
ನವದೆಹಲಿ (ಏ.18): ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಂಕಷ್ಟದಲ್ಲಿದ್ದಾರೆ. ಪ್ರಧಾನ ಮಂತ್ರಿ ರಿಷಿ ಸುನಕ್ ಅವರನ್ನು ಸಂಸದೀಯ ಮಾನದಂಡಗಳ ಆಯುಕ್ತರು ತನಿಖೆ ಮಾಡಲಿದ್ದಾರೆ. ರಿಷಿ ಸುನಕ್ ಅವರ ಪತ್ನಿ ಹಾಗೂ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮಕ್ಕಳ ಆರೈಕೆ ಕಂಪನಿಯಲ್ಲಿ ಹೂಡಿಕೆದಾರರಾಗಿರುವುದು ಇದಕ್ಕೆ ಕಾರಣ. ಹೊಸ ಆರೈಕೆ ಯೋಜನೆಯನ್ನು ಘೋಷಿಸುವಾಗ, ರಿಷಿ ಪ್ರಕಟಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕಮಿಷನರ್ ಡೇನಿಯಲ್ ಗ್ರೀನ್‌ಬರ್ಗ್ ಕಳೆದ ವಾರ ಗುರುವಾರ ಪ್ರಧಾನಿ ವಿರುದ್ಧ ತನಿಖೆಯನ್ನು ಆರಂಭ ಮಾಡಿದ್ದಾರೆ. ಈ ಮಾಹಿತಿಯನ್ನು ಆಯುಕ್ತರ ವೆಬ್‌ಸೈಟ್ ಮೂಲಕವೂ ಹಂಚಿಕೊಳ್ಳಲಾಗಿದೆ. ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವಿಚಾರಣೆಯನ್ನು ಸಂಸದರಿಗೆ ಸಂಬಂಧಿಸಿದ ನೀತಿ ಸಂಹಿತೆಯ ಪ್ಯಾರಾ 6 ಗೆ ಸಂಬಂಧಿಸಿದಂತೆ ಮಾತ್ರ ನಡೆಸಲಾಗುತ್ತದೆ. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಮಕ್ಕಳ ಆರೈಕೆ ಅಥವಾ ಶಿಶುಪಾಲನಾ ಸಂಸ್ಥೆಯಲ್ಲಿ ಹೂಡಿಕೆದಾರರಾಗಿದ್ದಾರೆ. ಸರ್ಕಾರದಿಂದ ಈ ಕಂಪನಿ ಲಾಭಗಳನ್ನೂ ಪಡೆಯುತ್ತದೆ. ಈ ಪರಿಸ್ಥಿತಿಯಲ್ಲಿ, ಶಿಶುಪಾಲನಾ ಕಂಪನಿಯಲ್ಲಿ ಅವರ ಪತ್ನಿಯ ಪಾಲು ಸರಿಯಾಗಿ ಘೋಷಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಿಷಿ ಎಲ್ಲಿಯಾದರೂ ನಿಯಮ ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.
ಆಯುಕ್ತರ ವೆಬ್‌ಸೈಟ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಮಿಷನರ್ ಡೇನಿಯಲ್ ಗ್ರೀನ್‌ಬರ್ಗ್ ಏಪ್ರಿಲ್ 13 ರಂದು ಪ್ರಧಾನ ಮಂತ್ರಿಯ ವಿರುದ್ಧ ತನಿಖೆಯನ್ನು ಆರಂಭ ಮಾಡಿದ್ದಾರೆ. ಇದಕ್ಕೂ ಮುನ್ನ ಬ್ರಿಟನ್‌ನ ಸಂಸತ್ತಿನಲ್ಲೂ ವಿರೋಧ ಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ರಿಜಿಸ್ಟರ್ ಆಫ್ ಇಂಟರೆಸ್ಟ್ ಸಮಯದಲ್ಲಿ, ರಿಷಿ ಸುನಕ್ ತನ್ನ ಪತ್ನಿಯ ಆಸ್ತಿಯನ್ನು ಬಿಡುಗಡೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.
ತನಿಖೆ ಖಚಿತಪಡಿಸಿದ ಸುನಕ್ ವಕ್ತಾರ: ಪ್ರಧಾನಿ ರಿಷಿ ಸುನಕ್ ವಿರುದ್ಧದ ತನಿಖೆಯನ್ನು ಅವರ ವಕ್ತಾರ ಕೂಡ ಖಚಿತಪಡಿಸಿದ್ದಾರೆ. 'ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ತನಿಖೆ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದೂ ಬಯಸಿದ್ದೇವೆ ಎಂದು ಹೇಳಿದ್ದಾರೆ. ಸಂಸದೀಯ ಮಾನದಂಡಗಳ ಸಮಿತಿಯ ಆಯುಕ್ತರೊಂದಿಗೆ ತನಿಖೆಗೆ ಸಹಕರಿಸಲು ಸಂತಸವಾಗಿದೆ ಎಂದು ಹೇಳಿದ್ದಾರೆ.
ಬೈಡೆನ್ ಅಲ್ಲ.. ರಿಷಿ ಅಲ್ಲ.. ಮೋದಿಯೇ ನಂಬರ್ 1..! ಘಟಾನುಘಟಿಗಳನ್ನು ಹಿಂದೆ ತಳ್ಳಿ ವಿಶ್ವನಾಯಕ ಆಗಿದ್ದು ಹೇಗೆ?
ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ಭಾರತೀಯ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಪುತ್ರಿ. ಅವರು ಸುಮಾರು $600 ಮಿಲಿಯನ್ ಮೌಲ್ಯದ ಕಂಪನಿಯಲ್ಲಿ 0.9% ಪಾಲನ್ನು ಹೊಂದಿದ್ದಾರೆ. ಆದರೆ ವಿಚಾರಣೆಯಲ್ಲಿ ಸುನಕ್ ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಮಿತಿಯು ಅವರನ್ನು ಸದಸ್ಯತ್ವದಿಂದ ಅಮಾನತುಗೊಳಿಸುವ ಅಥವಾ ಹೊರಹಾಕುವ ಸಾಧ್ಯತೆಯಿದೆ.
Infosys Share Price: ಯುಕೆ ಪ್ರಧಾನಿ ಪತ್ನಿ ಅಕ್ಷತಾಗೆ ಒಂದೇ ದಿನದಲ್ಲಿ 500 ಕೋಟಿಗೂ ಹೆಚ್ಚು ನಷ್ಟ..!
ಮುಂದಿನ ವರ್ಷ ನಡೆಯಲಿರುವ ಬಹುನಿರೀಕ್ಷಿತ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ, "ಪ್ರತಿ ಹಂತದಲ್ಲೂ" ಸಮಗ್ರತೆಯೊಂದಿಗೆ ಸರ್ಕಾರವನ್ನು ಮುನ್ನಡೆಸುವುದಾಗಿ ಭರವಸೆ ನೀಡಿ ಅಕ್ಟೋಬರ್‌ನಲ್ಲಿ ಅಧಿಕಾರಕ್ಕೆ ಬಂದ ಸುನಕ್‌ಗೆ ತನಿಖೆಯು ಮುಜುಗರವನ್ನುಂಟುಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ