
ಇಸ್ಲಾಮಾಬಾದ್ : ಆರ್ಥಿಕವಾಗಿ ಜರ್ಜರಿತಗೊಂಡಿರುವ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆ ನಡೆಸಿದ್ದು, ದೇಶದಲ್ಲಿ ಕಾರ್ಖಾನೆಗಳಿಗಿಂತ ಹೆಚ್ಚು ಮಸೀದಿ, ಮದರಸಾಗಳೇ ಇವೆ ಎಂದು ಹೇಳಿದೆ.
ಪಾಕಿಸ್ತಾನದಲ್ಲಿ ಒಟ್ಟು 6 ಲಕ್ಷ ಮಸೀದಿಗಳಿದ್ದು, 36 ಸಾವಿರ ಧಾರ್ಮಿಕ ಕೇಂದ್ರಗಳಿವೆ. ಆದರೆ ಕಾರ್ಖಾನೆಗಳ ಸಂಖ್ಯೆ ಕೇವಲ 23 ಸಾವಿರವಷ್ಟೇ. 6.30 ಲಕ್ಷ ಸಣ್ಣ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪಾಕ್‌ನ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಹೇಳಿದ್ದಾರೆ.
ಐಎಂಎಫ್‌ನಿಂದ ಮತ್ತೆ 7 ಬಿಲಿಯನ್ ಡಾಲರ್ (17 ಸಾವಿರ ಕೋಟಿ ರು.) ಸಾಲ ಪಡೆಯಲು ಮಾತುಕತೆ ಶುರುಮಾಡುವ ಮುನ್ನ ಈ ವರದಿಯು ಬಹಿರಂಗವಾಗಿದೆ.
ಸಿಂದೂರದಲ್ಲಿ 13 ತನ್ನ ಯೋಧರು ಸಾವು : ಪಾಕ್ ಒಪ್ಪಿಗೆ
ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರದಲ್ಲಿ ತನಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನದ ಹಣೆಬರಹ ಇದೀಗ ಅದು ಹಮ್ಮಿಕೊಂಡ ಕಾರ್ಯಕ್ರಮದಿಂದಲೇ ಜಗಜ್ಜಾಹೀರಾಗಿದೆ. ಸ್ಕ್ವಾಡ್ರನ್ ಲೀಡರ್ ಸೇರಿ ಅದರ 13 ಯೋಧರು ಸಾವನ್ನಪ್ಪಿದ್ದು ಈಗ ದೃಢಪಟ್ಟಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಆಪರೇಷನ್ ಸಿಂದೂರದ ವೇಳೆ ಸಾವನ್ನಪ್ಪಿದ್ದ ಸೇನಾಧಿಕಾರಿಗಳಿಗೆ ಪಾಕಿಸ್ತಾನದ ಸ್ವಾತಂತ್ರ್ಯದಿನವಾದ ಆ.14ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ, ತಮ್ಘ-ಇ-ಬಸಲತ್ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ಹವಾಲ್ದಾರ್ ಮುಹಮ್ಮದ್ ನವೀದ್, ನಾಯಕ್ ವಕಾರ್ ಖಾಲಿದ್ ಮತ್ತು ಲ್ಯಾನ್ಸ್ ನಾಯಕ್ ದಿಲಾವರ್ ಖಾನ್‌ಗೆ ನೀಡಲಾಗಿದೆ. ಅದೇ ರೀತಿ, ತಮ್ಘ-ಇ-ಜುರತ್ ಪ್ರಶಸ್ತಿಯನ್ನು ನಾಯಕ್ ಅಬ್ದುಲ್ ರೆಹಮಾನ್, ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ ಮತ್ತು ಸಿಪಾಯಿ ಅದೀಲ್ ಅಕ್ಬರ್ ಮೊದಲಾದವರಿಗೆ ಪ್ರದಾನ ಮಾಡಲಾಗಿದೆ.
ಭಾರತ ಭೋಲಾರಿ ವಾಯುನೆಲೆ ಮೇಲೆ ನಡೆಸಿದ ದಾಳಿಯಲ್ಲಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಸಾವನ್ನಪ್ಪಿದ್ದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. 13 ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನರನ್ನು ಕಳೆದುಕೊಂಡಿರುವುದಾಗಿಯೂ ಶತ್ರುದೇಶ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ