
ವಾಶಿಂಗ್ಟನ್ (ಡಿ.18) ಪಾಕಿಸ್ತಾನ ಪರಿಸ್ಥಿತಿ ಹೇಗಾಗಿದೆ ಎಂದರೆ ಶೌಚಾಲಯಕ್ಕೆ ಹೋಗಿ ನಲ್ಲಿ ತಿರುಗಿಸಲು ಮತ್ತೊಬ್ಬರ ಕೇಳುವ ಹಾಗಿದೆ. ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀಡಿದ ಸಾಲದಿಂದ ಪಾಕಿಸ್ತಾನ ಉಸಿರಾಡುತ್ತಿದೆ. ಇದರ ನಡುವೆ ಸಾವಿರ ಸಮಸ್ಯೆಗಳು ಪಾಕಿಸ್ತಾನ ಮೇಲಿದೆ. ಈ ಪೈಕಿ ಜನಸಂಖ್ಯೆ ಹೆಚ್ಚಳ ಕೂಡ ಪ್ರಮುಖವಾಗಿದೆ. ಇದರಿಂದ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಹೊರೆಯಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಕಾಂಡೋಮ್ ಹಾಗೂ ಗರ್ಭನಿರೋಧ ಔಷಧಿಗಳ ಮೇಲಿನ ಶೇಕಡಾ 18ರಷ್ಟು ಜಿಎಸ್‌ಟಿಯನ್ನು ಕಡಿತಗೊಳಿಸಲು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಮನವಿ ಮಾಡಿದ್ದಾರೆ. ಆದರೆ ಪಾಕಿಸ್ತಾನ ಮನವಿ ತಿರಸ್ಕರಿಸಿದ ಐಎಂಎಫ್, ನಿಮಗೆ ಕೊಟ್ಟಿರುವುದು ಆರ್ಥಿಕ ಅನಿವಾರ್ಯತೆಯ ಸಾಲ, ಮೊದಲು ನೀವು ದೇಶವನ್ನು ದಿವಾಳಿಯಾಗೋದು ತಪ್ಪಿಸಿ ಎಂದು ಸೂಚನೆ ನೀಡಿದೆ.
ಪಾಕಿಸ್ತಾನ ಪ್ರಧಾನಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಐಎಂಎಫ್, ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಸಾಲ ನೀಡಲಾಗಿದೆ. ಸಾಲು ಹಾಗೂ ಅನುದಾನಗಳ ಮೇಲೆ ಪಾಕಿಸ್ತಾನ ನಿಂತಿದೆ. ಹೀಗಾಗಿ ಸದ್ಯ ನೀಡಿರುವ ಸಾಲದಲ್ಲಿ ಪಾಕಿಸ್ತಾನವನ್ನು ದಿವಾಳಿಯಾಗೋದು ತಪ್ಪಿಸಬೇಕು. ಐಎಂಎಫ್ ವಿಧಿಸಿದ ಷರತ್ತುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಇನ್ನು ಕಾಂಡೋಮ್ ಸೇರಿದಂತೆ ಗರ್ಭನಿರೋಧಕಗಳ ಮೇಲಿರುವ ಶೇಕಡಾ 18ರಷ್ಟು ಜಿಎಸ್‌ಟಿ ವಿನಾಯಿತಿಯನ್ನು ನೀಡಲು ಸದ್ಯಕ್ಕೆ ಸಾಧ್ಯವಿಲ್ಲ. ಮುಂದಿನ ವರ್ಷದ ಆರ್ಥಿಕ ಬಜೆಟ್‌ನಲ್ಲಿ ಈ ಮನವಿ ಪರಿಗಣಿಸುತ್ತೇವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಪಾಕಿಸ್ತಾನದ ಆರ್ಥಿಕತೆಗೆ ನೆರವಾಗಲು ಹಣಕಾಸು ನಿದಿ 3.3 ಬಿಲಿಯನ್ ಸಾಲ ನೀಡಿದೆ. ಬಳಿಕ 1.2 ಬಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಅನುಮೋದಿಸಿದೆ. ಅನುದಾನಗಳ ಮೇಲೆ ಅವಲಂಬಿತವಾಗಿರುವ ಪಾಕಿಸ್ತಾನಕ್ಕೆ 37 ತಿಂಗಳ ವಿಸ್ತರಣೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ನೀಡಿದೆ. ಈ ಸಾಲದಲ್ಲಿ ಪಾಕಿಸ್ತಾನ ಆರ್ಥಿಕ ಶಿಸ್ತು ತೋರಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನ ದಿವಾಳಿಯಾಗಲಿದೆ. ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ.
ಒಂದೆಡೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಯಾವಾಗ ಪರ್ವೇಜ್ ಮುಶರಫ್ ರೂಪ ತಾಳುತ್ತಾರೋ ಅನ್ನೋ ಭಯದಲ್ಲಿ ಪ್ರತಿ ತಿಂಗಳು ಅಸೀಮ್ ಮನೀರ್‌ಗೆ ಉನ್ನತ ಪದವಿಗಳನ್ನು ನೀಡಲಾಗುತ್ತಿದೆ. ಪರಮೋನ್ನತ್ತ ಅಧಿಕಾರವನ್ನು ನೀಡಲಾಗಿದೆ. ಈ ಮೂಲಕ ಶಹಬಾಜ್ ಷರೀಫ್ ಪದಚ್ಯುತಗೊಳಿಸಿ ಸರ್ಕಾರ ಪತನ ಮಾಡದಂತೆ ಮಾಡುವ ಎಲ್ಲಾ ಪ್ರಯತ್ನ ಮಾಡಲಾಗಿದೆ. ಇತ್ತ ದಿನದಿಂದ ದಿನಕ್ಕೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಪಾಕಿಸ್ತಾನ ಆಮದು ಮಾಡಿಕೊಳ್ಳುವ ಕಾಂಡೋಮ್ ಹಾಗೂ ಗರ್ಭನಿರೋಧಕಗಳ ಮೇಲೆ ಶೇಕಡಾ 18ರಷ್ಟು ಜಿಎಸ್‌ಟಿ ವಿಧಿಸಿರುವ ಕಾರಣ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಜಿಎಸ್‌ಟಿ ವಿನಾಯಿತಿಗೆ ಮನವಿ ಮಾಡಲಾಗಿದೆ.
ಪಾಕಿಸ್ತಾನದಲ್ಲಿ ಜನಸಂಖ್ಯೆ ಬೆಳವಣಿಗೆ ಶೇಕಡಾ 2.55ರಷ್ಟಿದೆ. ಇದು ವಿಶ್ವದಲ್ಲೇ ಅತ್ಯಂತ ಹೆಚ್ಚು. ಪ್ರತಿ ವರ್ಷ 6 ಮಿಲಿಯನ್ ಜನಸಂಖ್ಯೆ ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿದೆ. ಕಟುಂಬ ಯೋಜನೆ ಮೂಲಕ ಕಾಂಡೋಮ್, ಗರ್ಭನಿರೋಧ ಉಚಿತವಾಗಿ ವಿತರಿಸಲು ಸಾಧ್ಯವಾಗುತ್ತಿಲ್ಲ. ಜನರಿಗೆ ಮೂಲಭೂತ ಸೌಲಭ್ಯ ನೀಡಲು, ಆಹಾರ, ಔಷಧಿ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳನ್ನು ನೀಡಲು ಪಾಕಿಸ್ತಾನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಂಡೋಮ್ ಸೇರಿದಂತೆ ಗರ್ಭನಿರೋಧಗಳ ಮೇಲಿನ ಜಿಎಸ್‌ಟಿ ಕಡಿತ ಮಾಡುವಂತೆ ಮನವಿ ಮಾಡಿದೆ. ಆದರೆ ಈ ಮನವಿ ತಿರಸ್ಕಾರಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ