
ವಾಷಿಂಗ್ಟನ್(ಆ.29): ಕೋವಿಡ್ ಮೂಲ ಪತ್ತೆ ಹಚ್ಚಲು ಅಮೆರಿಕ ನೇಮಿಸಿದ್ದ 4 ತನಿಖಾ ಸಂಸ್ಥೆಗಳು ಚೀನಾದಿಂದಲೇ ಹಬ್ಬಿದೆ ಎಂಬ ಬಗ್ಗೆ ಖಚಿತವಾಗಿ ಹೇಳಲು ವಿಫಲವಾಗಿವೆ. ಶ್ವೇತಭವನಕ್ಕೆ ಸಮಿತಿಗಳು ವರದಿ ಸಲ್ಲಿಸಿದ್ದು, ಈ ವೈರಸ್ ಚೀನಾದ ಪ್ರಯೋಗಾಲಯದಿಂದ ಸೋರಿಕೆಯಾಗಿದೆಯೇ ಅಥವಾ ನೈಸರ್ಗಿಕವಾಗಿ ಹುಟ್ಟಿಹರಡಿದೆಯೇ ಎಂಬ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಒಂದೊಂದು ಸಮಿತಿಗಳು ಒಂದೊಂದು ವರದಿ ನೀಡಿವೆ.
ಆದರೆ, ಇದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತೀವ್ರವಾಗಿ ಕಿಡಿಕಾರಿದ್ದಾರೆ. ‘ಚೀನಾದ ಅಸಹಕಾರದಿಂದಲೇ ಹೀಗಾಗಿದ್ದು, ಜಗತ್ತಿಗೆ ಉತ್ತರ ಸಿಗುವವರೆಗೆ ತಾವು ವಿರಮಿಸುವುದಿಲ್ಲ’ ಎಂದು ಗುಡುಗಿದ್ದಾರೆ.
‘ಜಗತ್ತಿಗೆ ಉತ್ತರ ಬೇಕು. ಅದು ಸಿಗುವವರೆಗೆ ನಾನು ವಿರಮಿಸುವುದಿಲ್ಲ. ಜವಾಬ್ದಾರಿಯುತ ದೇಶಗಳು ಇಂತಹ ಜವಾಬ್ದಾರಿಗಳಿಂದ ನುಣುಚಿಕೊಳ್ಳಬಾರದು. ವೈಜ್ಞಾನಿಕ ಶಿಷ್ಟಾಚಾರ ಮತ್ತು ಗುಣಮಟ್ಟವನ್ನು ಚೀನಾ ಪಾಲಿಸಬೇಕು. ಈ ಮೂಲಕ ಮಾಹಿತಿಯನ್ನು ಸರಿಯಾಗಿ ಹಂಚಿಕೊಳ್ಳುವಂತೆ ಚೀನಾ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸುತ್ತೇವೆ. ಮಾಹಿತಿ ಬಚ್ಚಿಡುವಿಕೆ ಒಪ್ಪಲ್ಲ’ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ, ‘ಅಮೆರಿಕಕ್ಕೆ ಅದಕ್ಕೆ ಬೇಕಾದ ಉತ್ತರ ಸಿಕ್ಕಿಲ್ಲ. ಎಷ್ಟೇ ಪ್ರಯತ್ನಿಸಿದರೂ ಅದು ಸಿಗುವುದಿಲ್ಲ. ಏಕೆಂದರೆ ರಾಜಕೀಯವಾಗಿ ನಮ್ಮನ್ನು ಸಿಲುಕಿಸಲು ಅಮೆರಿಕ ಯತ್ನಿಸುತ್ತಿದೆಯೇ ಹೊರತು ಆ ದೇಶಕ್ಕೆ ವೈಜ್ಞಾನಿಕ ಉತ್ತರವೇ ಬೇಕಿಲ್ಲ. ಇಷ್ಟಕ್ಕೂ ಅಮೆರಿಕ ಈಗ ನಡೆಸಿರುವ ತನಿಖೆ ಕೂಡ ವೈಜ್ಞಾನಿಕವಾಗಿರಲಿಲ್ಲ. ನಾವು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಅಮೆರಿಕದ ಹೇಳಿಕೆ ನಮ್ಮ ಮೇಲೆ ಗೂಬೆ ಕೂರಿಸಲು ನೀಡಿದ ಹೇಳಿಕೆಯಷ್ಟೆ’ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ