ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾದೇಶದ ಆಡಳಿತದ ಚುಕ್ಕಾಣಿ ಹಿಡಿದ ಮಧ್ಯಂತರ ಸರ್ಕಾರದ ಮುಖ್ಯಸ್ಥ, ಮುಹಮ್ಮದ್ ಯೂನಸ್ ತಮ್ಮ ಭಾರತ ವಿರೋಧಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಜೊತೆಗೆ ಚೀನಾ ಪ್ರೀತಿಯನ್ನೂ ಮೆರೆದಿದ್ದಾರೆ.
ನವದೆಹಲಿ: ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾದೇಶದ ಆಡಳಿತದ ಚುಕ್ಕಾಣಿ ಹಿಡಿದ ಮಧ್ಯಂತರ ಸರ್ಕಾರದ ಮುಖ್ಯಸ್ಥ, ಮುಹಮ್ಮದ್ ಯೂನಸ್ ತಮ್ಮ ಭಾರತ ವಿರೋಧಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಜೊತೆಗೆ ಚೀನಾ ಪ್ರೀತಿಯನ್ನೂ ಮೆರೆದಿದ್ದಾರೆ.
ಇತ್ತೀಚಿನ ತಮ್ಮ ಬೀಜಿಂಗ್ ಭೇಟಿ ವೇಳೆ ಮಾತನಾಡಿದ ಯೂನಸ್, ‘ಭಾರತದ ಈಶಾನ್ಯದಲ್ಲಿರುವ 7 ಸಹೋದರಿ ರಾಜ್ಯಗಳ ಬಳಿ ಇರುವ ಸಮುದ್ರ ಭಾಗಕ್ಕೆ ಬಾಂಗ್ಲಾ ಏಕೈಕ ಅಧಿಪತಿ. ಕಾರಣ, ಆ ರಾಜ್ಯಗಳು ಸಂಪೂರ್ಣ ಭೂಮಿಯಿಂದ ಸುತ್ತುವರೆದಿವೆ. ಅವುಗಳು ಕಡಲನ್ನು ಬಳಸಲು ಬಾಂಗ್ಲಾದ ಮೇಲೆ ಅವಲಂಬಿತವಾಗಿವೆ ಎಂದು ಹೇಳಿದ್ದಾರೆ. ಜೊತೆಗೆ, ಆ ರಾಜ್ಯಗಳು ಚೀನಾದ ಆರ್ಥಿಕತೆಯ ಭಾಗದಂತಿರಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ, ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಸಂಪರ್ಕಿಸುವ ಚಿಕನ್ ನೆಕ್‌ಗೆ ಸಮೀಪವಿರುವ, ಸಿಕ್ಕಿಂನಿಂದ ಬಾಂಗ್ಲಾಗೆ ಹರಿಯುವ ತೀಸ್ತಾ ನದಿ ಸಂರಕ್ಷಣಾ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಅವರು ಚೀನಾಗೆ ಆಹ್ವಾನ ನೀಡಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಈ ಯೋಜನೆಗೆ ಬೆಂಬಲ ಸೂಚಿಸಿದ್ದ ಭಾರತ, ತಾಂತ್ರಿಕ ತಂಡವನ್ನು ಕಳಿಸಲೂ ಒಪ್ಪಿಕೊಂಡಿತ್ತು. ಅಂತೆಯೇ, ಸರಕು ಸಾಗಣೆಗೆ ಚಿತ್ತಗಾಂಗ್ ಬಂದರನ್ನು ಬಳಸಲು 2017ರಲ್ಲಿ ಭಾರತಕ್ಕೆ ಅನುಮತಿಸಿದ್ದ ಬಾಂಗ್ಲಾ ಇದೀಗ ಅದರ ಬಳಿ ಆರ್ಥಿಕ ಮತ್ತು ಕೈಗಾರಿಕಾ ಪಾರ್ಕ್ ನಿರ್ಮಿಸುವಲ್ಲಿ ಚೀನಾದೊಂದಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದೆ.