10 ವರ್ಷಗಳ ನಂತರ ಭಾರತವು ಇಂದಿನಂತೆಯೇ ಪ್ರಜ್ವಲಿಸುವ ಪ್ರಜಾಪ್ರಭುತ್ವ ದೇಶವಾಗೇ ಉಳಿಯಲಿದೆ. ಏಕೆಂದರೆ . ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ನಿಯಮ ಅಲ್ಲಿವೆ ಎಂದ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟಿ
ವಾಷಿಂಗ್ಟನ್(ಮೇ.11): ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕೆಲವು ವಲಯಗಳಲ್ಲಿ ಎದ್ದಿರುವ ಆಕ್ಷೇಪಗಳನ್ನು ಗುರುವಾರ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟಿ ತಳ್ಳಿಹಾಕಿದ್ದಾರೆ ಮತ್ತು ಪ್ರಜಾಪ್ರಭುತ್ವ ವಿಚಾರದಲ್ಲಿ ಅನೇಕ ರೀತಿಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು ಎಂದು ಹೇಳಿದ್ದಾರೆ. ಸಮಾರಂಭವೊಂದರಲ್ಲಿ ಗುರುವಾರ ಮಾತನಾಡಿದ ಅವರು, ‘10 ವರ್ಷಗಳ ನಂತರ ಭಾರತವು ಇಂದಿನಂತೆಯೇ ಪ್ರಜ್ವಲಿಸುವ ಪ್ರಜಾಪ್ರಭುತ್ವ ದೇಶವಾಗೇ ಉಳಿಯಲಿದೆ. ಏಕೆಂದರೆ . ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ನಿಯಮ ಅಲ್ಲಿವೆ’ ಎಂದರು.
‘ಭಾರತದ ಚುನಾವಣೆಯಲ್ಲಿ ಕೆಲವು ನಿಯಮ ಇವೆ. ಯಾವುದೇ ವ್ಯಕ್ತಿ ಮತ ಹಾಕಲು 2 ಕಿ.ಮೀ.ಗಿಂತ ಹೆಚ್ಚು ಹೋಗುವಂತಿಲ್ಲ. ಅಲ್ಲದೆ, ಪರ್ವತದಲ್ಲಿ ಒಬ್ಬ ಸನ್ಯಾಸಿ ಇದ್ದು, ಆತನಿಗಾಗಿ ಮತಗಟ್ಟೆ ಸ್ಥಾಪಿಸಲು ಚುನಾವಣಾ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಅಲ್ಲದೆ, ಚುನಾವಣೆ ವೇಳೆ ಹಣದ ಸಾಗಣೆ ಮೇಲೆ ನಿಗಾಗೆ ವಾಹನ ಪರಿಶೀಲಿಸಲಾಗುತ್ತದೆ. ಹೀಗಾಗಿ ಪ್ರಜಾಸತ್ತೆ ವಿಷಯದಲ್ಲಿ ಅಮೆರಿಕಕ್ಕಿಂತ ಭಾರತೀಯರು ಉತ್ತಮ ಸ್ಥಿತಿಯಲ್ಲಿದ್ದಾರೆ’ ಎಂದು ಶ್ಲಾಘಿಸಿದರು. ಇದೇ ವೇಳೆ, ‘ಅವಕಾಶ ಸಿಕ್ಕರೆ ಅಮೆರಿಕನ್ನರು ಅಮೆರಿಕಕ್ಕಿಂತ ಭಾರತದಲ್ಲಿ ಉತ್ತಮ ಮತದಾನ ಮಾಡಬಲ್ಲರು’ ಎಂದು ಗಾರ್ಸೆಟಿ ಚಟಾಕಿ ಹಾರಿಸಿದರು.
ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಅಮೆರಿಕ ಯತ್ನ: ರಷ್ಯಾ ಕಿಡಿ
ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಭಾರತೀಯ ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ರಷ್ಯಾದ ಆರೋಪವನ್ನು ಅಮೆರಿಕ ಗುರುವಾರ ತಳ್ಳಿಹಾಕಿದೆ. ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಲ್ಲ, ಖಂಡಿತವಾಗಿಯೂ, ನಾವು ಭಾರತದಲ್ಲಿನ ಚುನಾವಣೆಗಳಿಗೆ ಕೈ ಹಾಕಿಲ್ಲ. ಏಕೆಂದರೆ ನಾವು ಜಗತ್ತಿನ ಯಾವಚುನಾವಣೆಯಲ್ಲೂ ಹಸ್ತಕ್ಷೇಪ ಮಾಡಲ್ಲ. ಅದು ಭಾರತದ ಜನರು ತೆಗೆದುಕೊಳ್ಳಬೇಕಾದ ನಿರ್ಧಾರಗಳು ”ಎಂದರು. ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನು ಹತ್ಯೆಯ ಸಂಚಿನಲ್ಲಿ ಭಾರತದ ರಾ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಹಾಗೂ ಅಮೆರಿಕವುಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮರಿಯಾ ಜಖರೋವಾ ಆರೋಪಿಸಿದ್ದರು.