
ಬೆಂಗಳೂರು(ಆ.29): ಕನ್ನಡ ನಾಡು, ನುಡಿ, ಜಲ, ನೆಲದ ಸಂರಕ್ಷಣೆಯ ಜತೆಗೆ ವಿಶ್ವದೆಲ್ಲೆಡೆ ನೆಲೆಸಿರುವ ಕನ್ನಡಿಗರ ಹಿತ ಕಾಪಾಡಲು ಮತ್ತು ಅವರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉತ್ತರ ಅಮೆರಿಕ ವಿಶ್ವ ಕನ್ನಡಿಗರ ಸಂಘ (ನಾವಿಕ) ಶನಿವಾರ ಆಯೋಜಿಸಿದ್ದ ನಾವಿಕ 6ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡವನ್ನು ಅಗ್ರಮಾನ್ಯ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕನ್ನಡಿಗರು ವಿವಿಧ ದೇಶದಲ್ಲಿ ನೆಲೆಸಿದ್ದರೂ, ನಮ್ಮೆಲ್ಲರ ಮನಸ್ಸು ಹತ್ತಿರವಾಗಿದೆ. ನಮ್ಮ ನಡೆ, ನುಡಿ ಭಾವನೆಗಳೆಲ್ಲವೂ ಒಂದಾಗಿದೆ. ಅನಿವಾಸಿ ಭಾರತೀಯರು ಕರ್ನಾಟಕದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದಾರೆ. ಅದೇ ರೀತಿ ನಾವು ಸಹ ಅನಿವಾಸಿ ಕನ್ನಡಿಗರ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ನಾವಿಕ ಕನ್ನಡ ಹಬ್ಬಕ್ಕೂ ವಿನಾಯಕ ಬಂದ.. ಅಮೆರಿಕದಲ್ಲಿಯೂ ಜೈ ಗಣೇಶ
ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತ ಮುಂತಾದ ಎಲ್ಲ ರಂಗದಲ್ಲಿಯೂ ಕನ್ನಡ ಪ್ರಮುಖ ಸ್ಥಾನದಲ್ಲಿದೆ. ಕನ್ನಡದ ಸಾಹಿತಿಗಳು ಜೀವನದ ತಿರುಳನ್ನು ಸೊಗಸಾಗಿ ಹೇಳಿದ್ದಾರೆ. ಅದೇ ರೀತಿ ಹಲವಾರು ನಾಯಕರು ಉತ್ತಮ ಆಡಳಿತ ನೀಡಿ, ದೇಶಕ್ಕೆ ಮಾದರಿಯಾಗಿದ್ದಾರೆ. ಅನಿವಾಸಿ ಕನ್ನಡಿಗರು ಎಲ್ಲರೂ ಹೆಮ್ಮೆ ಪಡುವ ರೀತಿಯಲ್ಲಿ ಬದುಕು ನಡೆಸಿದ್ದಾರೆ. ಕರ್ನಾಟಕದ ನೈಸರ್ಗಿಕ ಸಂಪತ್ತು ನಮ್ಮೆಲ್ಲರಿಗೂ ಸೇರಿದ್ದು, ಅದನ್ನು ಉಳಿಸಿ ಬೆಳೆಸಬೇಕು ಎಂದರು.
ಕನ್ನಡಿಗರು ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ, ಅವರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಅವರ ಆಶೋತ್ತರಗಳನ್ನು ಈಡೇರಿಸಲು ಸಿದ್ಧವಿದೆ. ಅನಿವಾಸಿ ಕನ್ನಡಿಗರ ಸಂಬಂಧಿಕರ ಸುರಕ್ಷತೆಯ ಹೊಣೆ ಸರ್ಕಾರದ್ದಾಗಿದೆ. ಮೂರು ದಿನಗಳ ಕಾಲ ನಡೆಯುವ ನಾವಿಕ ವಿಶ್ವಕನ್ನಡ ಸಮ್ಮೇಳನ ಅರ್ಥ ಪೂರ್ಣವಾಗಿ ನೆರವೇರಿ ತನ್ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸವಾಗಲಿ. ಕನ್ನಡಿಗರ ಭಾವನೆಗಳಿಗೆ ಅಂತರ ಎಂದೂ ಅಡ್ಡಿಯಾಗದು. ಸಮ್ಮೇಳನ ಕನ್ನಡಿಗರ ಬೆಳವಣಿಗೆಗೆ ಚಿಂತನೆ ನಡೆಸುವುದಲ್ಲದೇ, ಕನ್ನಡದ ಕಲೆ ಮತ್ತು ಸಾಹಿತ್ಯಕ್ಕೆ ಅವಕಾಶ ಒದಗಿಸುವ ವೇದಿಕೆಯಾಗಲಿ ಎಂದು ಆಶಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ