ಶಸ್ತ್ರಾಸ್ತ್ರ ಸಾಗಣೆಗೆ ಪಾಕ್‌ನಿಂದ ಮೇಡ್‌ ಇನ್‌ ಚೀನಾ ಡ್ರೋನ್‌!

By Kannadaprabha NewsFirst Published Dec 2, 2020, 9:10 AM IST
Highlights

ಶಸ್ತ್ರಾಸ್ತ್ರ ಸಾಗಣೆಗೆ ಪಾಕ್‌ನಿಂದ ಮೇಡ್‌ ಇನ್‌ ಚೀನಾ ಡ್ರೋನ್‌| ಶಸ್ತ್ರಾಸ್ತ್ರ ಸಾಗಣೆಗೆ ದೊಡ್ಡ ಡ್ರೋನ್‌ ಬಳಕೆ

ನವದೆಹಲಿ(ಡಿ.02): ಪಾಕಿಸ್ತಾನದ ಕೃಪಾಪೋಷಿತ ಭಯೋತ್ಪಾದಕ ಸಂಘಟನೆಗಳು ಹಾಗೂ ಪಾಕ್‌ ಗುಪ್ತಚರ ದಳ ‘ಐಎಸ್‌ಐ’, ಚೀನಾ ನಿರ್ಮಿತ ದೊಡ್ಡ ಡ್ರೋನ್‌ಗಳ ಬಳಕೆ ಆರಂಭಿಸಿವೆ. ಈ ಮೂಲಕ ಭಾರತದ ಪಂಜಾಬ್‌ ಹಾಗೂ ಜಮ್ಮು-ಕಾಶ್ಮೀರ ಗಡಿಯೊಳಗೆ ತಮ್ಮ ನೆಲದಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂಬ ಆತಂಕಕಾರಿ ಮಾಹಿತಿ ಲಭಿಸಿದೆ.

ಈವರೆಗೂ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ಡ್ರೋನ್‌ಗಳ ಮೂಲಕ ನಡೆಸಲಾಗುತ್ತಿತ್ತು. ಆದರೆ ಈಗ ದೊಡ್ಡ ಡ್ರೋನ್‌ಗಳ ಬಳಕೆ ಆರಂಭವಾಗಿದೆ. ಪಂಜಾಬ್‌ನಲ್ಲಿ 2019ರ ಆಗಸ್ಟ್‌ನಲ್ಲಿ ಶಸ್ತ್ರಾಸ್ತ್ರ ತುಂಬಿದ ಚೀನಾ ನಿರ್ಮಿತ ಡ್ರೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದು ಚೀನಾ ನಿರ್ಮಿತ ಡ್ರೋನ್‌ಗಳನ್ನು ಉಗ್ರರು ಬಳಸುತ್ತಿರುವುದಕ್ಕೆ ಸಾಕ್ಷಿ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.

ಕೊರೋನಾ ಸೃಷ್ಟಿಸಿದ್ದು ಭಾರತ : ಚೀನಾದಿಂದ ಅಪಪ್ರಚಾರ

ಗಡಿಯಲ್ಲಿ ಈಗ ಭದ್ರತೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ಕಾರಣ ಒಳನುಸುಳುವಿಕೆ ದುಸ್ತರವಾಗಿದೆ. ಹೀಗಾಗಿ ಡ್ರೋನ್‌ ಮೂಲಕ ಶಸ್ತ್ರಾಸ್ತ್ರ ಸಾಗಣೆ ತಂತ್ರಕ್ಕೆ ಪಾಕಿಸ್ತಾನ ಮುಂದಾಗಿದೆ.

ಇದಲ್ಲದೆ, ಗಡಿಯಲ್ಲಿ ಗುರಿ ನಿಗದಿಪಡಿಸಿಕೊಂಡು, ನಿಗದಿತ ಗುರಿಗಳ ಮೇಲೆ ಬಾಂಬ್‌ ಹಾಕಲು ಕೂಡ ಪಾಕಿಸ್ತಾನ ತಂತ್ರ ರೂಪಿಸಬಹುದು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಎಚ್ಚರದಿಂದ ಇರಬೇಕು ಎಂದು ಗುಪ್ತಚರ ಸಂಸ್ಥೆ ಸಂದೇಶ ರವಾನಿಸಿದೆ.

ಡ್ರೋನ್‌ ಬಳಕೆ ಬಗ್ಗೆ ಕಳೆದ ಏಪ್ರಿಲ್‌ ಹಾಗೂ ಮೇನಲ್ಲಿ ಐಎಸ್‌ಐ, ಲಷ್ಕರ್‌ ಎ ತೊಯ್ಬಾ ಹಾಗೂ ಜೈಷ್‌ ಎ ಮೊಹಮ್ಮದ್‌ ಉಗ್ರರು ತಕ್ಷಶಿಲೆಯಲ್ಲಿ ಸಭೆ ನಡೆಸಿದ್ದರು ಎಂದು ಕಳೆದ ತಿಂಗಳಷ್ಟೇ ವರದಿಯಾಗಿತ್ತು.

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಚೀನಾದಿಂದ ಬೃಹತ್‌ ಡ್ಯಾಮ್‌!

ರೈತ ಪ್ರತಿಭಟನೆಗೆ ಖಲಿಸ್ತಾನಿಗಳು?

ಈ ನಡುವೆ, ಪಂಜಾಬಿ ರೈತ ಪ್ರತಿಭಟನೆಗಳನ್ನು ಬಳಸಿಕೊಂಡು ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು, ಪಂಜಾಬ್‌ ಗಡಿಯಲ್ಲಿ ಉಗ್ರ ಚಟುವಟಿಕೆಗೆ ಮರುಜೀವ ನೀಡಲು ಪಾಕಿಸ್ತಾನದ ಖಲಿಸ್ತಾನಿ ಸಂಘಟನೆಗಳು ಸಂಚು ರೂಪಿಸಿವೆ ಎಂದೂ ಗುಪ್ತಚರ ದಳ ಎಚ್ಚರಿಸಿದೆ.

click me!