
ನವದೆಹಲಿ: ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಶಂಕೆಯ ಮೇರೆಗೆ ಫ್ರಾನ್ಸ್‌ನಲ್ಲಿ 4 ದಿನಗಳ ಕಾಲ ತಡೆಹಿಡಿಯಲ್ಪಟ್ಟಿದ್ದ 276 ಪ್ರಯಾಣಿಕರಿದ್ದ , ಬಹುತೇಕ ಭಾರತೀಯರೇ ಇದ್ದ ವಿಮಾನ A340 ಕಡೆಗೂ ಮುಂಬೈಗೆ ಬಂದು ಲ್ಯಾಂಡ್ ಆಗಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂಜಾನೆ 4 ಗಂಟೆಗೆ ಮುಂಬೈನಲ್ಲಿ ಲ್ಯಾಂಡ್ ಆದ ಈ ವಿಮಾನವೂ ಅಲ್ಲಿನ ಸ್ಥಳಿಯ ಕಾಲಮಾನ ಮಧ್ಯಾಹ್ನ 2.30ರ ಸುಮಾರಿಗೆ ಪ್ಯಾರಿಸ್‌ನ ವ್ಯಾಟ್ರಿ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿತ್ತು. ಫ್ರಾನ್ಸ್ ಆಡಳಿತ ಈ ವಿಚಾರವನ್ನು ಖಚಿತಪಡಿಸಿದೆ ಆದರೆ ಐದು ಅಪ್ರಾಪ್ತ ವಯಸ್ಸಿನವರು ಹಾಗೂ 27 ಜನ ಆಶ್ರಯ ಕೋರಿ ಫ್ರಾನ್ಸ್‌ನಲ್ಲೇ ಉಳಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಮಾನ ಕಳೆದ ಶುಕ್ರವಾರ ವ್ಯಾಟ್ರಿಯಲ್ಲಿ ಲ್ಯಾಂಡ್ ಆಗಿತ್ತು. ಮಾನವ ಕಳ್ಳಸಾಗಣೆ ಶಂಕೆ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಈ ವಿಮಾನದಲ್ಲಿದ್ದ 303 ಪ್ರಯಾಣಿಕರಲ್ಲಿ 11 ಜನ ಅಪ್ರಾಪ್ತರಿರುವುದು ಕಂಡು ಬಂದಿತ್ತು. ಹೀಗಾಗಿ 4 ದಿನಗಳ ಕಾಲ ವಿಮಾನವನ್ನು ಫ್ರಾನ್ಸ್‌ನಲ್ಲೇ ತಡೆಯಲಾಯ್ತು. ಹಾಗೂ ಅದರಲ್ಲಿದ್ದ ಪ್ರಯಾಣಿಕರಿಗೆ ವಾಟ್ರಿ ಏರ್‌ಪೋರ್ಟ್‌ನ ಹಾಲ್‌ನಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಯ್ತು. ಬಿಸಿನೀರು ಶೌಚಾಲಯ, ಮಲಗಲು ಹಾಸಿಗೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.
ದುಬೈನಿಂದ ಬಂದ ಈ ಚಾರ್ಟರ್ ಸೇವೆಯ ವಿಮಾನವು ಇಂಧನ ತುಂಬಿಸುವುದಕ್ಕಾಗಿ ಪ್ಯಾರಿಸ್‌ನಿಂದ ಸುಮಾರು 160 ಕಿಮೀ ದೂರದಲ್ಲಿರುವ ವ್ಯಾಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಈ ವೇಳೆ ಪ್ರಯಾಣಿಕರು ಮಾನವ ಕಳ್ಳಸಾಗಣೆಯ ಸುಳಿವು ನೀಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರನ್ನೆಲ್ಲಾ ಕೆಳಗಿಳಿಸಲಾಯ್ತು. ಅಮೆರಿಕಾದ ನಿಕರಾಗುವಾಗೆ ಈ ವಿಮಾನ ಸಂಪರ್ಕ ಹೊಂದಿದೆ ಎಂಬ ವಿಚಾರವೂ ಅಧಿಕಾರಿಗಳ ಹುಬ್ಬೇರುವಂತೆ ಮಾಡಿತ್ತು.
ಏಕೆಂದರೆ ಮಧ್ಯ ಅಮೇರಿಕನ್ ರಾಷ್ಟ್ರವಾಗಿರುವ ನಿಕರಾಗುವಾದಲ್ಲಿ ವಲಸಿಗರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ಅಮೆರಿಕಾದ ಕಸ್ಟಮ್ಸ್ ಮತ್ತು ಬಾರ್ಡರ್ ಪಟ್ರೋಲ್ ನೀಡಿದ ಮಾಹಿತಿ ಪ್ರಕಾರ, ಭಾರತೀಯರು ಈ ಮೂಲಕ ಅಕ್ರಮವಾಗಿ ಅಮೆರಿಕಾವನ್ನು ಪ್ರವೇಶಿಸಲು ಯತ್ನಿಸುವ ಘಟನೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಬರೀ ಈ ವರ್ಷವೊಂದರಲ್ಲೇ 96,917 ಇಂತಹ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷಕ್ಕಿಂತ 51.61 ಶೇಕಡಾ ಹೆಚ್ಚೆನಿಸಿದೆ.
ಇಲ್ಲಿ ಕೆಲವು ವಲಸಿಗರು ಬಳಸುವ ಈ ಪ್ರಯಾಣ ವಿಧಾನವನ್ನು 'ಕತ್ತೆ ವಿಮಾನಗಳು' ಎಂದು ಕರೆಯಲಾಗುತ್ತದೆ, ಅಲ್ಲಿ ವ್ಯಕ್ತಿಗಳು ತಮ್ಮ ಅಂತಿಮ ಗುರಿಗಳನ್ನು ತಲುಪಲು ಕಠಿಣವಾದ ಪ್ರಯಾಣ ದಾಖಲೆಯ ಅಗತ್ಯಗಳಿರುವುದಿಲ್ಲ, ಅವರು ತಮ್ಮ ಗುರಿ ತಲುಪಲು ಮೂರನೇ ದೇಶದ ಮೂಲಕ ಸಾಗುತ್ತಾರೆ.
ಸುದ್ದಿ ಸಂಸ್ಥೆಯೊಂದು ನೀಡಿದ ಮಾಹಿತಿ ಪ್ರಕಾರ, ಈ ವಿಮಾನವು ಯುನೈಟೆಡ್ ಸ್ಟೇಟ್ಸ್‌ಗೆ ವ್ಯಕ್ತಿಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವ ಅಪರಾಧಿ ತಂಡದೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಹೇಳಿದ್ದು, ಈಗ ಈ ಬಗ್ಗೆ ಫ್ರಾನ್ಸ್‌ನ ಸಂಘಟಿತ ಅಪರಾಧ ವಿರೋಧಿ ಘಟಕ, ಜುನಾಲ್ಕೊದ ಅಧಿಕಾರ ವ್ಯಾಪ್ತಿಯಡಿ ನಡೆಯುತ್ತಿದೆ. ಒಂದು ವೇಳೆ ಆರೋಪ ಸಾಬೀತಾದರೆ ಫ್ರಾನ್ಸ್‌ನಲ್ಲಿ ಮಾನವ ಕಳ್ಳಸಾಗಣೆಗೆ 20 ವರ್ಷಗಳವರೆಗೆ ಶಿಕ್ಷೆ ನೀಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ