* ಕಾಬೂಲ್ ದಾಳಿಗೆ ಬೈಡೆನ್ ಪ್ರತೀಕಾರದ ಪ್ರತಿಜ್ಞೆ
* ಬಾಂಬ್ ಹಾಕಿದವರನ್ನು ಬೇಟೆ ಆಡ್ತೀವಿ: ಅಮೆರಿಕ ಗುಡುಗು
* ಐಸಿಸ್ ಖೊರಾಸಾನ್ ಉಗ್ರರ ಮೇಲೆ ದಾಳಿಗೆ ಯೋಜನೆ ರೂಪಿಸಲು ಸೇನೆಗೆ ಸೂಚನೆ
* ಅಮೆರಿಕಕ್ಕೆ ಹಾನಿ ಮಾಡುವವರು ಬೆಲೆ ತೆರುವಂತೆ ಮಾಡುತ್ತೇವೆ: ದೊಡ್ಡಣ್ಣನ ಶಪಥ
ವಾಷಿಂಗ್ಟನ್(ಆ.28): ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಗುರುವಾರ ಆತ್ಮಾಹುತಿ ದಾಳಿ ನಡೆಸಿ 13 ಅಮೆರಿಕನ್ ಯೋಧರು ಸೇರಿದಂತೆ 170 ಜನರನ್ನು ಬಲಿಪಡೆದ ಐಸಿಸ್ ಖೊರಾಸಾನ್ (ಐಸಿಸ್-ಕೆ) ಉಗ್ರರ ವಿರುದ್ಧ ಗುಡುಗಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ‘ನಿಮ್ಮನ್ನು ಬೇಟೆಯಾಡಿ, ಬೆಲೆ ತೆರುವಂತೆ ಮಾಡದೇ ಬಿಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ಉಗ್ರರು ಮತ್ತು ಅವರ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸಲು ಅಗತ್ಯ ಯೋಜನೆ ಸಿದ್ಧಪಡಿಸುವಂತೆ ತಮ್ಮ ಸೇನೆಗೆ ಸೂಚಿಸಿದ್ದಾರೆ. ಈ ಮೂಲಕ ಶೀಘ್ರವೇ ಐಸಿಸ್ ನಾಯಕರ ಮೇಲೆ ಬೃಹತ್ ಪ್ರಮಾಣದ ದಾಳಿಯ ಮುನ್ಸೂಚನೆ ನೀಡಿದ್ದಾರೆ.
undefined
ದಾಳಿಯ ಘಟನೆ ಹಿನ್ನೆಲೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್, ‘ಈ ದಾಳಿ ನಡೆಸಿದವರು ಮತ್ತು ಅಮೆರಿಕಕ್ಕೆ ಹಾನಿಯ ಎಚ್ಚರಿಕೆ ನೀಡುವವರನ್ನು ನಾವು ಮರೆಯುವುದಿಲ್ಲ. ನಾವು ನಿಮ್ಮನ್ನು ಹುಡುಕಿ ಬೇಟೆಯಾಡುತ್ತೇವೆ ಮತ್ತು ಅದಕ್ಕೆ ನೀವು ಬೆಲೆ ತೆರುವಂತೆ ಮಾಡುತ್ತೇವೆ. ನಮ್ಮ ಸೇನೆ ಎಲ್ಲಾ ಶಕ್ತಿಗಳನ್ನು ಬಳಸಿ ನಮ್ಮ ಹಿತಾಸಕ್ತಿ ಮತ್ತು ನಮ್ಮ ಪ್ರಜೆಗಳನ್ನು ರಕ್ಷಿಸಲು ನಾನು ಬದ್ಧ’ ಎಂದು ಹೇಳಿದ್ದಾರೆ.
‘ನಿಮಗೆಲ್ಲಾ ಗೊತ್ತಿರುವಂತೆ ನಾವು ಯಾವ ಉಗ್ರ ದಾಳಿ ಬಗ್ಗೆ ಮಾತನಾಡುತ್ತಿದ್ದೆವೋ ಮತ್ತು ಗುಪ್ತಚರ ಸಮುದಾಯದಲ್ಲಿ ಆತಂಕಕ್ಕೆ ಒಳಗಾಗಿದ್ದೆವೋ ಆ ದಾಳಿಯನ್ನು ಐಎಸ್‌ಐಎಸ್-ಕೆ ಎಂಬ ಸಂಘಟನೆ ಮಾಡಿದೆ. ಅವರು, ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸಿದ್ದ ನಮ್ಮ ಹಲವು ಯೋಧರನ್ನು ಬಲಿ ಪಡೆದು, ಹಲವು ಯೋಧರನ್ನು ಗಾಯಾಳುಗಳನ್ನಾಗಿ ಮಾಡಿದ್ದಾರೆ. ಅಷ್ಟುಮಾತ್ರವಲ್ಲ ಅವರು ಇತರೆ ಹಲವು ನಾಗರಿಕರನ್ನೂ ಬಲಿಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಐಸಿಸ್ ಖೊರಾಸಾನ್ ಉಗ್ರರು, ಅವರ ಆಸ್ತಿಗಳನ್ನು ಗುರುತಿಸಿ ಅವುಗಳ ಮೇಲೆ ದಾಳಿಗೆ ಸೂಕ್ತ ಯೋಜನೆ ಸಿದ್ಧಪಡಿಸುವಂತೆ ನಮ್ಮ ಕಮಾಂಡರ್‌ಗಳಿಗೆ ಆದೇಶ ನೀಡಿದ್ದೇನೆ. ಅವರ ಮೇಲೆ ನಾವು ಸೂಕ್ತ ಸಮಯ ನೋಡಿ ದಾಳಿ ನಡೆಸಲಿದ್ದೇವೆ. ಐಸಿಸ್ ಉಗ್ರರು ಜಯಗಳಿಸಲು ಬಿಡುವುದಿಲ್ಲ’ ಎಂದು ಬೈಡೆನ್ ಅಬ್ಬರಿಸಿದ್ದಾರೆ.
ತೆರವು ಕಾರ್ಯಾಚರಣೆ:
ಇದೇ ವೇಳೆ, ಆ.31ರೊಳಗೆ ಅಮೆರಿಕ ಸೇನೆಯನ್ನು ಅಷ್ಘಾನಿಸ್ತಾನದಿಂದ ಹಿಂಪಡೆಯುತ್ತೇವೆ. ಇದರಲ್ಲಿ ಬದಲಾವಣೆ ಇಲ್ಲ. ದಾಳಿಯ ಹೊರತಾಗಿಯೂ ಕಾಬೂಲ್‌ನಿಂದ ನಾವು ತೆರವು ಕಾರ್ಯಾಚರಣೆ ಮುಂದುವರೆಸಲಿದ್ದೇವೆ ಮತ್ತು ಆ.31ರೊಳಗೆ ಅದನ್ನು ಪೂರ್ಣಗೊಳಿಸಲಿದ್ದೇವೆ ಎಂದು ಬೈಡೆನ್ ಹೇಳಿದ್ದಾರೆ.
‘ತೆರವು ಕಾರ್ಯಾಚರಣೆಯನ್ನು ನಾವು ಪೂರ್ಣಗೊಳಿಸಲೇಬೇಕಿದೆ ಮತ್ತು ನಾವು ಅದನ್ನು ಪೂರ್ಣಗೊಳಿಸಲಿದ್ದೇವೆ. ಅದನ್ನು ಮಾಡಲು ನಾನು ಸೂಚನೆ ನೀಡಿದ್ದೇನೆ. ಉಗ್ರರ ಇಂಥ ಬೆದರಿಕೆ ನಾವು ಬಗ್ಗುವುದಿಲ್ಲ. ನಮ್ಮ ಯೋಜನೆಯನ್ನು ಸ್ಥಗಿತಗೊಳಿಸಲು ಅವರಿಗೆ ಅವಕಾಶ ನೀಡುವುದಿಲ್ಲ. ತೆರವು ಕಾರ್ಯಾಚರಣೆಯನ್ನು ನಾವು ಮುಂದುವರೆಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.