ಭಾರತದಲ್ಲಿ ವ್ಯಾಪಾರಕ್ಕಾಗಿ ಬಂದು ಭಾರತವನ್ನೇ ಆಳಿದ ಬ್ರಿಟಿಷರಿಗೆ ಇದೀಗ ಭಾರತೀಯ ಪ್ರಧಾನಿ. ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾದ ಬ್ರಿಟನ್ ಪ್ರಧಾನಿ ಹುದ್ದೆಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.
ಲಂಡನ್(ಅ.24): ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಈಗ ಇತಿಹಾಸ. ವ್ಯಾಪಾರಕ್ಕಾಗಿ ಬಂದು ಭಾರತದಲ್ಲಿ ಆಳ್ವಿಕೆ ನಡೆಸಿ ಸಂಪೂರ್ಣ ಭಾರತದ ಸಂಪತ್ತನ್ನೇ ದೋಚಲಾಗಿತ್ತು. ಬಳಿಕ ಭಾರತದ ಹೋರಾಡಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿತ್ತು. ಇದೀಗ ಬ್ರಿಟಿಷ್ ಆಡಳಿತ ಭಾರತೀಯನ ಕೈಗೆ ಸಿಕ್ಕಿದೆ. ಇಂದು ನಡೆದ ಬ್ರಿಟನ್ ಪ್ರಧಾನಿ ಆಯ್ಕೆಯಲ್ಲಿ ಕನ್ಸರ್ವೇಟೀವ್ ಪಕ್ಷದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ವಿಶ್ವದಲ್ಲೇ ಶುರುವಾಗಿತ್ತು. ಇದೀಗ ಉತ್ತರ ಸಿಕ್ಕಿದೆ. ಇನ್ಪೋಸಿಸ್ ನಾರಾಯಣ ಮೂರ್ತಿ ಅಳಿಯ, ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಬೊರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್‌ನಿಂದ ಹಿಂದೆ ಸರಿದ ಕಾರಣ ಸುನಕ್ ಹಾದಿ ಸುಗಮಗೊಂಡಿತು. ಸುನಕ್ ವಿರುದ್ಧ, ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್ ಸ್ಪರ್ಧಿಸಿದ್ದರು. ಪೆನ್ನಿ ಮೋರ್ಡೆಂಟ್ ಕೇವಲ 26 ನಾಯರ ಬೆಂಬಲ ಪಡೆದರು. ಹೀಗಾಗಿ ಕಣದಿಂದ ಹೊರಬಿದ್ದರು. ಇದರೊಂದಿಗೆ ಭಾರಿ ಬಹುಮತದೊಂದಿದೆ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಲಂಡನ್‌ನಲ್ಲಿ ಗೋ ಪೂಜೆ ಮಾಡಿ ಭಾರತೀಯರ ಹೃದಯ ಗೆದ್ದ Rishi Sunak
ಬೊರಿಸ್ ಜಾನ್ಸನ್ ಆಡಳಿತದಲ್ಲಿ ರಿಷಿ ಸುನಕ್ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಸಮಯದಲ್ಲಿ ಜಾನ್ಸನ್ ಜನಪ್ರಿಯತೆ ಪಾತಾಳಕ್ಕೆ ಕುಸಿದರೆ, ರಿಷಿ ಸುನಕ್ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಜನಪ್ರಿಯರಾದರು. ಬ್ರಿಟನ್ ಉದ್ಯಮ ಕ್ಷೇತ್ರಕ್ಕೆ ನೆರವು ನೀಡಿದ್ದರು. ಇದೀಗ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅಕ್ಟೋಬರ್ 28ರಂದು ಪದಗ್ರಹಣ ಮಾಡಲಿದ್ದಾರೆ.
45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ
ಬೋರಿಸ್ ಜಾನ್ಸನ್ ಬಳಿಕ ಪ್ರಧಾನಿಯಾಗಿ ಆಯ್ಕೆಯಾದ ಲಿಜ್ ಟ್ರಸ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಾಗಿ ಅಧಿಕಾರಕ್ಕೆ ಬರುವ ಮೊದಲು ಭರವಸೆ ನೀಡಿದ್ದರು. ಶ್ರೀಮಂತರಿಗೆ ತೆರಿಗೆ ಕಡಿತ ಮಾಡುವುದಾಗಿಯೂ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಎಲ್ಲಾ ಭರವಸೆಗಳಿಂದ ಹಿಂದೆ ಸರಿದರು. ಅಲ್ಲದೇ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಲಿಜ್ ಜಾರಿಗೆ ತಂದ ಯೋಜನೆಗಳು, ಮಧ್ಯಂತರ ಬಜೆಟ್ ಮತ್ತಷ್ಟುಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಹೀಗಾಗಿ ಆತುರದಲ್ಲಿ ತಂದ ಈ ನಿರ್ಧಾರಗಳನ್ನು ಹಿಂಪಡೆದರು. ಇದರಿಂದ ಬೇಸರಗೊಂಡ ಟೋರಿ ಸಂಸದರು ಟ್ರಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನಲೆಯಲ್ಲಿ ಟ್ರಸ್ ಸಹ ರಾಜೀನಾಮೆ ಸಲ್ಲಿಸಬೇಕಾಯಿತು.
ಟೀ ಸರ್ವ್ ಮಾಡುತ್ತಿರುವ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ
ಲಿಜ್ ಟ್ರಸ್ ಮೊದಲು ಬೊರಿಸ್ ಜಾನ್ಸನ್ ಇದೇ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಿದ್ದರು. ಹಲವು ಪ್ರಯತ್ನಗಳ ಬಳಿಕ ಬೊರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದರು. ಕೋವಿಡ್ ಲಾಕ್‌ಡೌನ್‌ನ ಸಮಯದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಕಚೇರಿಯಲ್ಲಿ ತನ್ನ ಸಹಚರರೊಂದಿಗೆ ಪಾರ್ಟಿ ಮಾಡಿದ್ದು, ಅವರ ರಾಜೀನಾಮೆ ಕೇಳಲು ಮುಖ್ಯ ಕಾರಣವಾಗಿ ಮಾರ್ಪಟ್ಟಿತು. ಬೋರಿಸ್ ಆಡಳಿತ ಅವಧಿಯಲ್ಲಿ ಬ್ರಿಟನ್ 40 ವರ್ಷಗಳಲ್ಲೇ ಅತ್ಯಂತ ಭೀಕರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಹೀಗಾಗಿ ದೇಶದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಜೀವನ ಕಷ್ಟವಾಗಿತ್ತು. ಇದೇ ಸಮಯದಲ್ಲಿ ನಡೆದ ಪಾರ್ಟಿ, ಬೋರಿಸ್‌ನ ತಲೆದಂಡ ಕೇಳಲು ಪ್ರಮುಖ ಕಾರಣವಾಯಿತು. ಕೊನೆಗೂ ಸಂಸದರ ಒತ್ತಾಯಕ್ಕೆ ಮಣಿದು ಜಾನ್ಸನ್ ರಾಜೀನಾಮೆ ಸಲ್ಲಿಸಿದರು