
ಮೂನ್ ಲೈಟಿಂಗ್ ಅಂದ್ರೆ ಎರಡೆರಡು ಕಂಪನಿಗಳಲ್ಲಿ ಉದ್ಯೋಗಿಯಾಗಿ ಏಕಕಾಲಕ್ಕೆ ಕೆಲಸ ಮಾಡಿ 40 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದ ಭಾರತ ಮೂಲದ ಯುವಕನೋರ್ವನಿಗೆ ಅಮೆರಿಕಾದಲ್ಲಿ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ 39 ವರ್ಷದ ಮೆಹುಲ್ ಗೋಸ್ವಾಮಿ ಶಿಕ್ಷೆಗೆ ಒಳಗಾದ ವ್ಯಕ್ತಿ. ಆರೋಪಿ ಅಮೆರಿಕಾದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ. ಈ ಸರ್ಕಾರಿ ಕೆಲಸದ ಜೊತೆ ಆತ ಖಾಸಗಿ ಕಂಪನಿಗೂ ಕೆಲಸ ಮಾಡಿದ್ದ. ಈ ವಿಚಾರ ಬೆಳಕಿಗೆ ಬಂದ ಕೂಡಲೇ ಅಮೆರಿಕಾದ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ದೊಡ್ಡ ಮಟ್ಟದ ಕಳವಿನ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಈತ ನ್ಯೂಯಾರ್ಕ್ ರಾಜ್ಯ ಮಾಹಿತಿ ತಂತ್ರಜ್ಞಾನ ಸೇವೆಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದರ ಜೊತೆ ಜೊತೆಗ ಗುತ್ತಿಗೆದಾರನಾಗಿಯೂ ಕೆಲಸ ಮಾಡಿದ್ದ. ನ್ಯೂಯಾರ್ಕ್ ರಾಜ್ಯ ಇನ್ಸ್‌ಪೆಕ್ಟರ್ ಜನರಲ್ ಕಚೇರಿ ಮತ್ತು ಸರಟೋಗಾ ಕೌಂಟಿ ಶೆರಿಫ್ ಕಚೇರಿ ನಡೆಸಿದ ಜಂಟಿ ತನಿಖೆಯಲ್ಲಿ, ಗೋಸ್ವಾಮಿ ಅವರ ಕಾನೂನುಬಾಹಿರ ನಡವಳಿಕೆಯು ತೆರಿಗೆದಾರರ ಹಣದಲ್ಲಿ $50,000 ಡಾಲರ್ ದುರುಪಯೋಗಕ್ಕೆ ಸಮಾನವಾಗಿದೆ ಎಂದು ಅಮೆರಿಕ ಮಾಧ್ಯಮ ವರದಿಗಳು ತಿಳಿಸಿವೆ.
ಗೋಸ್ವಾಮಿ ನ್ಯೂಯಾರ್ಕ್ ಸ್ಟೇಟ್ ಆಫೀಸ್‌ಗೆ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು ಅದು ಅವರ ಪ್ರಾಥಮಿಕ ಕೆಲಸವಾಗಿತ್ತು, ಆದರೆ ಅದೇ ಸಮಯದಲ್ಲಿ, ಅವರು ಮಾರ್ಚ್ 2022 ರಿಂದ ಮಾಲ್ಟಾದಲ್ಲಿ ಸೆಮಿಕಂಡಕ್ಟರ್ ಕಂಪನಿಯಾದ ಗ್ಲೋಬಲ್‌ಫೌಂಡ್ರೀಸ್‌ಗೆ ಗುತ್ತಿಗೆದಾರರಾಯೂ ಕೆಲಸ ಮಾಡಲು ಪ್ರಾರಂಭಿಸಿದರು. ಸರ್ಕಾರಿ ನೌಕರನಾಗಿ ತನ್ನ ಜವಾಬ್ದಾರಿಗಳನ್ನು ಪೂರೈಸಬೇಕಾದ ಸಮಯದಲ್ಲಿ ಖಾಸಗಿ ಉದ್ಯೋಗದಾತರೊಬ್ಬರಿಗಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಗೋಸ್ವಾಮಿ ವಿರುದ್ಧ ಅನಾಮಧೇಯ ಇಮೇಲ್ ಬಂದಿದ್ದು, ಅವರ ವಿರುದ್ಧ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.
ಸಾರ್ವಜನಿಕ ನೌಕರರಿಗೆ ಸಮಗ್ರತೆಯಿಂದ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಆದರೆ ಮೆಹುಲ್ ಗೋಸ್ವಾಮಿ ಅವರ ಆಪಾದಿತ ನಡವಳಿಕೆಯು ಈ ಜವಾಬ್ದಾರಿಯ ಗಂಭೀರ ಉಲ್ಲಂಘನೆಯನ್ನು ಪ್ರತಿನಿಧಿಸುತ್ತದೆ. ರಾಜ್ಯಕ್ಕಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡು ಎರಡನೇ, ಪೂರ್ಣ ಸಮಯದ ಕೆಲಸ ಮಾಡುವುದು ತೆರಿಗೆದಾರರ ಡಾಲರ್‌ಗಳು ಸೇರಿದಂತೆ ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗವಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಲೂಸಿ ಲ್ಯಾಂಗ್ ಹೇಳಿದ್ದಾರೆ ಎಂದು ಅಮೆರಿಕಾದ ಸಿಬಿಎಸ್ 6 ನ್ಯೂಸ್ ವರದಿ ಮಾಡಿದೆ.
ಈ ಘಟನೆಯ ಹಿನ್ನೆಲೆ ಅಕ್ಟೋಬರ್ 15 ರಂದು, ಸಾರಾಟೋಗಾ ಕೌಂಟಿ ಶೆರಿಫ್ ಕಚೇರಿಯು ಗೋಸ್ವಾಮಿಯನ್ನು ಎರಡನೇ ಹಂತದ ಕಳ್ಳತನದ ಆರೋಪ ಹೊರಿಸಿ ಬಂಧಿಸಿದೆ. ಇದು ನ್ಯೂಯಾರ್ಕ್‌ನಲ್ಲಿ ಗಂಭೀರ ವರ್ಗದ ಸಿ ಅಪರಾಧವಾಗಿದ್ದು, ಗರಿಷ್ಠ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ವಾರದ ಕೊನೆಯಲ್ಲಿ ಮಾಲ್ಟಾ ಟೌನ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೇಮ್ಸ್ ಎ ಫೌಸಿ ಅವರ ಮುಂದೆ ಗೋಸ್ವಾಮಿ ಅವರನ್ನು ಹಾಜರುಪಡಿಸಲಾಗಿತ್ತು. ನಂತರ ಪ್ರಕರಣದ ವಿಚಾರಣೆ ನಡೆಯುತ್ತಿದಿದ್ದರಿಂದ ಜಾಮೀನು ಇಲ್ಲದೆ ಬಿಡುಗಡೆ ಮಾಡಲಾಯಿತು. ಆದರೆ ನಂತರದಲ್ಲಿ ನ್ಯೂಯಾರ್ಕ್ ರಾಜ್ಯ ಕಾನೂನಿನಡಿಯಲ್ಲಿ, ಗೋಸ್ವಾಮಿ ವಿರುದ್ಧದ ಆರೋಪಗಳನ್ನು ಜಾಮೀನು ಪಡೆಯಲು ಅರ್ಹ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ತೀರ್ಮಾನಿಸಿ ಅವರನ್ನು ಜೈಲಿಗಟ್ಟಲಾಗಿದೆ.
ನ್ಯೂಯಾರ್ಕ್ ರಾಜ್ಯದಲ್ಲಿ ಸಾರ್ವಜನಿಕ ಸೇವೆಯ ಸಮಗ್ರತೆಯನ್ನು ದುರ್ಬಲಗೊಳಿಸುವ ಯಾರನ್ನೇ ಆದರೂ ಶಿಕ್ಷಿಸುವುದಕ್ಕೇ ನಮ್ಮ ಕಚೇರಿ ನಮ್ಮ ಕಾನೂನು ಜಾರಿ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಲೂಸಿ ಲ್ಯಾಂಗ್ ಹೇಳಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಪೆಹ್ಲಾ ಪೆಹ್ಲಾ ಪ್ಯಾರ್: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಬಿಹಾರ ಚುನಾವಣಾ ಅಖಾಡ ರಂಗೇರಿಸಿದ UK ರಿಟರ್ನ್‌ಡ್ ಚೆಲುವೆ ಯಾರೀಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ