೀಡಿದ್ದ ಭಾರತ
- ಭಾರತದಲ್ಲಿ ಸಮರಾಭ್ಯಾಸ ಮುಗಿಸಿ ತವರಿಗೆ ತೆರಳುತ್ತಿದ್ದ ಇರಾನ್ ಯುದ್ಧ ನೌಕೆ ‘ಐರಿಸ್ ಡೆನಾ’ ಮೇಲೆ ಅಮೆರಿಕ ದಾಳಿ ನಡೆಸಿತ್ತು
- ನೆರವು ನೀಡುವಂತೆ ಭಾರತ, ಶ್ರೀಲಂಕಾದಿಂದ ‘ಐರಿಸ್ ಡೆನಾ’ ಸಿಬ್ಬಂದಿ ನೆರವು ಯಾಚಿಸಿತ್ತು. ಲಂಕಾ ಸನಿಹದಲ್ಲೇ ದಾಳಿ ಆಗಿತ್ತು
- ಹೀಗಾಗಿ ಲಂಕಾ ನೌಕಾಪಡೆ ಸ್ಥಳಕ್ಕೆ ಧಾವಿಸಿತ್ತು. ಭಾರತ ಕೂಡ ತಕ್ಷಣ ಪ್ರತಿಕ್ರಿಯಿಸಿತ್ತು. ಸ್ಥಳಕ್ಕೆ ಹೋಗುವಷ್ಟರಲ್ಲಿ ನೌಕೆ ಮುಳುಗಿತ್ತು
- ‘ಐರಿಸ್ ಲಾವಣ್’ ಎಂಬ ಇರಾನ್‌ನ ಮತ್ತೊಂದು ನೌಕೆ ಅಮೆರಿಕ ದಾಳಿಯ ಆತಂಕದಲ್ಲಿತ್ತು. ಭಾರತದ ನೆರವನ್ನು ಕೋರಿತ್ತು
- ತಕ್ಷಣವೇ ಸ್ಪಂದಿಸಿದ್ದ ಭಾರತ ಸರ್ಕಾರ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಲು ಅವಕಾಶ ಕಲ್ಪಿಸುವ ಮೂಲಕ ಇರಾನ್‌ಗೆ ನೆರವಾಗಿತ್ತು
- ತನ್ಮೂಲಕ ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಇರಾನ್ ಯುದ್ಧ ನೌಕೆಯ ಮೇಲಾಗಬಹುದಾದ ದಾಳಿಯನ್ನು ತಪ್ಪಿಸಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ