
ಭೂಕಂಪನ ಸಂಭವಿಸಿದಾಗ ಭೂಮಿ ಕುಸಿದಾಗ, ಪ್ರವಾಹ ಪ್ರಳಯ ಆದಾಗ ನಿಂತ ನೆಲವೇ ಕುಸಿದು ಕಟ್ಟಡಗಳು ಮನುಷ್ಯರು ಪ್ರಾಣಿಗಳೆನ್ನುವರ ಯಾವುದೇ ಬೇಧವಿಲ್ಲದೇ ಪ್ರವಾಹದೊಂದಿಗೆ ಪ್ರಕೃತಿ ಮಡಿಲು ಸೇರುವುದನ್ನು ನಿಜವಾಗಿಯೂ ಅಥವಾ ಸಿನಿಮಾಗಳಲ್ಲಿಯೂ ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ನಿಜವಾಗಿಯೂ ಇದ್ದಕ್ಕಿದ್ದಂತೆ ಭೂಮಿ ಬಾಯ್ತರೆದು ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳು, ಕರೆಂಟ್ ಕಂಬಗಳನ್ನು ಬಿಡದೇ ಎಲ್ಲವನ್ನು ತನ್ನ ಒಡಲಿಗೆ ಸೇರಿಸಿಕೊಂಡಿದೆ. ಇಂಗ್ಲೀಷ್‌ನ ಕೆಲ ನೈಸರ್ಗಿಕ ವಿಪತ್ತು ಕತೆಯನ್ನಾಧರಿಸಿದ ಸಿನಿಮಾಗಳಲ್ಲಿ ಕಂಡು ಬರುವಂತಹ ದೃಶ್ಯದಂತೆ ಈ ಘಟನೆ ಭಾಸವಾಗಿದೆ. ಅಂದಹಾಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಈ ಘಟನೆ ನಡೆದಿದೆ. ಈ ಭಯಾನಕ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಇಂಗ್ಲೀಷ್ ಸಿನಿಮಾಗಳ ದೃಶ್ಯವನ್ನು ನೆನಪು ಮಾಡಿದೆ.
ಥೈಲ್ಯಾಂಡ್ ರಾಜಧಾನಿ ಹಾಗೂ ಜನನಿಬಿಡ ಪ್ರದೇಶವಾದ ಬ್ಯಾಂಕಾಕ್‌ನಲ್ಲಿ ವಾಹನಗಳು ಸಂಚರಿಸುತ್ತಿದ್ದಾಗಲೇ ರಸ್ತೆ ಮಧ್ಯೆಯೇ ಭೂಮಿ ದೊಡ್ಡದಾಗಿ ಬಾಯ್ತರೆದಿದೆ. ಇದಕ್ಕಿದ್ದಂತೆ ರಸ್ತೆಯ ಒಂದು ಭಾಗ ಸ್ವಲ್ಪ ಸ್ವಲ್ಪವೇ ಕೆಳಗೆ ಕೆಳಗೆ ಕುಸಿಯುತ್ತಾ ಅಲ್ಲಿ ಕೆಲ ಕ್ಷಣಗಳಲ್ಲಿ 50 ಅಡಿಯಷ್ಟು ಆಳವಾದ ಕಂದಕ ಸೃಷ್ಟಿಯಾಗಿದೆ. ಕ್ಷಣದಲ್ಲೇ ಈ ಆಳವಾದ ಕಂದಕ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳು, ಕರೆಂಟ್ ಕಂಬವನ್ನು ತನ್ನೊಳಗೆ ಸೆಳೆದುಕೊಂಡಿದೆ. ಭೂಮಿ ಕೆಳಗೆ ಅಂದರೆ ರಸ್ತೆಯ ಕೆಳಭಾಗದಲ್ಲಿ ನಡೆಸಿದ ಭೂಗತ ನಿರ್ಮಾಣ ಕಾಮಗಾರಿಗಳೇ ಈ ಘಟನೆಗೆ ಕಾರಣ ಎಂದು ಬ್ಯಾಂಕಾಕ್‌ನ ಗವರ್ನರ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್
ಥೈಲ್ಯಾಂಡ್‌ನ ಅಂಗ್ಲ ಮಾಧ್ಯಮ ಖಾಸೋದ್ ವರದಿಯ ಪ್ರಕಾರ, ರಸ್ತೆ ಮಧ್ಯೆ ಒಮ್ಮಿಂದೊಮ್ಮೆಲೇ ನಿರ್ಮಾಣವಾದ ಈ ಕಂದಕವೂ ಅಳತೆ ಮಾಡಿ ತೆಗೆದಂತೆ 30 ಅಡಿ ಉದ್ದ ಹಾಗೂ ಅಗಲ ವಿಸ್ತ್ರೀರ್ಣವನ್ನು ಹೊಂದಿದೆ. ಕಾರು ಹಾಗೂ ಇತರ ವಾಹನಗಳು ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ಈ ಕಂದಕ ಹೇಗೆ ನಿರ್ಮಾಣವಾಯ್ತು ಎಂಬುದನ್ನು ಸೆರೆ ಹಿಡಿದಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಇದಕ್ಕಿದ್ದಂತೆ ಮೇಲಿನ ಮಣ್ಣು ಸುರಂಗ ಮತ್ತು ಭೂಗತ ನಿರ್ಮಾಣ ಸ್ಥಳಗಳಿಗೆ ಹರಿಯಲು ಪ್ರಾರಂಭಿಸಿತು. ಇದರಿಂದಾಗಿ ರಸ್ತೆ ಮೇಲ್ಮೈ ಕುಸಿಯಿತು, ವಿದ್ಯುತ್ ಕಂಬಗಳನ್ನು ಇದು ಕೆಳಗೆ ಎಳೆದುಕೊಂಡು ನೀರಿನ ಪೈಪ್‌ಗಳು ಛಿದ್ರಗೊಂಡವು. ನಂತರ ರಸ್ತೆ ಕೆಳಗೆ ಅಳವಡಿಸಲಾಗಿದ್ದ, ಇತರ ಪೈಪ್‌ಗಳು ಕೂಡ ಮುರಿದು ಸುರಂಗದೊಳಗೆ ಇನ್ನಷ್ಟು ಮಣ್ಣನ್ನು ತೊಳೆದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು ಎಂದು ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪಂಟ್ ಹೇಳಿದ್ದಾಗಿ ವರದಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ, ಆದರೆ ಈ ಕುಸಿತವು ಬ್ಯಾಂಕಾಕ್‌ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಪುನರಾವಲೋಕನ ಮಾಡುವಂತೆ ಮಾಡಿದೆ. ಇಲ್ಲಿ ಕಳೆದ ಮಾರ್ಚ್ 28 ರಂದು ನಿರ್ಮಾಣ ಹಂತದಲ್ಲಿದ್ದ ರಾಜ್ಯ ಲೆಕ್ಕಪರಿಶೋಧನಾ ಕಚೇರಿ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಕನಿಷ್ಠ 92 ಜನರು ಸಾವನ್ನಪ್ಪಿದ್ದರು. ಆ ಘಟನೆ ನಡೆದು ಕೆಲವೇ ತಿಂಗಳುಗಳ ನಂತರ ಈ ಘಟನೆ ನಡೆದಿದೆ.
ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದ್ದು, ಜನರು ಹಲವು ಕಾಮೆಂಟ್ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿಯೂ ಜನರು ಓಡುವ ಬದಲು ತಮಗೆ ಯಾವುದೋ ಪ್ರಶಸ್ತಿ ಸಿಗುತ್ತೆ ಎಂಬಂತೆ ಘಟನೆಯ ವೀಡಿಯೋ ಮಾಡ್ತಿರುವುದು ನೋಡಿ ಅಚ್ಚರಿ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಇದು ಇಂದು ಮುಂಜಾನೆ ಸಂಭವಿಸಿದ ಘಟನೆಯಾಗಿದೆ.
ಇದನ್ನೂ ಓದಿ: ಸ್ವಾಮೀಜಿಯಿಂದಲೇ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ: ಕೇಸ್ ದಾಖಲಾಗುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ನಾಪತ್ತೆ
ಇದನ್ನೂ ಓದಿ: ಎರಡು ಕೈಗಳಿಲ್ಲ, ಕಾಲ್ಗಳಿಲ್ಲ, ಆದರೂ ಡ್ರಮ್ ಬಾರಿಸಲು ಯತ್ನಿಸಿದ ಪುಟ್ಟ ಕಂದ: ಭಾವುಕಳಾದ ಅಮ್ಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ