ಸುಳ್ಳು ಹೇಳಿ ಸಿಟಿಜನ್‌ಶಿಪ್ ಪಡೆದಿದ್ದ ಭಾರತೀಯ ಮೂಲದ 'CEO' ನೀರಜ್ ಶರ್ಮಾ ಪೌರತ್ವ ರದ್ದು ಮಾಡಲು ಮುಂದಾದ ಅಮೆರಿಕ!

Published : Jun 09, 2026, 09:52 PM IST
Us citizenship

ಸಾರಾಂಶ

ಎಚ್-1ಬಿ ವೀಸಾ ವಂಚನೆ ಮತ್ತು ಪೌರತ್ವ ಪಡೆಯುವಾಗ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಭಾರತೀಯ ಮೂಲದ ಉದ್ಯಮಿ ನೀರಜ್ ಶರ್ಮಾ ಅವರ ಅಮೆರಿಕ ಪೌರತ್ವವನ್ನು ರದ್ದುಗೊಳಿಸಲು ಅಮೆರಿಕದ ಕಾನೂನು ಇಲಾಖೆ ಮುಂದಾಗಿದೆ. 

ವಾಷಿಂಗ್ಟನ್ (ಜೂ.9): ಅಮೆರಿಕದಲ್ಲಿ ಎಚ್-1ಬಿ (H-1B) ವೀಸಾ ವಂಚನೆ ಜಾಲ ನಡೆಸಿ, ಬಳಿಕ ಸುಳ್ಳು ಮಾಹಿತಿ ನೀಡಿ ಅಮೆರಿಕದ ಪೌರತ್ವ ಗಿಟ್ಟಿಸಿಕೊಂಡಿದ್ದ ಭಾರತೀಯ ಮೂಲದ ಉದ್ಯಮಿ ನೀರಜ್ ಶರ್ಮಾ (50) ಸೇರಿದಂತೆ ಒಟ್ಟು 17 ಅಪರಾಧಿಗಳ ಯುಎಸ್ ಪೌರತ್ವವನ್ನು (US Citizenship) ರದ್ದುಗೊಳಿಸಲು ಅಮೆರಿಕದ ಕಾನೂನು ಇಲಾಖೆ (Department of Justice) ಮುಂದಾಗಿದೆ. ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿ ಪೌರತ್ವ ಪಡೆದಿರುವ ಈ 17 ವ್ಯಕ್ತಿಗಳ ವಿರುದ್ಧ ಇಲಾಖೆಯು ಸೋಮವಾರ ನ್ಯಾಯಾಲಯದಲ್ಲಿ ಪೌರತ್ವ ರದ್ದತಿ (Denaturalization) ಪ್ರಕ್ರಿಯೆಯ ಮೊಕದ್ದಮೆಗಳನ್ನು ದಾಖಲಿಸಿದೆ.

ಅಮೆರಿಕದ ಕಾನೂನಿನ ಪ್ರಕಾರ, ಕೇವಲ 'ನ್ಯಾಚುರಲೈಸ್ಡ್' (ವಿದೇಶದಿಂದ ಬಂದು ನೆಲೆಸಿ ಪೌರತ್ವ ಪಡೆದ) ನಾಗರಿಕರ ಪೌರತ್ವವನ್ನು ಮಾತ್ರ ರದ್ದುಗೊಳಿಸಲು ಸಾಧ್ಯವಿದೆ. ಸಾಮಾನ್ಯ ವೀಸಾ ಹೊಂದಿರುವವರನ್ನು ಹಾಗೂ ಅಮೆರಿಕದಲ್ಲೇ ಹುಟ್ಟಿ ಜನ್ಮಸಿದ್ಧ ಹಕ್ಕು (Birthright) ಮೂಲಕ ಪೌರತ್ವ ಪಡೆದವರ ಪೌರತ್ವವನ್ನು ರದ್ದುಗೊಳಿಸಲು ಬರುವುದಿಲ್ಲ. ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯಡಿ (Immigration and Nationality Act), ಪೌರತ್ವವನ್ನು ಅಕ್ರಮವಾಗಿ ಪಡೆದಿದ್ದರೆ ಅಥವಾ ಯಾವುದೇ ಪ್ರಮುಖ ಸತ್ಯವನ್ನು ಮರೆಮಾಚಿ, ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ನಾಗರಿಕತ್ವ ಪಡೆದಿದ್ದರೆ ಅದನ್ನು ರದ್ದುಗೊಳಿಸಲು ಮತ್ತು ಅವರ ಪೌರತ್ವ ಪ್ರಮಾಣಪತ್ರವನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶವಿದೆ.

ಯಾರಿದು ನೀರಜ್ ಶರ್ಮಾ?: ಕಂಪನಿ ಹೆಸರಲ್ಲಿ ನಡೆದಿದ್ದೇನು?

ಭಾರತೀಯ ಮೂಲದ ಅಮೆರಿಕನ್ ಪ್ರಜೆ ನೀರಜ್ ಶರ್ಮಾ, ನ್ಯೂಜೆರ್ಸಿಯಲ್ಲಿರುವ 'ಮ್ಯಾಗ್ನಾವಿಷನ್ ಎಲ್‌ಎಲ್‌ಸಿ' (Magnavision LLC) ಎಂಬ ಸ್ಟಾಫಿಂಗ್ (ಉದ್ಯೋಗಿಗಳನ್ನು ಒದಗಿಸುವ) ಕಂಪನಿಯ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದರು. ಶರ್ಮಾ ಅವರು ಬೇರೆ ದೇಶಗಳ ಜನರನ್ನು ಎಚ್-1ಬಿ ವೀಸಾದಡಿ ಅಮೆರಿಕಕ್ಕೆ ಕರೆತರಲು ನೇಮಕಾತಿ ಮಾಡಿಕೊಳ್ಳುತ್ತಿದ್ದರು. ಆದರೆ ಸತ್ಯ ಏನೆಂದರೆ, ಅವರ ಬಳಿ ಈ ಉದ್ಯೋಗಿಗಳಿಗೆ ನೀಡಲು ಯಾವುದೇ ನೈಜ ಉದ್ಯೋಗಾವಕಾಶ ಇರಲೇ ಇಲ್ಲ.

ಅವರು ಒಟ್ಟು 11 ಎಚ್-1ಬಿ ವೀಸಾ ಅರ್ಜಿಗಳನ್ನು (Petitions) ಸಲ್ಲಿಸಿದ್ದರು. ಈ ಪ್ರತಿಯೊಂದು ಅರ್ಜಿಯಲ್ಲೂ, ವೀಸಾ ಪಡೆಯುತ್ತಿರುವ ಫಲಾನುಭವಿಗಳಿಗೆ ಅಮೆರಿಕದ ಪ್ರಸಿದ್ಧ ಜಾಗತಿಕ ಹಣಕಾಸು ಸಂಸ್ಥೆಯೊಂದರಲ್ಲಿ (Global Financial Institution) ಉದ್ಯೋಗ ನೀಡಲಾಗುವುದು ಎಂದು ಸುಳ್ಳು ಪ್ರಾತಿನಿಧ್ಯವನ್ನು ನೀಡಿದ್ದರು. ಅಷ್ಟೇ ಅಲ್ಲದೆ, ಈ ವೀಸಾ ಅರ್ಜಿಗಳೊಂದಿಗೆ ಆ ಹಣಕಾಸು ಸಂಸ್ಥೆಯ ಅಧಿಕೃತ ಕಾರ್ಪೊರೇಟ್ ಲೆಟರ್‌ಹೆಡ್ ಹಾಗೂ ಅಲ್ಲಿನ ಉನ್ನತ ಅಧಿಕಾರಿಗಳ ನಕಲಿ (ಫೋರ್ಜರಿ) ಸಹಿ ಉಳ್ಳ ಪತ್ರಗಳನ್ನು ಲಗತ್ತಿಸಿ ಅಮೆರಿಕ ಸರ್ಕಾರಕ್ಕೆ ವಂಚಿಸಿದ್ದರು.

ಪೌರತ್ವ ಪಡೆಯುವಾಗ ಯುಎಸ್ ಸರ್ಕಾರಕ್ಕೆ ಸುಳ್ಳು ಹೇಳಿದ್ದ ನೀರಜ್!

ನೀರಜ್ ಶರ್ಮಾ ಅವರು ಅಮೆರಿಕದಲ್ಲಿ ಅಗತ್ಯ ವರ್ಷಗಳ ಕಾಲ ಖಾಯಂ ನಿವಾಸಿಯಾಗಿ (ಗ್ರೀನ್ ಕಾರ್ಡ್ ಹೋಲ್ಡರ್) ವಾಸಿಸಿದ ನಂತರ, ಅಮೆರಿಕದ ನಾಗರಿಕರಾಗಲು 2017 ರಲ್ಲಿ 'ನ್ಯಾಚುರಲೈಸೇಶನ್' ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪೌರತ್ವ ಪ್ರಕ್ರಿಯೆಯ ಸಂದರ್ಭದಲ್ಲಿ ಶರ್ಮಾ ಅವರು ಅಮೆರಿಕ ಸರ್ಕಾರಕ್ಕೆ ಮೂರು ಪ್ರಮುಖ ಸುಳ್ಳುಗಳನ್ನು ಹೇಳಿ ಪ್ರಮಾಣೀಕರಿಸಿದ್ದರು:

(ಎ) ತಾನು ಈವರೆಗೆ ಬಂಧನಕ್ಕೊಳಗಾಗದ ಯಾವುದೇ ಅಪರಾಧ ಅಥವಾ ಕಾನೂನುಬಾಹಿರ ಕೃತ್ಯವನ್ನು ಎಸಗಿಲ್ಲ.

(ಬಿ) ಅಮೆರಿಕ ಸರ್ಕಾರದ ಅಧಿಕಾರಿಗಳಿಗೆ ತಾನು ಯಾವುದೇ ತಪ್ಪು ಅಥವಾ ದಾರಿತಪ್ಪಿಸುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿಲ್ಲ.

(ಸಿ) ವಲಸೆ ಸೌಲಭ್ಯಗಳನ್ನು ಪಡೆಯಲು ತಾನು ಯಾವುದೇ ಯುಎಸ್ ಸರ್ಕಾರಿ ಅಧಿಕಾರಿಯ ಬಳಿ ಸುಳ್ಳು ಹೇಳಿಲ್ಲ.

ಅವರು ನೀಡಿದ ಈ ಎಲ್ಲಾ ಸುಳ್ಳು ಮಾಹಿತಿಗಳನ್ನೇ ನೈಜ ಎಂದು ನಂಬಿದ ಅಮೆರಿಕದ ವಲಸೆ ಸಂಸ್ಥೆ 'ಯುಎಸ್‌ಸಿಐಎಸ್' (USCIS), ಅವರ ಅರ್ಜಿಯನ್ನು ಅಂಗೀಕರಿಸಿತು. ಇದರ ಬೆನ್ನಲ್ಲೇ ಶರ್ಮಾ ಡಿಸೆಂಬರ್ 2017 ರಲ್ಲಿ ಅಧಿಕೃತವಾಗಿ ಅಮೆರಿಕದ ಪ್ರಜೆಯಾದರು.

2019 ರಲ್ಲಿ ಅರೆಸ್ಟ್; ಬಯಲಾಯ್ತು ಅಸಲಿ ಸತ್ಯ!

ಆದರೆ ಪಾಪದ ಕೊಡ ತುಂಬಿದಾಗ ನೀರಜ್ ಶರ್ಮಾ ಅವರ ವಂಚನೆಯ ಜಾಲ ಬಯಲಿಗೆ ಬಿತ್ತು. 2019 ರಲ್ಲಿ ಅಮೆರಿಕದ ತನಿಖಾ ಸಂಸ್ಥೆಗಳು ಅವರನ್ನು ಬಂಧಿಸಿದವು. ಅವರ ಮೇಲೆ ಒಂದು ವೀಸಾ ವಂಚನೆ (Visa Fraud) ಪ್ರಕರಣ ಮತ್ತು ಒಂದು ಪೌರತ್ವ ವಂಚನೆ (Naturalization Fraud) ಪ್ರಕರಣವನ್ನು ದಾಖಲಿಸಲಾಯಿತು. ತನಿಖೆಯ ವೇಳೆ ದೂರುದಾರರು ಮತ್ತೊಂದು ಶಾಕಿಂಗ್ ಮಾಹಿತಿ ನೀಡಿದ್ದು, ಯಾವ ಪ್ರಸಿದ್ಧ ಬ್ಯಾಂಕ್‌ನಲ್ಲಿ ಉದ್ಯೋಗ ನೀಡುವುದಾಗಿ ನೀರಜ್ ಶರ್ಮಾ ವೀಸಾ ವಂಚನೆ ಮಾಡಿದ್ದರೋ, ಅದೇ ಬ್ಯಾಂಕ್‌ನಲ್ಲಿ ಅವರು ಸ್ವತಃ ಕೇವಲ ಒಬ್ಬ ಗುತ್ತಿಗೆ ಆಧಾರಿತ ಬಿಸಿನೆಸ್ ಅನಾಲಿಷ್ಟ್ (Contracted Business Analyst) ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಪತ್ತೆಯಾಯಿತು.

ಅಮೆರಿಕದ ಉದಾರತೆಯನ್ನು ದುರುಪಯೋಗಪಡಿಸಿಕೊಂಡರೆ ಸುಮ್ಮನಿರೊಲ್ಲ

ಈ ಪೌರತ್ವ ರದ್ದತಿ ಪ್ರಕರಣಗಳ ಕುರಿತು ಕಠಿಣ ಸಂದೇಶ ರವಾನಿಸಿರುವ ಡಿಎಚ್‌ಎಸ್ (DHS) ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್, "ಅಮೆರಿಕದ ಪೌರತ್ವ ಎಂಬುದು ಒಂದು ವಿಶೇಷ ಹಕ್ಕು ಮತ್ತು ಗೌರವ. ಅದನ್ನು ಪ್ರಾಮಾಣಿಕವಾಗಿಯೇ ಗಳಿಸಬೇಕು. ನೀವೇನಾದರೂ ಇಲ್ಲಿಗೆ ಬಂದು ನಮ್ಮ ಕಾನೂನುಗಳನ್ನು ಮುರಿದು, ವಲಸೆ ಪ್ರಕ್ರಿಯೆಗಳಲ್ಲಿ ಸುಳ್ಳು ಹೇಳಿದರೆ ಆ ಪೌರತ್ವದ ಹಕ್ಕನ್ನು ನೀವು ಕಳೆದುಕೊಳ್ಳುತ್ತೀರಿ" ಎಂದು ಎಚ್ಚರಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಲೈಂಗಿಕ ಅಪರಾಧಿಗಳು, ವಂಚಕರು ಮತ್ತು ಡ್ರಗ್ಸ್ ದಂಧೆಕೋರರು ಸೇರಿದಂತೆ ನಮ್ಮ ಉದಾರತೆಯನ್ನು ದುರುಪಯೋಗಪಡಿಸಿಕೊಂಡು, ನಮ್ಮ ವಲಸೆ ವ್ಯವಸ್ಥೆಯೊಂದಿಗೆ ಆಟವಾಡಿ ಅಮೆರಿಕನ್ನರಿಗೆ ಹಾನಿ ಮಾಡುವ ಕ್ರಿಮಿನಲ್‌ಗಳನ್ನು ನೋಡಿ ಡಿಎಚ್‌ಎಸ್ ಸುಮ್ಮನೆ ಕೂರುವುದಿಲ್ಲ. ಇಂತಹ ವಿದೇಶಿ ಅಪರಾಧಿಗಳ ಪೌರತ್ವವನ್ನು ರದ್ದುಗೊಳಿಸಲು ಮತ್ತು ಅವರನ್ನು ನಮ್ಮ ದೇಶದಿಂದ ಹೊರಹಾಕಲು (Deport) ನಾವು ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವುದನ್ನು ಮುಂದುವರಿಸುತ್ತೇವೆ" ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಿಯಾಂಕಾ ಚೋಪ್ರಾ ಕಣ್ಣಾಲಿಗಳು ಇಂದಿಗೂ ಒದ್ದೆಯಾಗೋದು ಆ ಒಬ್ಬರಿಗಾಗಿ ಮಾತ್ರ.. ನಿಕ್ ಅಲ್ಲ, ಇನ್ಯಾರು ಗೊತ್ತಾ?
Pakistan Satellites Monitoring India: ಭಾರತದ ಮೇಲೆ ನಿಗಾ ಇಡಲು ಪಾಕ್‌ನಿಂದ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ!