ಇರಾನ್‌ಗೆ ಟ್ರಂಪ್‌ ಭೂದಾಳಿ ? ತಿಂಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ವಿಕೋಪದತ್ತ

Kannadaprabha News   | Kannada Prabha
Published : Mar 30, 2026, 07:21 AM IST
Donald Trump

ಸಾರಾಂಶ

ಇರಾನ್‌ ಮೇಲಿನ ವೈಮಾನಿಕ ದಾಳಿ 1 ತಿಂಗಳಿಂದ ನಡೆದಿರುವ ನಡುವೆಯೇ ಅಮೆರಿಕವು ಇದೀಗ ಖಾರ್ಗ್ ದ್ವೀಪದ ಮೇಲೆ ಹಾಗೂ ಹೋರ್ಮುಜ್‌ ಜಲಸಂಧಿ ಸಮೀಪದ ಪ್ರದೇಶಗಳ ಮೇಲೆ ಭೂಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ವಾಷಿಂಗ್ಟನ್‌: ಇರಾನ್‌ ಮೇಲಿನ ವೈಮಾನಿಕ ದಾಳಿ 1 ತಿಂಗಳಿಂದ ನಡೆದಿರುವ ನಡುವೆಯೇ ಅಮೆರಿಕವು ಇದೀಗ ಖಾರ್ಗ್ ದ್ವೀಪದ ಮೇಲೆ ಹಾಗೂ ಹೋರ್ಮುಜ್‌ ಜಲಸಂಧಿ ಸಮೀಪದ ಪ್ರದೇಶಗಳ ಮೇಲೆ ಭೂಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

‘ಹಲವು ವಾರ ಕಾಲ ಮುಂದುವರಿಯಬಹುದಾದ ಈ ಕಾರ್ಯಾಚರಣೆಗೆ ಈಗಾಗಲೇ ಯೋಜನೆ ಹಾಕಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಂತಿಮ ಮುದ್ರೆಗೆ ಎದುರು ನೋಡಲಾಗುತ್ತಿದೆ. ಟ್ರಂಪ್‌ ಒಪ್ಪಿಗೆ ಸಿಕ್ಕರೆ ಶೀಘ್ರದಲ್ಲೇ ಅಮೆರಿಕದ ವಿಶೇಷ ಪಡೆಗಳು ಭೂಸೇನಾ ಕಾರ್ಯಾಚರಣೆಗಿಳಿಯಲಿವೆ. ಈ ಮೂಲಕ ಇರಾನ್‌ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ’ ಎಂದು ವರದಿ ಹೇಳಿದೆ.

ಗುರಿ ಆಧರಿತ ದಾಳಿ:

ಮೂಲಗಳ ಪ್ರಕಾರ, ಇದೊಂದು ಗುರಿ ಆಧಾರಿತ ಕಾರ್ಯಾಚರಣೆ (ಪ್ರಿಸೈಸ್‌ ಸ್ಟ್ರೈಕ್‌) ಆಗಿದ್ದು, ಕೇವಲ ಖಾರ್ಗ್‌ ದ್ವೀಪ, ಹೋರ್ಮುಜ್‌ ಜಲಸಂಧಿ ಸಮೀಪದ ಅಕ್ಕಪಕ್ಕದ ಸಣ್ಣಪುಟ್ಟ ದ್ವೀಪಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಇರಾನ್‌ನ ಸೇನಾ ಉಪಕರಣಗಳನ್ನು ನಾಶ ಮಾಡಲಾಗುತ್ತದೆ. ಈ ಮೂಲಕ ಹೋರ್ಮುಜ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸುರಕ್ಷಿತಗೊಳಿಸುವುದು ಅಮೆರಿಕದ ಮುಖ್ಯ ಉದ್ದೇಶವಾಗಿದೆ.

ಏಕೆ ದಾಳಿ?:

ಖಾರ್ಗ್‌ ದ್ವೀಪವನ್ನು ಇರಾನ್‌ನ ‘ಮುಕುಟಮಣಿ’ ಎಂದೇ ಕರೆಯಲಾಗುತ್ತದೆ. ದೇಶದ ಶೇ.90ರಷ್ಟು ತೈಲ ರಫ್ತು ಈ ದ್ವೀಪದ ಮೂಲಕವೇ ನಡೆಯುತ್ತದೆ. ಈ ದ್ವೀಪ ಹಾಗೂ ಹೋರ್ಮುಜ್‌ ಜಲಸಂಧಿ ಸಮೀಪದ ಇತರೆ ಪ್ರದೇಶಗಳ ಮೇಲಿನ ಭೂಸೇನಾ ಕಾರ್ಯಾಚರಣೆ ಕುರಿತು ಟ್ರಂಪ್‌ ಆಡಳಿತ ಈಗಾಗಲೇ ಚರ್ಚೆ ಆರಂಭಿಸಿದೆ. ಖಾರ್ಗ್‌ ಜತೆಗೆ ಲರಾಕ್‌ ಹಾಗೂ ಸಮೀಪದ ಅಬುಮೂಸಾ ದ್ವೀಪಗಳನ್ನು ವಶಪಡಿಸಿಕೊಂಡರೆ ಹೋರ್ಮುಜ್‌ ಜಲಸಂಧಿ ಮೇಲಿನ ಇರಾನ್‌ ನಿಯಂತ್ರಣ ಸಂಪೂರ್ಣ ತಪ್ಪಿಹೋದಂತಾಗಲಿದೆ. ಜತೆಗೆ, ಇರಾನ್‌ನ ಆರ್ಥಿಕತೆಯ ಮೇಲೂ ಭಾರೀ ಹೊಡೆತ ಬೀಳಲಿದೆ.

ರಕ್ಷಣೆಯೇ ಸವಾಲು:

ಕೆಲವು ಮಾಧ್ಯಮ ವರದಿಗಳ ಪ್ರಕಾರ ಅಮೆರಿಕವು ಈಗಾಗಲೇ ಮಧ್ಯಪ್ರಾಚ್ಯದ ಸುತ್ತ 10 ಸಾವಿರ ಯೋಧರನ್ನು ನಿಯೋಜಿಸಿದ್ದು, ಇನ್ನೂ 10,000 ಹೆಚ್ಚುವರಿ ಸೈನಿಕರನ್ನು ಕಳುಹಿಸಲು ಯೋಜಿಸುತ್ತಿದೆ. ಇದು ಒಟ್ಟು ಅಮೆರಿಕದ ಪಡೆಗಳ ಸಂಖ್ಯೆಯನ್ನು 20,000ಕ್ಕೆ ಏರಿಸಲಿದೆ.

ಅಬ್ರಹಾಂ ಲಿಂಕನ್‌ ನೌಕೆ ಮಧ್ಯಪ್ರಾಚ್ಯ ಸನಿಹದಲ್ಲಿದ್ದು, ಇನ್ನೂ 2 ನೌಕೆಗಳು ಸಮರ ಸಲಕರಣೆ ಹೊತ್ತು ಇರಾನ್‌ ಸನಿಹ ಧಾವಿಸಲು ಸಿದ್ಧವಾಗಿವೆ.

ಏತನ್ಮಧ್ಯೆ, ಇರಾನ್ 10 ಲಕ್ಷ ಯೋಧರ ಪಡೆಗಳನ್ನು ಸಜ್ಜುಗೊಳಿಸುತ್ತಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಅಧಿಕೃತವಾಗಿ ದೃಢಪಟ್ಟಿಲ್ಲ. ಜನರು ಸೇನೆಗೆ ಸೇರುವ ವಯಸ್ಸನ್ನು ಇರಾನ್‌ 12ಕ್ಕೆ ಇಳಿಸಿದ್ದು, ಚಿಕ್ಕ ಮಕ್ಕಳನ್ನು ಯೋಧರ ಸಹಾಯಕ್ಕೆ ಬಳಸಿಕೊಳ್ಳಲಾಗುತ್ತದೆ.

ಅದು ಉತ್ತಮ ಹೊಂದಾಣಿಕೆಯೇ?

ಅಮೆರಿಕ ಈಗಾಗಲೇ ಭೂಸೇನಾ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿದ್ದೂ, ಯೋಧರ ರಕ್ಷಣೆಯೇ ಸದ್ಯದ ಪಾಲಿಗೆ ದೊಡ್ಡಸವಾಲಾಗಿದೆ. ಯೋಧರನ್ನು ಖಾರ್ಗ್‌ ದ್ವೀಪಕ್ಕೆ ಕಳುಹಿಸಿಕೊಟ್ಟರೆ ಅವರು ಇರಾನ್‌ನ ಕ್ಷಿಪಣಿ, ಡ್ರೋನ್‌ ದಾಳಿಗೆ ಸುಲಭ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕದ ಮತ್ತೊಂದು ನೌಕೆ ಮಧ್ಯಪ್ರಾಚ್ಯಕ್ಕೆ

ದುಬೈ: ಇರಾನ್‌ ಮೇಲೆ ಅಮೆರಿಕ ಭೂದಾಳಿ ನಡೆಸಲಿದೆ ಎಂಬ ಗುಸುಗುಸು ಮಧ್ಯೆ ಮಧ್ಯಪ್ರಾಚ್ಯಕ್ಕೆ ‘ಯುಎಸ್ಎಸ್ ಟ್ರಿಪೋಲಿ’ ಎಂಬ ಯುದ್ಧನೌಕೆ ಶನಿವಾರ ಆಗಮಿಸಿದೆ. ಅಮೆರಿಕ ಕೇಂದ್ರ ಕಮಾಂಡ್ ಪ್ರಕಾರ, ಸುಮಾರು 3,500 ಯೋಧರು ಇದರಲ್ಲಿದ್ದಾರೆ. ಇದಲ್ಲದೆ, ಯುದ್ಧ ವಿಮಾನಗಳು ಹಾಗೂ ಸರಕು ವಿಮಾನಗಳೂ ಇದರಲ್ಲಿವೆ. ಇರಾನ್‌ ಮೇಲಿನ ಯುದ್ಧಕ್ಕೂ ಮುನ್ನವೇ ಅಬ್ರಹಾಂ ಲಿಂಕನ್‌ ಯುದ್ಧನೌಕೆ ಮಧ್ಯಪ್ರಾಚ್ಯದ ಸಮುದ್ರ ವಲಯದಲ್ಲಿ ಸುಳಿದಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ವಿರುದ್ಧ ತವರಲ್ಲೇ ಭುಗಿಲೆದ್ದ ಯುದ್ಧ !
ಸೌದಿ ಏರ್‌ಬೇಸ್‌ಗೆ ಇರಾನ್‌ ದಾಳಿ : ಅಮೆರಿಕ ವಿಮಾನ ಧ್ವಂಸ