
ನವದೆಹಲಿ: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರದ ಒಡೆತನದ ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್‌ಎಎಲ್), ರಷ್ಯಾದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಯೊಂದಕ್ಕೆ ಸೂಕ್ಷ್ಮ ತಂತ್ರಜ್ಞಾನವನ್ನು ನೀಡಿದೆ ಎಂದು ಆರೋಪಿಸಿ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ವರದಿ ಪ್ರಕಟಿಸಿದೆ. ಆದರೆ ವರದಿಯನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವಾಲಯ, ‘ಈ ವರದಿ ವಾಸ್ತವಿಕವಾಗಿ ತಪ್ಪಾಗಿದ್ದು, ದಾರಿತಪ್ಪಿಸುವಂತಿದೆ. ತನ್ನ ರಾಜಕೀಯ ನಿರೂಪಣೆಗೆ ಸರಿಹೊಂದುವಂತೆ ಸಮಸ್ಯೆಗಳನ್ನು ಸೃಷ್ಟಿಸಲು ಮತ್ತು ಸತ್ಯಗಳನ್ನು ವಿರೂಪಗೊಳಿಸುವ ಯತ್ನವಾಗಿದೆ’ ಎಂದು ತಿರುಗೇಟು ನೀಡಿದೆ.
ವರದಿಯಲ್ಲಿ ಏನಿದೆ?:
ಮಾ.28ರಂದು ವರದಿಯೊಂದನ್ನು ಪ್ರಕಟಿಸಿದ್ದ ‘ನ್ಯೂಯಾರ್ಕ್ ಟೈಮ್ಸ್’ , ‘ಬ್ರಿಟನ್‌ನ ಎಚ್ಆರ್ ಸ್ಮಿತ್ ಗ್ರೂಪ್, 2023-24ರ ಅವಧಿಯಲ್ಲಿ 118 ಬಾರಿ ಎಚ್‌ಎಎಲ್‌ಗೆ ಟ್ರಾನ್ಸ್‌ಮಿಟರ್, ಕಾಕ್‌ಪಿಟ್ ಸಾಮಗ್ರಿ ಹಾಗೂ ಕೆಲ ಸೂಕ್ಞ್ಮ ತಂತ್ರಜ್ಞಾನವನ್ನು ಸಾಗಿಸಿತ್ತು. ಇದನ್ನು ಎಚ್‌ಎಎಲ್ 13 ಬಾರಿ ರಷ್ಯಾದ ರೊಸೊಬೊರೊನ್ ಎಕ್ಸ್‌ಪೋರ್ಟ್ ಎಂಬ ಕಂಪನಿಗೆ ಸಾಗಿಸಿದೆ. ಉಕ್ರೇನ್‌ನೊಂದಿಗಿನ ಯುದ್ಧದ ಹಿನ್ನೆಲೆಯಲ್ಲಿ ಈ ವ್ಯಾಪಾರವನ್ನು ನಡೆಸದಂತೆ ಅಮೆರಿಕ ಮತ್ತು ಬ್ರಿಟನ್ ಸೂಚಿಸಿದ್ದವು ಹಾಗೂ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದವು. ಅದರ ಹೊರತಾಗಿಯೂ ಎಚ್‌ಎಎಲ್ ರಷ್ಯಾ ಕಂಪನಿಗೆ ಸೂಕ್ಷ್ಮ ರಕ್ಷಣಾ ಉಪಕರಣಗಳನ್ನು ವರ್ಗಾಯಿಸಿದೆ. ಹೀಗೆ ಎಚ್‌ಎಎಲ್ ಹಾಗೂ ರಷ್ಯಾದ ಕಂಪನಿ ನಡುವೆ ನಡೆದ ವ್ಯಾಪಾರದ ಮೌಲ್ಯ 119 ಕೋಟಿ ರು.’ ಎಂದು ವರದಿ ಹೇಳಿದೆ.
ಭಾರತ ತಿರುಗೇಟು:
ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ತಳ್ಳಿಹಾಕಿರುವ ಭಾರತದ ವಿದೇಶಾಂಗ ಸಚಿವಾಲಯ, ‘ವಾಸ್ತವಿಕವಾಗಿ ತಪ್ಪಾಗಿದ್ದು, ದಾರಿತಪ್ಪಿಸುವಂತಿದೆ. ಎಚ್‌ಎಎಲ್ ವ್ಯಾಪಾರ ನಿಯಂತ್ರಣ ಮತ್ತು ಅಂತಿಮ ಬಳಕೆದಾರ ಬದ್ಧತೆಗಳ ಎಲ್ಲಾ ಅಂತಾರಾಷ್ಟ್ರೀಯ ಬಾಧ್ಯತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ. ವ್ಯೂಹಾತ್ಮಕ ವ್ಯಾಪಾರದ ಕುರಿತು ಭಾರತದ ಕಾನೂನು ಮತ್ತು ನಿಯಂತ್ರಕ ಚೌಕಟ್ಟು ತನ್ನ ಸಾಗರೋತ್ತರ ಉದ್ಯಮಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸಿದೆ’ ಎಂದು ಸ್ಪಷ್ಟನೆ ನೀಡಿದೆ.
ಬ್ರಿಟನ್ ಕಂಪನಿ ಸ್ಪಷ್ಟನೆ:
ಅತ್ತ ಎಚ್‌ಎಎಲ್‌ಗೆ ಉಪಕರಣಗಳನ್ನು ನೀಡಿದ್ದ ಬ್ರಿಟನ್‌ನ ಎಚ್ಆರ್ ಸ್ಮಿತ್ ಗ್ರೂಪ್, ‘ಅವುಗಳನ್ನು ಶೋಧ ಮತ್ತು ರಕ್ಷಣೆಗೆ ಬಳಸಬಹುದೇ ಹೊರತು ಸೇನೆಯಲ್ಲಿ ಬಳಸಲಾಗದು’ ಎಂದಿದೆ. ಆದರೆ ಈ ಬಗ್ಗೆ ಎಚ್‌ಎಎಲ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.
ಬೆಂಗಳೂರು-ತುಮಕೂರು ಪ್ಲ್ಯಾಂಟ್‌ಗೆ ಪ್ರಚಂಡ ಬಂಪರ್, ಇತಿಹಾಸದಲ್ಲೇ ಅತಿದೊಡ್ಡ ಆರ್ಡರ್ ಪಡೆದ ಎಚ್‌ಎಎಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ