Whatsapp ಬಳಕೆದಾರರೇ ಹುಷಾರ್, ನಿಮಗಿದು 'ಹ್ಯಾಕ್’ಟಿಕ್!
ನಿಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ ನೀವು ಅತ್ಯಂತ ಖಾಸಗಿ ವಿಚಾರಕ್ಕೋ ಇಲ್ಲವೇ ಕಚೇರಿಯ ಉದ್ದೇಶಕ್ಕೋ ಬಳಸುತ್ತಿರುತ್ತೀರಿ. ಅದನ್ನು ಯಾರೂ ನೋಡಬಾರದು (ಮನೆಯವರೂ ಸಹ) ಎಂಬ ನಿಟ್ಟಿನಲ್ಲಿ ಪಾಸ್ವರ್ಡ್ ಪ್ರೊಟೆಕ್ಷನ್ ಬೇರೆ ಹಾಕಿರುತ್ತೀರಿ. ಆದರೆ, ಒಂದೇ ಒಂದು ಮೆಸೇಜ್ ನಿಮ್ಮ ಇಡೀ ಖಾಸಗಿತನವನ್ನು ಹೊತ್ತೊಯ್ಯುತ್ತದೆ. ಜೊತೆಗೆ ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ನಿಮ್ಮ ಹಿಡಿತದಲ್ಲಿರದೆ ಬಳಸಲೂ ಬರದಂತೆ ಹ್ಯಾಕರ್ಸ್ ಮಾಡಿಬಿಟ್ಟಿರುತ್ತಾರೆ. ವಾಟ್ಸ್ಆ್ಯಪ್ ಹೆಸರಿನಲ್ಲೇ ಬರುವ ಆ ಸಂದೇಶ ಯಾವುದು, ನೀವೇನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ…
ವಾಟ್ಸ್ಆ್ಯಪ್ ಬಳಕೆದಾರರಿಗೆ ಈಗ ಬಹುದೊಡ್ಡ ಆತಂಕ ಎದುರಾಗಿದೆ. ನೀವು ಸ್ವಲ್ಪ ಯಾಮಾರಿದರೂ ನಿಮ್ಮ ಮೊಬೈಲ್‌ನಲ್ಲಿರುವ ಅಷ್ಟೂ ಡೀಟೇಲ್ ಹ್ಯಾಕ್ ಆಗಿಬಿಡುತ್ತವೆ. ಆದರೆ, ನೆನಪಿಡಿ.. ಇಲ್ಲಿ ನೀವು ಎಚ್ಚರವಾಗಿದ್ದರೆ ಏನೂ ಸಮಸ್ಯೆ ಇಲ್ಲ. ಬದಲಾಗಿ ಹ್ಯಾಕರ್ಸ್ ಕೇಳಿದ ಮಾಹಿತಿ ಕೊಟ್ಟರೆ ಮಾತ್ರ ಕೋಡಂಗಿಗಳಾಗುವುದು ಅನ್ನೋ ವಿಷಯವನ್ನು ಈಗ ವಾಟ್ಸ್ಆ್ಯಪ್ ಹೇಳಿಕೊಂಡಿದೆ.
ಹೌದು. ವಾಟ್ಸ್ಆ್ಯಪ್ನಿಂದ ಯಾವುದೇ ರೀತಿಯಾಗಿ ಬಳಕೆದಾರರನ್ನು ಸಂಪರ್ಕಿಸುವ ಪದ್ಧತಿ ಇದುವರೆಗೆ ಇಲ್ಲ. ಆದರೆ, ಇಲ್ಲಿ ಹ್ಯಾಕರ್ ಗಳು ಏನು ಮಾಡುತ್ತಾರೆಂದರೆ ತಾವು ವಾಟ್ಸ್ಆ್ಯಪ್ನ ಪ್ರತಿನಿಧಿಗಳು ಎಂದು ಹೇಳಿಕೊಂಡು ನಿಮ್ಮನ್ನು ಯಾಮಾರಿಸುವ ತಂತ್ರ ಮಾಡುತ್ತಾರೆ. ಅಂದರೆ, ಈಗ ಬಹುತೇಕ ಫೋನ್‌ಕಾಲ್ ಗಳ ಮೂಲಕ ನಿಮ್ಮ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳ ನಂಬರ್‌ಗಳನ್ನು ಪಡೆದು, ಒಟಿಪಿ ಪಡೆದು ಬಳಿಕ ಹಣವನ್ನು ಎಗರಿಸುವ ಜಾಲವಿದೆಯೆಲ್ಲ ಅದೇ ರೀತಿ ಇಲ್ಲಿ ಬೇರೆ ಮಾರ್ಗವನ್ನು ಅನುಸರಿಸುತ್ತಾರೆ. ಇಲ್ಲಿ ಹಣ ಹೋಗುವುದಿಲ್ಲ, ಬದಲಾಗಿ ನಿಮ್ಮ ಸಂಖ್ಯೆಯ ವಾಟ್ಸ್ಆ್ಯಪ್ ಅಕೌಂಟ್ ನಿಮ್ಮದಾಗಿರುವುದಿಲ್ಲ!
ಇದನ್ನು ಓದಿ: ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!...
ನಾವು ನಿಮ್ಮ ಟೆಕ್ನಿಕಲ್ ಟೀಂ
ಇಲ್ಲಿ ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ಗೆ ಒಂದು ಮೇಸೇಜ್ ಬರಲಿದೆ. ಅದರ ಡಿಪಿಯಲ್ಲಿ ವಾಟ್ಸ್ಆ್ಯಪ್ನ ಲೋಗೋ ಇರಲಿದ್ದು, ತಾವು ವಾಟ್ಸ್ಆ್ಯಪ್ ಟೆಕ್ನಿಕಲ್ ಟೀಂನಿಂದ ಮೆಸೇಜ್ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ಬಳಿಕ ನಿಮ್ಮಿಂದ ಇದಕ್ಕೆ ಪ್ರತಿಕ್ರಿಯೆ ಬಂದ ಮೇಲೆ ನಿಮ್ಮ ಐಡೆಂಟಿಟಿ ವೆರಿಫಿಕೇಶನ್ ಗೋಸ್ಕರ 6 ಡಿಜಿಟ್‌ನ ವೆರಿಫಿಕೇಶನ್ ಕೋಡ್ ಅನ್ನು ಎಸ್ಎಂಎಸ್ ಮೂಲಕ ಕಳುಹಿಸುತ್ತಾರೆ. ಇಲ್ಲೇ ನೀವು ಜಾಗೃತರಾಗಬೇಕು. ನೀವು ಆ ಸಂಖ್ಯೆಯನ್ನೇನಾದರೂ ನಿಮಗೆ ಬಂದಿರುವ ಟೆಕ್ನಿಕಲ್ ಟೀಂ ಎಂದು ಹೇಳಿಕೊಳ್ಳುವ ಖಾತೆಗೆ ಕೊಟ್ಟರೆ ನಿಮ್ಮ ಅಕೌಂಟ್ ಹ್ಯಾಕ್ ಆಗುವ ಮೂಲಕ ಎಲ್ಲ ಡೇಟಾ ಸೇರಿದಂತೆ ಇಡೀ ಖಾತೆಯೂ ಅವರ ಪಾಲಾಗುತ್ತದೆ. ಬಳಿಕ ಅವರು ನಿಮ್ಮ ಖಾತೆಯನ್ನು ಹ್ಯಾಂಡಲ್ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಇದರಿಂದ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಮೆಸೇಜ್ ಮಾಡಲ್ಲವೆಂದ ವಾಟ್ಸ್ಆ್ಯಪ್
ಈ ಹೊಸ ಹ್ಯಾಕಿಂಗ್ ಬಗ್ಗೆ ದೂರುಗಳು ಬರತೊಡಗಿದಂತೆ ಎಚ್ಚೆತ್ತ ವಾಟ್ಸ್ಆ್ಯಪ್, ತಮ್ಮಲ್ಲಿ ಈ ತರಹದ ಯಾವುದೇ ಟೆಕ್ನಿಕಲ್ ಟೀಂನಿಂದ ಮೆಸೇಜ್ ಬರುವುದಿಲ್ಲ. ಅದೂ ಸಹ ಬಳಕೆದಾರರಿಗೆ ವೈಯುಕ್ತಿಕವಾಗಿ ಯಾವುದೇ ರೀತಿಯ ಮೆಸೇಜ್ ಮಾಡುವುದಿಲ್ಲ. ಒಂದು ಮಾಹಿತಿಯನ್ನು ಬಳಕೆದಾರರಿಗೆ ಕೊಡಬೇಕೆಂದಿದ್ದರೆ ಅಧಿಕೃತ ಸೋಷಿಯಲ್ ಮೀಡಿಯಾ ಪುಟಗಳಲ್ಲಿ, ಇಲ್ಲವೇ ಬ್ಲಾಗ್ ಗಳ ಮೂಲಕ ಕೊಡಲಾಗುತ್ತದೆ ಎಂದು WABeataInfo ಹೇಳಿಕೊಂಡಿದೆ. ಒಂದು ವೇಳೆ ಕಂಪನಿ ಹೆಸರಲ್ಲಿ ಯಾವುದೇ ಮಾಹಿತಿ ಇದ್ದರೂ ಸಹ ಆ ಪುಟದ ಹೆಸರಿನ ಬಲಬದಿಯಲ್ಲಿ “ಗ್ರೀನ್ ಟಿಕ್” ಮಾರ್ಕ್ ಇರಲಿದೆ. ಇದನ್ನು ಮುಖ್ಯವಾಗಿ ಗಮನಿಸಿಕೊಳ್ಳಬೇಕು. ವೆರಿಫಿಕೇಶನ್ ಕೋಡ್ ಕೇಳುವುದು, ಕೇವಲ ಅಕೌಂಟ್ ಗಳನ್ನು ಬಳಸಲಾಗಿರುತ್ತದೆ ಎಂದೂ ಹೇಳಿಕೊಂಡಿದೆ.
ಇದನ್ನು ಓದಿ: ಫೇಸ್‌ಬುಕ್‌ನಲ್ಲಿನ್ನು ಫೋಟೋ ಹೈಡ್ ಮಾಡೋ ಆಪ್ಷನ್, ಮಹಿಳೆಯರಿಗಿದು ವರ!
ಹ್ಯಾಕ್ ಆದ್ರೆ ನೀವೇನು ಮಾಡಬೇಕು?
ಹೀಗೆ ಅಪ್ಪಿತಪ್ಪಿ ಮಾಹತಿ ಕೊಟ್ಟು ನಿಮ್ಮ ಖಾತೆ ಏನಾದರೂ ಹ್ಯಾಕ್ ಆಗಿ ಕೈತಪ್ಪಿದೆ ಎಂದಾದರೆ, ನೀವು ಮಾಡಬೇಕಿರುವುದು ಇಷ್ಟೇ. ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪುನಃ ಸೆಟ್ಟಿಂಗ್ಸ್ ಮೂಲಕ ವೇರಿಫೈ ಮಾಡಬೇಕು. ಹೀಗೆ ವೇರಿಫಿಕೇಶನ್ ಪ್ರಕ್ರಿಯೆಯನ್ನು ನೀವು ಪೂರ್ಣಗೊಳಿಸಿದ ತಕ್ಷಣವೇ ಹ್ಯಾಕರ್ ಗೆ ನಿಮ್ಮ ಅಕೌಂಟ್ ಮೇಲೆ ಹಿಡಿತ ತಪ್ಪಿ ಪುನಃ ನೀವು ಬಳಸಲು ಅನುಕೂಲವಾಗುತ್ತದೆ.
ಇದನ್ನು ಓದಿ: ವಾಟ್ಸ್ಆ್ಯಪ್ ವೆಬ್, ಗೂಗಲ್ ಆ್ಯಪ್‌ನಲ್ಲೀಗ ಡಾರ್ಕ್ ಮೋಡ್ ಆಪ್ಷನ್
ಟ್ವಿಟ್ಟರ್ ನಲ್ಲಿ ಮಾಹಿತಿ
ಡ್ಯಾರಿಯೋ ನವಾರೋ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಹೀಗೆ ವಾಟ್ಸ್ಆ್ಯಪ್ನ ಟೆಕ್ನಿಕಲ್ ಟೀಂನಿಂದ ಮೆಸೇಜ್ ಬರಲಿದೆಯೇ ಎಂದು ಸ್ಕ್ರೀನ್ ಶಾಟ್ ಹಾಕಿ ಮಾಹಿತಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ WABeataInfo, ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಲ್ಲದೆ, ವಾಟ್ಸ್ಆ್ಯಪ್ ಇಂತಹ ಯಾವುದೇ ಸಂದೇಶವನ್ನು ವೈಯುಕ್ತಿಕವಾಗಿ ಕಳುಹಿಸುವುದಿಲ್ಲ ಎಂದು ಹೇಳಿದೆ.