ವಾಷಿಂಗ್ಟನ್: ಆಂತರಿಕ ಯುದ್ಧಪೀಡಿತ ಸೂಡಾನ್‌ನಲ್ಲಿ ಸಿಕ್ಕಿಬಿದ್ದ ತನ್ನ ನಾಗರಿಕರ ಸುರಕ್ಷಿತ ತೆರವಿಗೆ ಇತ್ತ ಭಾರತ ‘ಆಪರೇಷನ್ ಕಾವೇರಿ’ ಮೂಲಕ ಸಾಹಸಮಯ ಕಾರ್ಯಾಚರಣೆ ನಡೆಸುತ್ತಿದ್ದರೆ, ಅತ್ತ ವಿಶ್ವದ ಅತ್ಯಂತ ಬಲಶಾಲಿ ಸೇನೆ ಹೊಂದಿರುವ ಅಮೆರಿಕ, ತನ್ನ 16000 ನಾಗರಿಕರನ್ನು ರಕ್ಷಿಸಲಾಗದೆ ಕೈಚೆಲ್ಲಿ ಕುಳಿತಿದೆ. ಅಮೆರಿಕ ಸರ್ಕಾರದ ಈ ಅಸಹಾಯಕತೆ ಮತ್ತು ನಿರ್ಲಕ್ಷ್ಯ ಇದೀಗ ಸ್ವತಃ ಅಮೆರಿಕನ್ನರಿಂದ ಟೀಕೆಗೆ ಗುರಿಯಾಗಿದೆ.
ಈ ವಿಷಯದಲ್ಲಿ ತೀವ್ರ ಟೀಕೆಗೆ ಗುರಿಯಾದ ಬಳಿಕ ಅಮೆರಿಕ ಸರ್ಕಾರ ರಾಜಧಾನಿ ಖಾರ್ಟೋಮ್‌ನಿಂದ (Khartoum) ಸಣ್ಣಮಟ್ಟಿನ ತೆರವು ಕಾರ್ಯಾಚರಣೆ ಆರಂಭಿಸಿದೆಯಾದರೂ, ಇದಕ್ಕೆಂದು ಒಬ್ಬರೇ ಒಬ್ಬ ಅಧಿಕಾರಿಯನ್ನೂ ಸೂಡಾನ್‌ಗೆ (sudan)ನಿಯೋಜಿಸಿಲ್ಲ. ಬದಲಾಗಿ ಸ್ಥಳೀಯರ ನೆರವು ಪಡೆದು, ಸ್ಥಳೀಯ ಬಸ್‌ಗಳ ಮೂಲಕ 200ರಿಂದ 300 ಜನರನ್ನು ಪೋರ್ಟ್ ಸೂಡಾನ್ (Port Sudan) ಬಂದರಿಗೆ ತಲುಪಿಸುವ ಕೆಲಸ ಆರಂಭಿಸಿದೆ. ಅಲ್ಲಿಂದ ಮಿತ್ರ ದೇಶಗಳ ವಿಮಾನಗಳ ಮೂಲಕ ತನ್ನ ದೇಶದ ಜನರನ್ನು ಸೌದಿ ಅರೇಬಿಯಾ (Saudi Arabia) ಅಥವಾ ಇತರೆ ದೇಶಗಳಿಗೆ ಕರೆದೊಯ್ಯುವ ಕೆಲಸ ಆರಂಭಿಸಿದೆ.
ಸುಡಾನ್ ನಲ್ಲಿ ಸಿಲುಕಿದ್ದ 362 ಕನ್ನಡಿಗರು ತವರಿಗೆ, ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಹೆಲ್ತ್ ಕಮಿಷನರ್
ಅಮೆರಿಕದ (America) ಈ ಧೋರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬಹುವಾಗಿ ಟೀಕಿಸಿದ್ದಾರೆ. ಮತ್ತೊಂದೆಡೆ ತಮ್ಮ ತಮ್ಮ ದೇಶಗಳ ನಾಗರಿಕರ ರಕ್ಷಣೆಗೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕೈಗೊಂಡಿರುವ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
16000 ಜನ ಅತಂತ್ರ:
ಅಮೆರಿಕ ಸರ್ಕಾರದ ವರದಿಗಳ ಅನ್ವಯ ಹಾಲಿ ಸೂಡಾನ್‌ನಲ್ಲಿ 16000ಕ್ಕೂ ಹೆಚ್ಚು ಅಮೆರಿಕ ನಾಗರಿಕರು (ಸೂಡಾನ್-ಅಮೆರಿಕ ದ್ವಿಪೌರತ್ವ ಹೊಂದಿರುವವರೂ ಸೇರಿ) ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಬಹಳಷ್ಟು ಜನ ತವರಿಗೆ ಮರಳುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ ರಾಜಧಾನಿ ಖಾರ್ಟೋಮ್‌ನಲ್ಲಿದ್ದ ತನ್ನ 70 ರಾಯಭಾರ ಕಚೇರಿ ಸಿಬ್ಬಂದಿ ತೆರವಿಗೆ ಸೇನೆಯ ಸೀಲ್ ಕಮಾಂಡೋಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದ್ದ ಅಧ್ಯಕ್ಷ ಜೋ ಬೈಡೆನ್ (Jeo Biden) ಸರ್ಕಾರ, ತನ್ನ ನಾಗರಿಕರ ವಿಷಯದಲ್ಲಿ ಅಸಹಾಯಕತೆ ಪ್ರದರ್ಶಿಸಿದೆ. ಜೊತೆಗೆ ಖಾಸಗಿ ನಾಗರಿಕರಿಗೆ ಇಂತಹ ಯಾವುದೇ ಸ್ಥಳಾಂತರ ಸೌಲಭ್ಯ ಇರುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ತಿಳಿಸಿದೆ.
ತೆರವು ಕಷ್ಟಕರ:
ಸೂಡಾನ್‌ನಲ್ಲಿ ಭದ್ರತಾ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಹಾಗೂ ವಿಮಾನ ನಿಲ್ದಾಣಗಳು ಕೂಡ ಮುಚ್ಚಲ್ಪಟ್ಟಿವೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯ. ಅನೇಕ ಮಾರ್ಗಗಳು ಅಪಾಯಕಾರಿಯಾಗಿದ್ದು ಸದ್ಯ ಸ್ಥಳಾಂತರಕ್ಕೆ ಪರಿಸ್ಥಿತಿ ಸೂಕ್ತವಾಗಿಲ್ಲ ಎಂಬ ಕಾರಣಗಳನ್ನು ಅಮೆರಿಕ ನೀಡಿದೆ. ಜೊತೆಗೆ ಅಮೆರಿಕವು ತನ್ನ ನಾಗರಿಕರಿಗೆ, ದೇಶ ತೊರೆಯಲು ಯಾವ ಮಾರ್ಗಗಳಿವೆ, ಅಲ್ಲಿಗೆ ಹೇಗೆ ತೆರಳಬಹುದು ಎಂಬ ಮಾಹಿತಿಯನ್ನು ದೂರವಾಣಿ ಮೂಲಕ ನೀಡುವುದಕ್ಕೆ ಮಾತ್ರವೇ ತನ್ನ ನೆರವನ್ನು ಸೀಮಿತಗೊಳಿಸಿದೆ.
ಸುಡಾನ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣಾ ಕಾರ್ಯಾಚರಣೆ, ಐಎಎಫ್‌ನ ಏಕೈಕ C-17 ಮಹಿಳಾ ಪೈಲಟ್ ಭಾಗಿ
ಸೀಮಿತ ನೆರವು:
ಸೂಡಾನ್ ಸಂಘರ್ಷ ಆರಂಭವಾಗಿ ಮೂರು ವಾರವಾಗಿದ್ದು ಬಹುತೇಕ ದೇಶಗಳು ತಮ್ಮ ನಾಗರಿಕರ ತೆರವು ಕಾರ್ಯಾಚರಣೆ ಮುಕ್ತಾಯ ಹಂತ ತಲುಪಿಸಿವೆ. ಆದರೆ 3 ವಾರದಿಂದ ಸುಮ್ಮನಿದ್ದ ಅಮೆರಿಕದ ಶನಿವಾರ ಮೊದಲ ಹಂತದಲ್ಲಿ 200 ಜನರನ್ನು ಖಾರ್ಟೋಮ್‌ನಿಂದ ಪೋರ್ಟ್ ಸೂಡಾನ್‌ಗೆ ಬಸ್ ಮೂಲಕ ಕರೆತಂದಿದೆ. ಆದರೆ ತೆರವು ಕಾರ್ಯಾಚರಣೆಯನ್ನು ಕೇವಲ ರಾಜಧಾನಿ ಖಾರ್ಟೋಮ್‌ಗೆ ಅಮೆರಿಕ ಸೀಮಿತಗೊಳಿಸಿದೆ. ಜೊತೆಗೆ ಅಲ್ಲಿಗೂ ಕಾರ್ಯಾಚರಣೆ ಉಸ್ತುವಾರಿ ನಿರ್ವಹಣೆಗೆ ಯಾವುದೇ ಅಧಿಕಾರಿ ನೇಮಿಸಿಲ್ಲ. ಬದಲಾಗಿ ಸ್ಥಳೀಯರ ನೆರವು ಪಡೆದು ಬಸ್‌ಗಳಿಗೆ ಸಶಸ್ತ್ರ ಡ್ರೋನ್ ಮೂಲಕ ಭದ್ರತೆ ಒದಗಿಸಿ 500 ದಿಂದ 800 ಕಿ.ಮೀ ದೂರದ ಬಂದರಿನತ್ತ ಕರೆತರುತ್ತಿದೆ. ಆದರೆ ಬಹಳಷ್ಟು ಜನರಿಗೆ ಈ ನೆರವು ತಲುಪಿಲ್ಲ. ಹೀಗಾಗಿ ಅವರೆಲ್ಲಾ ಭೀಕರ ಸಂಘರ್ಷ ನಡೆಯುತ್ತಿರುವ ಪ್ರದೇಶಗಳನ್ನು ಹಾದು ಜೀವಭಯದಲ್ಲೇ ಸಿಕ್ಕ ಸಿಕ್ಕ ವಾಹನ ಏರಿ ನೂರಾರು ಕೀ.ಮೀ ದೂರದ ಬಂದರುಗಳತ್ತ ಪ್ರಯಾಣ ಕೈಗೊಂಡಿದ್ದಾರೆ. ಬಂದರಿಗೆ ಬಂದ ಮೇಲೂ ತಮ್ಮ ತಮ್ಮ ದೇಶ ಅಥವಾ ಇತರೆ ದೇಶಗಳಿಗೆ ತೆರಳಲು ಮಿತ್ರ ದೇಶಗಳ ಸೇನಾ ವಿಮಾನ ಅಥವಾ ಹಡಗುಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ