ಗೂಗಲ್ ಸರ್ಚ್‌‌‌ನಲ್ಲಿ ಕಾಣತ್ತೆ ನಿಮ್ಮ ವಾಟ್ಸ್ಆ್ಯಪ್ ನಂಬರ್!

By Suvarna News  |  First Published Jun 12, 2020, 4:12 PM IST

ವಾಟ್ಸ್ಆ್ಯಪ್ ಈಗಾಗಲೇ ಡೇಟಾ ಪ್ರೈವೆಸಿಗೆ ಸಾಕಷ್ಟು ಒತ್ತು ಕೊಟ್ಟಿರುವುದಲ್ಲದೆ, ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ಸೇವೆಯನ್ನು ತನ್ನೆಲ್ಲ ಗ್ರಾಹಕರಿಗೆ ನೀಡಿದೆ. ಇಷ್ಟಾದರೂ ಈಗ ಹೊಸ ಫೀಚರ್ ನಿಂದ ಸ್ವಲ್ಪ ಎಡವಟ್ಟು ಆಗಿದೆ. ಈಗಾಗಲೇ ಸುಮಾರು 3 ಲಕ್ಷಕ್ಕೂ ಅಧಿಕ ಕ್ಲಿಕ್ ಟು ಚಾಟ್ ಬಳಕೆದಾರರ ಮೊಬೈಲ್ ನಂಬರ್ ಗಳು ಗೂಗಲ್ ಸರ್ಚ್ ನಲ್ಲಿ ಕಾಣಲಾರಂಭಿಸಿವೆ. ಒಂದು ವೇಳೆ ಬಳಕೆದಾರರ ಈ ವಾಟ್ಸ್ಆ್ಯಪ್ ನಂಬರ್ ಬ್ಯಾಂಕ್ ಖಾತೆಗಳು ಸೇರಿದಂತೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವ್ಯವಸ್ಥೆಗಳಿಗೆ ಲಿಂಕ್ ಆಗಿದ್ದರೆ ಹ್ಯಾಕರ್ ಗಳ ಪಾಲಾಗಲಿದೆ ಎಂಬ ಆತಂಕಗಳೂ ಎದುರಾಗಿವೆ. ಹಾಗಾದರೆ, ಏನಿದು ಎಂಬುದನ್ನು ನೋಡೋಣ…


ಮಾಹಿತಿ ಪ್ರತಿಯೊಬ್ಬರ ಹಕ್ಕು. ಅದಕ್ಕಾಗಿಯೇ ಕೇಂದ್ರ ಸರ್ಕಾರ ಸಾಕಷ್ಟು ಕಾನೂನುಗಳನ್ನು ತಂದಿದೆ. ಆದರೆ, ಕೆಲವೊಮ್ಮ ನಮಗೆ ಅರಿವಿಲ್ಲದಂತೆ ನಾವೇ ನಮ್ಮ ಮಾಹಿತಿಯನ್ನು ಸಾರ್ವಜನಿಕವಾಗಿ ಕೊಟ್ಟುಬಿಟ್ಟಿರುತ್ತೇವೆ. ಈಗ ಆಗಿರುವುದೂ ಅದೇ, ಡಿಜಿಟಲ್ ಅಪ್ಡೇಡ್, ಹೊಸ ಫೀಚರ್ ಎಂಬ ಹೆಸರಿನಲ್ಲಿ ನಾವು ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಲೇ ಇದ್ದೇವೆ. ಅದರ ಸಾಧಕ-ಬಾಧಕವನ್ನು ನೋಡಿಕೊಳ್ಳದೆ ಕಣ್ಣುಮುಚ್ಚಿಕೊಂಡು ಅಲ್ಲಿನ ಆಪ್ಷನ್ ಗಳಿಗೆ ಓಕೆ ಮಾಡಿಬಿಟ್ಟಿರುತ್ತೇವೆ. ಈಗ ಅದರ ಪರಿಣಾಮವೇ ವಾಟ್ಸ್ಆ್ಯಪ್ ನಂಬರ್ ಗೂಗಲ್ ಸರ್ಚ್ ನಲ್ಲಿ ಕಾಣಲಾರಂಭಿಸಿವೆ. 

ಹೊಸ ಹೊಸ ಫೀಚರ್ ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಬಂದಿರುವ ವಾಟ್ಸ್ಆ್ಯಪ್ ಈಚೆಗೆ “ಕ್ಲಿಕ್ ಟು ಚಾಟ್” ಅನ್ನು ಅನಾವರಣಗೊಳಿಸಿತ್ತು. ಇದು ಅಷ್ಟೇ ವೇಗವಾಗಿ ಬಳಕೆದಾರರ ಸೆಳೆದಿತ್ತು. ಆದರೆ, ಈಗ ಈ ಫೀಚರ್ ಅನ್ನು ಬಳಸಿದವರ ಮೊಬೈಲ್ ಸಂಖ್ಯೆಗಳು ಗೂಗಲ್ ಸರ್ಚ್‌ನಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ ಎನ್ನುವ ಆತಂಕಕಾರಿ ಬೆಳವಣಿಗೆ ವರದಿಯಾಗಿದೆ. ಆದರೆ, ಈಗ ಎಚ್ಚೆತ್ತುಕೊಂಡಿರುವ ವಾಟ್ಸ್ಆ್ಯಪ್ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿಕೊಂಡಿದೆ.



ಹೌದು. ಲಿಂಕ್ ಟು ಚಾಟ್ ಫೀಚರ್ ಅನ್ನು ಸಕ್ರಿಯಗೊಳಿಸಿಕೊಂಡಾಗ ಲಿಂಕ್ ಒಂದು ಓಪನ್ ಆಗಲಿದೆ. ಇದರ ಮೇಲೆ ಕ್ಲಿಕ್ ಮಾಡಿದರೆ ಬಳಕೆದಾರರು ತಮಗೆ ಬೇಕಾದವರ ಜೊತೆ ಚಾಟ್ ಮಾಡಬಹುದಾಗಿದೆ. ಇಲ್ಲಿ ಮೆಟಾಡೇಟಾ ಮೂಲಕ ಗೂಗಲ್ ಫೋನ್ ನಂಬರ್ ಅನ್ನು ಸಂಗ್ರಹ ಮಾಡುತ್ತದೆ. ಬಳಿಕ ನಿಮ್ಮ ನಂಬರ್ ಗೂಗಲ್ ಸರ್ಚ್ ಇಂಡೆಕ್ಸ್ ನಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಈಗ ಆಗಿರುವುದೂ ಅದೇ ಆಗಿದೆ. 

ಇದನ್ನು ಓದಿ: ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!

ಗೂಗಲ್ ನಲ್ಲಿ 3 ಲಕ್ಷ ವಾಟ್ಸ್ಆ್ಯಪ್ ನಂಬರ್!
ಗೂಗಲ್ ಸರ್ಚ್ ಎಂಜಿನ್‌ನಲ್ಲಿ ನೀವು ಹುಡುಕಿದರೆ ಈಗ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿಯ ವಾಟ್ಸ್ಆ್ಯಪ್ ನಂಬರ್ ಕಾಣುತ್ತಿದೆ. ಇದು ಸಂಪೂರ್ಣ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಯಾರು ಬೇಕಾದರೂ ನಂಬರ್‌ಗಳನ್ನು ಪಡೆಯಬಹುದಾಗಿದೆ. ಆದರೆ, ಇಲ್ಲಿ ಹೆಸರುಗಳು ಸಂಪೂರ್ಣವಾಗಿ ಕಾಣುವುದಿಲ್ಲ. ಒಮ್ಮೆ ನಂಬರ್ ಅನ್ನು ಸೇವ್ ಮಾಡಿಕೊಂಡರೆ ಪ್ರೊಫೈಲ್ ಫೋಟೋವನ್ನು ವೀಕ್ಷಿಸಬಹುದಾಗಿದೆ. ಇದರಿಂದ ಹ್ಯಾಕರ್ ಗಳಿಗೆ ಅನುಕೂಲವಾಗಲಿದ್ದು, ಅವರಿಂದಲೇ ಸಂದೇಶಗಳು ಬರಬಹುದು, ಮೊಬೈಲ್ ನಂಬರ್‌ಗಳನ್ನು ಮಾರಾಟ ಮಾಡಬಹುದು, ಇಲ್ಲವೇ ಬೇರೆ ಚಟುವಟಿಕೆಗೆ ಬಳಸಿಕೊಳ್ಳಬಹುದು ಎಂಬ ಆತಂಕವನ್ನು ತಜ್ಞರು ಹೊರಹಾಕಿದ್ದಾರೆ. ಆದರೆ, ಯಾರು URL ಬಳಸಿ ಪಬ್ಲಿಕ್ ಚಾಟ್ ಆಯ್ಕೆ ಮೂಲಕ ಚಾಟ್ ಮಾಡಿದ್ದಾರೋ ಅಂಥವರ ಮೊಬೈಲ್ ನಂಬರ್ ಮಾತ್ರ ಗೂಗಲ್ ಸರ್ಚ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಹೀಗೆ ಗೂಗಲ್ ಸರ್ಚ್‌ನಲ್ಲಿ ಮೊಬೈಲ್ ಸಂಖ್ಯೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ WaBetaInfo ಫೆಬ್ರವರಿಯಲ್ಲೇ ವರದಿ ಮಾಡಿತ್ತು. 

ಇದನ್ನು ಓದಿ: ಸೋಷಿಯಲ್ ಡಿಸ್ಟೆನ್ಸ್‌ಗೆ ಗೂಗಲ್ ಆ್ಯಪ್!

ಏನಿದರ ವೈಶಿಷ್ಟ್ಯತೆ?
ಸಾಮಾನ್ಯವಾಗಿ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡಬೇಕೆಂದರೆ ಯಾರಾದರೂ ಒಬ್ಬರು ಇನ್ನೊಬ್ಬ ವ್ಯಕ್ತಿಯ ನಂಬರ್ ಅನ್ನು ಸೇವ್ ಮಾಡಿಕೊಳ್ಳಲೇ ಬೇಕಿರುತ್ತದೆ. ಆ ಮೂಲಕವೇ ಚಾಟ್ ಮಾಡಲು ಅವಕಾಶ ಸಿಗುತ್ತದೆ. ಆದರೆ, ಇಲ್ಲಿ ಆ ಸಮಸ್ಯೆ ಇರುವುದಿಲ್ಲ. ಯಾರೂ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕಿಲ್ಲ. ಇಲ್ಲಿ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಒಂದು URL ಲಿಂಕ್ ಕೊಡುತ್ತದೆ. ಇದರ ಮೂಲಕ ಯಾರು ಬೇಕಿದ್ದರೂ ಲಿಂಕ್ ಬಳಸಿ ಚಾಟ್ ಮಾಡಬಹುದಾಗಿದೆ. ಮೆಸೆಂಜರ್ ಆ್ಯಪ್ ಮೂಲಕ ಯಾವುದೇ ವ್ಯಕ್ತಿಯ ಜೊತೆಗೆ ಅವರ ಹೆಸರನ್ನು ಸೇವ್ ಮಾಡದೆಯೇ ಚಾಟಿಂಗ್ ಇಲ್ಲವೇ ಕರೆ  ಮಾಡಬಹುದಾಗಿದೆ. ಆದರೆ, ನೀವು ಕ್ಲಿಕ್ ಟು ಚಾಟ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಸೃಷ್ಟಿಯಾಗುವ ಲಿಂಕ್ ಅನ್ನು ಬಳಸುವುದರಿಂದ ಸರ್ಚ್ ಬಾರ್‌ನಲ್ಲಿ ಬರುವ URL ಜೊತೆ ನಂಬರ್ ಸಹ ಕಾಣಿಸುತ್ತದೆ. ಆದರೆ, ನಂತರದಲ್ಲಿ ಇದನ್ನು ಡಿಲೀಟ್ ಮಾಡುವ ಆಯ್ಕೆ ಬಳಕೆದಾರರಿಗೆ ಇರುವುದಿಲ್ಲ.

Tap to resize

Latest Videos



ಉದ್ಯಮಿಗಳಿಗೆ ಸಹಕಾರಿ
ಈ ನೂತನ ಫೀಚರ್ ಹೆಚ್ಚಾಗಿ ಸಣ್ಣ ಉದ್ಯಮಿಗಳಿಗೆ ಸಹಕಾರಿಯಾಗುತ್ತದೆ. ಅಂದರೆ, ವ್ಯಾಪಾರಿಗಳು ತಮ್ಮ ಗ್ರಾಹಕರೊಂದಿಗೆ ವ್ಯವಹರಿಸಲು ಇದು ಸಹಕಾರಿ. ಇಲ್ಲಿ ಅವರ ನಂಬರ್ ಅನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕಿಲ್ಲ. ಹೀಗಾಗಿ ಇಂಥವರು ತಮ್ಮ ಉದ್ಯಮದ ಅನುಕೂಲಕ್ಕಾಗಿ ಈ ನೂತನ ಫೀಚರ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. 

ಇದನ್ನು ಓದಿ: Whatsapp ಬಳಕೆದಾರರೇ ಹುಷಾರ್, ನಿಮಗಿದು 'ಹ್ಯಾಕ್’ಟಿಕ್!

ಸೈಬರ್ ಕಳವಿನ ಭಯ
ಇಲ್ಲಿ ಬಹುಮುಖ್ಯವಾಗಿ ಕಾಡುವ ಇನ್ನೊಂದು ಸಮಸ್ಯೆ ಎಂದರೆ ಬಹುತೇಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಿಟ್ ಕಾಯಿನ್ ವ್ಯಾಲೆಟ್, ಆಧಾರ್, ಬ್ಯಾಂಕ್ ಖಾತೆ, ಯುಪಿಐ, ಕ್ರೆಡಿಟ್ ಕಾರ್ಡ್ ಹೀಗೆ ಹಲವು ಕಡೆಗಳಲ್ಲಿ ಲಿಂಕ್ ಮಾಡಿಕೊಂಡಿರುವುದು. ಅಂದರೆ, ಇಂತಹ ಸಂದರ್ಭದಲ್ಲಿ ಹ್ಯಾಕರ್ ಗಳಿಗೆ ಸುಲಭವಾಗಿ ನಿಮ್ಮ ಮೊಬೈಲ್ ನಂಬರ್ ಸಿಕ್ಕಿಬಿಟ್ಟರೆ ಅವರು ಸಿಮ್ ಕಾರ್ಡ್ ಸ್ವ್ಯಾಪಿಂಗ್ ಇಲ್ಲವೇ ಸಿಮ್ ಕ್ಲೋನಿಂಗ್ ಮುಖಾಂತರ ನಿಮ್ಮ ಮಾಹಿತಿಗಳ ಜೊತೆ ಹಣವನ್ನು ಕದಿಯುವ ಸಾಧ್ಯತೆ ದಟ್ಟವಾಗಿದೆ ಎಂಬ ಆತಂಕ ಈಗ ಹಲವರಿಂದ ಕೇಳಿಬಂದಿದೆ. ಇದಕ್ಕಾಗಿಯೇ ಈ ನೂತನ ಫೀಚರ್ ಉಪಯೋಗಿಸುವಾಗ ಸ್ವಲ್ಪ ಎಚ್ಚರ ವಹಿಸಿ ಎಂಬ ಹಿತನುಡಿ ಕೇಳಿಬರುತ್ತಿದೆ. ಸದ್ಯಕ್ಕೆ ಈ ಸಮಸ್ಯೆಯನ್ನು ಪರಿಹರಿಸುವುದಾಗಿ ವಾಟ್ಸ್ಆ್ಯಪ್ ಹೇಳಿಕೊಂಡಿದೆ. ಮತ್ತೆ ಇನ್ನು ಮುಂದೆ ಹೀಗೆ ಮೊಬೈಲ್ ಸಂಖ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

click me!