56 ಸಾವಿರ ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ

Published : Dec 18, 2025, 06:21 PM IST
Saudi Arabia Deports 56,000 Pakistani Beggars

ಸಾರಾಂಶ

ಸಂಘಟಿತ ಭಿಕ್ಷಾಟನೆ ಮತ್ತು ಅಪರಾಧ ಕೃತ್ಯಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಪಾಕಿಸ್ತಾನಿ ಪ್ರಜೆಗಳ ಮೇಲೆ ಕಠಿಣ ಕ್ರಮ ಕೈಗೊಂಡಿವೆ. ಸೌದಿ ಅರೇಬಿಯಾವೊಂದರಿಂದಲೇ 56000 ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಲಾಗಿದೆ.

ಸೌದಿ ಅರೇಬಿಯಾವೂ 56000 ಪಾಕಿಸ್ತಾನಿ ಭಿಕ್ಷುಕರನ್ನು ಆ ದೇಶಕ್ಕೆ ಗಡೀಪಾರು ಮಾಡಿ ಎಚ್ಚರಿಕೆ ನೀಡಿದೆ. ಅಕ್ರಮವಾಗಿ ದೇಶಕ್ಕೆ ವಲಸೆ ಬಂದು ಇಲ್ಲಿ ಸಂಘಟಿತ ಭಿಕ್ಷಾಟನೆ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದರಿಂದ ಯುನೈಟೆಡ್ ಅರಬ್ ಎಮಿರೇಟ್‌ ಹಾಗೂ ಸೌದಿ ಅರೇಬಿಯಾ ದೇಶಗಳು ಪಾಕಿಸ್ತಾನದ ಪ್ರಜೆಗಳ ಮೇಲೆ ತೀವ್ರವಾದ ಕಣ್ಣಿಟ್ಟಿದ್ದು, ಕೇವಲ ಸೌದಿ ಅರೇಬಿಯಾವೊಂದೇ ತನ್ನ ದೇಶದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಪಾಕಿಸ್ತಾನದ 56 ಸಾವಿರ ಜನರನ್ನು ಮರಳಿ ಆ ದೇಶಕ್ಕೆ ಗಡೀಪಾರು ಮಾಡಿದೆ.

ದೇಶಕ್ಕೆ ಬಂದು ಸಂಘಟಿತ ಭಿಕ್ಷಾಟನೆ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ಹಿನ್ನೆಲೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪಾಕಿಸ್ತಾನಿ ಪ್ರಜೆಗಳ ಮೇಲೆ ತಪಾಸಣೆಯನ್ನು ಬಿಗಿಗೊಳಿಸಿವೆ. ವಿದೇಶದಲ್ಲಿ ಪಾಕಿಸ್ತಾನದ ಜನರ ಈ ವರ್ತನೆ ದೇಶದ ಅಂತರರಾಷ್ಟ್ರೀಯ ಪ್ರತಿಷ್ಠೆಗೆ ಹಾನಿ ಮಾಡುತ್ತಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ.

ಯುಎಇ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದರೆ ಸೌದಿ ಅರೇಬಿಯಾವೂ 56,000ದಷ್ಟು ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿದ್ದು, ಅವರ ವಿರುದ್ಧ ಭಿಕ್ಷಾಟನೆ ಹಾಗೂ ಅಪರಾಧ ಕೃತ್ಯಗಳ ಆರೋಪ ಹೊರಿಸಿದೆ. ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿಯ ನೀಡಿದ ಮಾಹಿತಿಯೂ ಸಮಸ್ಯೆ ಪ್ರಮಾಣ ಎಷ್ಟು ತೀವ್ರವಾಗಿದೆ ಎಂದು ತೋರಿಸುತ್ತಿದೆ. 2025 ರಲ್ಲಿ, ಸಂಘಟಿತ ಭಿಕ್ಷಾಟನೆ ಸಿಂಡಿಕೇಟ್‌ಗಳನ್ನು ನಾಶಮಾಡಲು ಮತ್ತು ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ 66,154 ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ್ದರು.

ಈ ಜಾಲಗಳು ಪಾಕಿಸ್ತಾನದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುತ್ತಿವೆ ಎಂದು ಎಫ್‌ಐಎ ಮಹಾನಿರ್ದೇಶಕ ರಿಫತ್ ಮುಖ್ತಾರ್ ಹೇಳಿದ್ದಾರೆ. ಈ ಪ್ರವೃತ್ತಿ ಕೇವಲ ಕೊಲ್ಲಿಗೆ ಸೀಮಿತವಾಗಿಲ್ಲ. ಆಫ್ರಿಕಾ ಮತ್ತು ಯುರೋಪ್‌ಗೆ ಪ್ರಯಾಣ ಬೆಳೆಸುವುದರ ಜೊತೆಗೆ ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ತಾಣಗಳಿಗೆ ಇಲ್ಲಿಂದ ಜನ ಹೋಗುತ್ತಾರೆ, ಪ್ರವಾಸಿ ವೀಸಾಗಳ ದುರುಪಯೋಗವನ್ನು ಮಾಡುತ್ತಾರೆ ಇಂತಹ ಹಲವು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೇಪ್ ಆರೋಪಿ ಜೊತೆ ಸೇರಿಕೊಂಡು ವ್ಯಕ್ತಿ ವಿರುದ್ಧ ಸುಳ್ಳು ರೇಪ್‌ ಕೇಸ್ ಹಾಕಿದ ಮಹಿಳೆ ಬಂಧನ

ಮುಖ್ತಾರ್ ಅವರ ಪ್ರಕಾರ, ಸೌದಿ ಅರೇಬಿಯಾ ಈ ವರ್ಷ ಭಿಕ್ಷಾಟನೆ ಆರೋಪದ ಮೇಲೆ 24,000 ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿದೆ. ದುಬೈ ಸುಮಾರು 6,000 ವ್ಯಕ್ತಿಗಳನ್ನು ವಾಪಸ್ ಕಳುಹಿಸಿದರೆ, ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿದೆ. ಈ ವಿಚಾರದ ಬಗ್ಗೆ ಕಳೆದ ವರ್ಷ ಸೌದಿ ಅಧಿಕಾರಿಗಳು ತೀವ್ರ ಗಮನ ಸೆಳೆದಿದ್ದರು. 2024ರಲ್ಲಿ ಭಿಕ್ಷುಕರು ಭಿಕ್ಷೆಗಾಗಿ ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣಿಸಲು ಉಮ್ರಾ ವೀಸಾಗಳನ್ನು ಬಳಸಿಕೊಳ್ಳುವುದನ್ನು ತಡೆಯುವಂತೆ ರಿಯಾದ್ ಪಾಕಿಸ್ತಾನವನ್ನು ಔಪಚಾರಿಕವಾಗಿ ಒತ್ತಾಯಿಸಿತ್ತು. ಇದನ್ನು ತಡೆಯುವಲ್ಲಿ ವಿಫಲವಾದರೆ ಪಾಕಿಸ್ತಾನಿ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು ಎಂದು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಆ ಸಮಯದಲ್ಲಿ ಎಚ್ಚರಿಸಿತ್ತು.

ಈ ವಿದ್ಯಮಾನವನ್ನು ಪಾಕಿಸ್ತಾನದ ಕಾನೂನು ತಜ್ಞರು ಕೂಡ ವಿಶ್ಲೇಷಿಸಿದ್ದಾರೆ. ಕಳೆದ ವರ್ಷ ಡಾನ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ವಕೀಲೆ ರಫಿಯಾ ಜಕಾರಿಯಾ ಭಿಕ್ಷಾಟನೆಯನ್ನು ಹತಾಶೆಯ ಕ್ರಿಯೆಗಿಂತ ಹೆಚ್ಚು ರಚನಾತ್ಮಕ ಉದ್ಯಮ ಎಂದು ಬಣ್ಣಿಸಿದ್ದರು. ಪಾಕಿಸ್ತಾನದಲ್ಲಿ ಬಹಳ ಸಂಘಟಿತವಾಗಿರುವಂತೆ ಕಾಣುವ ಮತ್ತು ತನ್ನ ನೇಮಕಾತಿ ಮಾಡಿಕೊಳ್ಳುವವರಿಗೆ ಸಾಕಷ್ಟು ಕೆಲಸವಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಸಾಕಷ್ಟು ಯಶಸ್ವಿಯಾಗಿರುವ ಒಂದು ಉದ್ಯಮವೆಂದರೆ ಭಿಕ್ಷಾಟನಾ ಉದ್ಯಮ. ಇದು ಎಷ್ಟು ಯಶಸ್ವಿ ಉದ್ಯಮವೆಂದರೆ ಈಗ ಅದು ಇತರ ದೇಶಗಳಿಗೆ ರಫ್ತು ಮಾಡಲು ಮತ್ತು ವಿಸ್ತರಿಸಲು ನಿರ್ಧರಿಸಿದೆ ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: ಲಂಡನ್‌ನಲ್ಲಿ ವಿಜಯ್‌ ಮಲ್ಯ 70ನೇ ಬರ್ತ್‌ಡೇಗೆ ಲಲಿತ್ ಮೋದಿಯಿಂದ ಅದ್ದೂರಿ ಪಾರ್ಟಿ: ಕಿರಣ್ ಮಜುಂದಾರ್ ಭಾಗಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕ್‌ನಲ್ಲಿ ಧರುಂದರ್ ಸಿನಿಮಾ ಬ್ಯಾನ್ ಆದ್ರೂ ನಾಯಕ ಬಿಲ್ವಾಲ್ ಭುಟ್ಟೋ ಈವೆಂಟ್‌ನಲ್ಲಿ ವೈರಲ್ ಹಾಡು
ವಿದೇಶಿ ಸಂಸತ್ತಲ್ಲಿ ಮೋದಿ 18ನೇ ಭಾಷಣ