ಭಾರತದಲ್ಲಿ ಅಲ್ಪಸಂಖ್ಯಾತರು, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಹೆಚ್ಚಳ ಎಂದ ಅಮೆರಿಕ!

By Santosh Naik  |  First Published Jun 3, 2022, 11:37 AM IST

ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತೊಮ್ಮೆ ಭಾರತದ ವಿರುದ್ಧವಾಗಿ ಜಾಗತಿಕ ಮಟ್ಟದಲ್ಲಿ ಮಾತನಾಡಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ಹಾಗೂ ಅಲ್ಪ ಸಂಖ್ಯಾತರ ಮೇಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.
 


ವಾಷಿಂಗ್ಟನ್ (ಜೂನ್. 3): ಭಾರತದಲ್ಲಿ ಧಾರ್ಮಿಕ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಕುರಿತಾಗಿ ಅಮೆರಿಕ ಮತ್ತೊಮ್ಮೆ ತನ್ನ ಮಾತುಗಳನ್ನು ಹರಿಬಿಟ್ಟಿದೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ (US Secretary of State Antony Blinken), ಭಾರತದ ಕುರಿತಾಗಿ ಮತ್ತೊಮ್ಮೆ ದೊಡ್ಡ ಹೇಳಿಕೆ ನೀಡಿದ್ದು, ಭಾರತದಲ್ಲಿ ಧಾರ್ಮಿಕ ಸ್ಥಳಗಳು (religious places) ಹಾಗೂ ಅಲ್ಪ ಸಂಖ್ಯಾತರ ಮೇಲಿನ ದಾಳಿ ನಿರಂತರವಾಗಿ ಏರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ವಿಶ್ವದ ಮೂಲೆ ಮೂಲೆಯಲ್ಲಿಯೂ ಧಾರ್ಮಿಕ ಸ್ವಾಂತ್ರ್ಯವನ್ನು (religious freedom) ಕಾಪಾಡುವ ನಿಟ್ಟಿನಲ್ಲಿ ನಡೆಸುವ ಪ್ರಯತ್ನಕ್ಕೆ ಅಮೆರಿಕ ಸದಾ ಬೆಂಬಲ ನೀಡುತ್ತದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ (International Religious Freedom) ವಾರ್ಷಿಕ ವರದಿಯನ್ನು ಮಂಡಿಸುವಾಗ ಆಂಟೋನಿ ಬ್ಲಿಂಕೆನ್ ಈ ಮಾತು ಹೇಳಿದ್ದಾರೆ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾದ ಬಗ್ಗೆಯೂ ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬ್ಲಿಂಕೆನ್ ಉದಾಹರಣೆಯಾಗಿ ಭಾರತದ ವಿಚಾರವನ್ನು ತೆಗೆದುಕೊಂಡಿದ್ದರು.

ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಅನೇಕ ಧರ್ಮಗಳ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಜನರು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ. ವಿಯೆಟ್ನಾಂನಲ್ಲಿನ ಅಧಿಕಾರಿಗಳು ನೋಂದಾಯಿಸದ ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ನೈಜೀರಿಯಾದಲ್ಲಿ, ಕೆಲವು ರಾಜ್ಯಗಳ ಸರ್ಕಾರಗಳು ಅವರ ನಂಬಿಕೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಮಾನನಷ್ಟ ಮತ್ತು ಧರ್ಮನಿಂದೆಯ ಕಾನೂನುಗಳ ಅಡಿಯಲ್ಲಿ ಅವರನ್ನು ಶಿಕ್ಷಿಸುತ್ತವೆ.

ಚೀನಾವನ್ನು ಉಲ್ಲೇಖಿಸಿ ಮಾತನಾಡಿದ ಆಂಟೋನಿ ಬ್ಲಿಂಕೆನ್ ಅವರು ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಟಾವೊ ಸಮುದಾಯಗಳ ಜನರ ಧಾರ್ಮಿಕ ಸ್ಥಳಗಳನ್ನು ಚೀನಾದಲ್ಲಿ ನಾಶಪಡಿಸಲಾಗಿದೆ ಎಂದು ಹೇಳಿದರು. ಟಿಬೆಟಿಯನ್ ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ ಇತ್ಯಾದಿ ಜನರಿಗೆ ಅಲ್ಲಿ ಮನೆ ಮತ್ತು ಉದ್ಯೋಗ ನೀಡಲಾಗಿಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಲ್ಲಿಗೆ ಬಂದ ನಂತರ ಅಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊನೆಗೊಂಡಿದೆ ಎಂದು ಬ್ಲಿಂಕನ್ ಹೇಳಿದರು. ಹೆಣ್ಣುಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅವರ ಮೇಲಿನ ನಿರ್ಬಂಧಗಳ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಂಟೋನಿ ಬ್ಲಿಂಕನ್ ಅವರು 2021 ರಲ್ಲಿ ಧರ್ಮನಿಂದೆಯ ಆರೋಪದ ಮೇಲೆ 16 ಜನರಿಗೆ ಮರಣದಂಡನೆ ವಿಧಿಸಲಾಯಿತು ಎಂದು ಹೇಳಿದ್ದಾರೆ.

ಭಾರತದಲ್ಲಿ ಮಾನವ ಹಕ್ಕುಗಳ ದೌರ್ಜನ್ಯ ಹೆಚ್ಚಳ: ಅಮೆರಿಕ

ಇತ್ತೀಚೆಗೆ ಆಂಟೋನಿ ಬ್ಲಿಂಕೆನ್ ಭಾರತದಲ್ಲಿ ಮಾನವ ಹಕ್ಕುಗಳ ಕಳವಳದ ಬಗ್ಗೆಯೂ ಮಾತನಾಡಿದ್ದರು. ‘ಕೆಲವು ಸರ್ಕಾರ, ಪೊಲೀಸ್‌ ಹಾಗೂ ಕಾರಾಗೃಹ ಅಧಿಕಾರಿಗಳಿಂದ ಮಾನವ ಹಕ್ಕುಗಳ ದೌರ್ಜನ್ಯ ಇತ್ತೀಚೆಗೆ ಹೆಚ್ಚಳವಾಗಿರುವ ಕಳವಳಕಾರಿ ಬೆಳವಣಿಗೆ ನಡೆಯುತ್ತಿದ್ದು, ಆ ಬಗ್ಗೆ ಗಮನಹರಿಸಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌, ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಕೂಡ ಇದ್ದರು. 

ದೊಡ್ಡಣ್ಣಗೆ ಜೈಶಂಕರ್ ತಿರುಗೇಟು: ಅಮೆರಿಕದ ಮಾನವ ಹಕ್ಕು ಸಮಸ್ಯೆಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ!

ಆದರೆ, ಇದಕ್ಕೆ ತಕ್ಕ ತಿರುಗೇಟು ನೀಡಿದ್ದ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ, ಭಾರತ ಕೂಡ ಅಮೆರಿಕದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ ಎಂದು ಅಮೆರಿಕ ನೆಲದಲ್ಲಿಯೇ ನಿಂತಿ ಹೇಳಿದ್ದರು.

click me!