
ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಮತ್ತು ‘ವಿಕಸಿತ್ ಭಾರತ್’ ಕನಸಿಗೆ ಮತ್ತೊಂದು ಬೃಹತ್ ಯಶಸ್ಸು ಸಿಕ್ಕಿದೆ. ಭಾರತದ ಪ್ರಮುಖ ಉಕ್ಕು ಉತ್ಪಾದನಾ ಸಂಸ್ಥೆಯಾದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ’ (AM/NS India) ಜಾಗತಿಕ ಉಕ್ಕು ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಸಮುದ್ರದಾಳದ ಹಾಗೂ ಕಡಲಾಚೆಯ ಬೃಹತ್ ಇಂಜಿನಿಯರಿಂಗ್ ಯೋಜನೆಗಳಲ್ಲಿ ಬಳಸಲಾಗುವ, ಅತ್ಯಂತ ಹೆಚ್ಚಿನ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು (EQ70 ಗ್ರೇಡ್) ವಾಣಿಜ್ಯಿಕವಾಗಿ ಉತ್ಪಾದಿಸಿದ ವಿಶ್ವದ ಮೊದಲ ಸ್ಟೀಲ್ ಕಂಪನಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಕಂಪನಿಯ ಈ ಅಭೂತಪೂರ್ವ ಮತ್ತು ಸವಾಲಿನ ತಾಂತ್ರಿಕ ಸಾಧನೆಯನ್ನು ಪರಿಗಣಿಸಿ, ಜಾಗತಿಕ ಮಟ್ಟದ ಪ್ರತಿಷ್ಠಿತ ಹಡಗು ಮತ್ತು ಸಾಗರ ಇಂಜಿನಿಯರಿಂಗ್ ನಿಯಂತ್ರಣ ಸಂಸ್ಥೆಯಾದ ‘ಅಮೆರಿಕನ್ ಬ್ಯೂರೋ ಆಫ್ ಶಿಪ್ಪಿಂಗ್’ (ABS) ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಿದೆ. ಈ ಮಾನ್ಯತೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ನಿರ್ಮಿತ ಪೈಪ್‌ಗಳ ಅತ್ಯುನ್ನತ ಗುಣಮಟ್ಟ, ಬಾಳಿಕೆ ಮತ್ತು ಸುರಕ್ಷತೆಯನ್ನು ಅಧಿಕೃತವಾಗಿ ದೃಢಪಡಿಸಿದೆ.
ಈ ಐತಿಹಾಸಿಕ ಆವಿಷ್ಕಾರಕ್ಕೂ ಮುನ್ನ ಭಾರತೀಯ ಕಂಪನಿಗಳು ತೈಲ ಮತ್ತು ಅನಿಲ ಉದ್ಯಮಗಳು, ಆಫ್‌ಶೋರ್ ಗಾಳಿ ಯಂತ್ರಗಳು (Offshore Windmills) ಹಾಗೂ ಆಳ ಸಮುದ್ರದ ಪೈಪ್‌ಲೈನ್‌ಗಳ ನಿರ್ಮಾಣಕ್ಕೆ ಬೇಕಾಗುವ ಇಂತಹ ಅಲ್ಟ್ರಾ-ಹೈ ಸ್ಟ್ರೆಂತ್ ಪೈಪ್‌ಗಳಿಗಾಗಿ ಸಂಪೂರ್ಣವಾಗಿ ಯೂರೋಪ್ ದೇಶಗಳ ಮೇಲೆ ಅವಲಂಬಿತವಾಗಬೇಕಿತ್ತು.
ದೇಶೀಯ ಉತ್ಪಾದನೆ: ಇದೀಗ AM/NS ಇಂಡಿಯಾ ಇವುಗಳನ್ನು ಸಂಪೂರ್ಣವಾಗಿ ದೇಶೀಯವಾಗಿಯೇ ಉತ್ಪಾದಿಸುವ ಮೂಲಕ ವಿದೇಶಿ ಆಮದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.
ಕಂಪನಿಗಳಿಗೆ ಲಾಭ: ಇದರಿಂದಾಗಿ ಭಾರತದ ಆಫ್‌ಶೋರ್ ಮತ್ತು ಇಂಜಿನಿಯರಿಂಗ್ ವಲಯದ ಕಂಪನಿಗಳಿಗೆ ಭಾರಿ ಪ್ರಮಾಣದ ಆಮದು ವೆಚ್ಚ ಹಾಗೂ ಸಮಯ ಉಳಿತಾಯವಾಗಲಿದೆ.
ಮೊದಲ ಗ್ರಾಹಕ: ಈಗಾಗಲೇ ಭಾರತದ ಮುಂಚೂಣಿ ತೈಲ ಮತ್ತು ಅನಿಲ ಉತ್ಪಾದನಾ ಕಂಪನಿಯೊಂದಕ್ಕೆ ಈ ಬಲಿಷ್ಠ ಪೈಪ್‌ಗಳನ್ನು ಭಾರಿ ಪ್ರಮಾಣದಲ್ಲಿ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಗುಜರಾತ್‌ನ ಹಜೀರಾದಲ್ಲಿರುವ ಕಂಪನಿಯ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ‘ಸಬ್‌ಮರ್ಜ್ಡ್ ಆರ್ಕ್ ವೆಲ್ಡಿಂಗ್’ (SAW) ಎಂಬ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಈ ಪೈಪ್‌ಗಳನ್ನು ತಯಾರಿಸಲಾಗಿದೆ.
ತಾಂತ್ರಿಕ ಸಾಮರ್ಥ್ಯ: ಇವು ವಿಶ್ವದರ್ಜೆಯ ಅಮೆರಿಕನ್ ಪೆಟ್ರೋಲಿಯಂ ಇನ್‌ಸ್ಟಿಟ್ಯೂಟ್‌ನ (API) 5L X100Q ಗ್ರೇಡ್‌ಗೆ ಸಮನಾದ EQ70 ಗ್ರೇಡ್ ಹೊಂದಿದ್ದು, ಸುಮಾರು 690 MPa ನಷ್ಟು ಅತ್ಯುನ್ನತ ಮೌಲ್ಯದ ಭಾರಿ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ.
ಸದಾ ಪ್ರಕ್ಷುಬ್ಧವಾಗಿರುವ, ಸವೆತ ಮತ್ತು ತುಕ್ಕು ಹಿಡಿಯುವಿಕೆಗೆ ಕಾರಣವಾಗುವ ಕಠಿಣ ಸಮುದ್ರದ ವಾತಾವರಣದಲ್ಲೂ ಇವು ದಶಕಗಳ ಕಾಲ ಭದ್ರವಾಗಿ ನಿಲ್ಲಬಲ್ಲವು. ಇವುಗಳ ಪ್ರಮುಖ ವಿಶೇಷತೆಯೆಂದರೆ, ಇವು ಅತ್ಯಂತ ಬಲಿಷ್ಠವಾಗಿದ್ದರೂ ತಾಂತ್ರಿಕ ವಿನ್ಯಾಸದಿಂದಾಗಿ ತೆಳುವಾಗಿ ಮತ್ತು ಹಗುರವಾಗಿರುತ್ತವೆ. ಹೀಗಾಗಿ ಸಮುದ್ರದ ಭೀಕರ ಅಲೆಗಳು ಹಾಗೂ ಆಳದ ಒತ್ತಡವನ್ನು ಸುಲಭವಾಗಿ ನಿಭಾಯಿಸುತ್ತವೆ. ಇಂತಹ ಸಂಕೀರ್ಣ ಪೈಪ್‌ಗಳ ಉತ್ಪಾದನೆ ಭಾರತೀಯ ಇಂಜಿನಿಯರ್‌ಗಳಿಗೆ ದೊಡ್ಡ ಸವಾಲಾಗಿತ್ತು, ಆದರೆ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್‌ನ ಬಲಿಷ್ಠ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಭಾಗ ಇದನ್ನು ಸಾಧಿಸಿ ತೋರಿಸಿದೆ.
ಎಬಿಎಸ್ (ABS) ಪ್ರಮಾಣಪತ್ರದ ಬೆಂಬಲದೊಂದಿಗೆ, AM/NS ಇಂಡಿಯಾ ಈಗ ಜಗತ್ತಿನ ಯಾವುದೇ ದೇಶದ ಸಾಗರ ಮತ್ತು ತೈಲ ಪರಿಶೋಧನಾ ಯೋಜನೆಗಳಿಗೆ ಈ ಪೈಪ್‌ಗಳನ್ನು ರಫ್ತು ಮಾಡುವ ಅರ್ಹತೆಯನ್ನು ಪಡೆದುಕೊಂಡಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಮೌಲ್ಯವನ್ನು ಹೆಚ್ಚಿಸಲಿದೆ.
ಜಗತ್ತಿನ ದೈತ್ಯ ಸ್ಟೀಲ್ ಉತ್ಪಾದನಾ ಸಂಸ್ಥೆಗಳಾದ ‘ಆರ್ಸೆಲರ್ ಮಿತ್ತಲ್’ ಮತ್ತು ‘ನಿಪ್ಪಾನ್ ಸ್ಟೀಲ್’ ನಡುವಿನ ಜಂಟಿ ಉದ್ಯಮವಾಗಿರುವ ಈ ಕಂಪನಿಯು, ಪ್ರಸ್ತುತ ವರ್ಷಕ್ಕೆ 90 ಲಕ್ಷ ಟನ್ ಕಚ್ಚಾ ಉಕ್ಕನ್ನು ಉತ್ಪಾದಿಸುವ ಬೃಹತ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಆಂಧ್ರಪ್ರದೇಶದಲ್ಲಿ 82 ಲಕ್ಷ ಟನ್ ಸಾಮರ್ಥ್ಯದ ಹೊಸ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಪರಿಸರಸ್ನೇಹಿ ಉತ್ಪಾದನೆಗೆ ಒತ್ತು ನೀಡಿರುವ ಈ ಸಂಸ್ಥೆಯು, ಭಾರತದ ಕೇಂದ್ರ ಉಕ್ಕು ಸಚಿವಾಲಯದಿಂದ ‘ಗ್ರೀನ್ ಸ್ಟೀಲ್ ಪ್ರಮಾಣಪತ್ರ’ ಪಡೆದ ದೇಶದ ಏಕೈಕ ಇಂಟಿಗ್ರೇಟೆಡ್ ಸ್ಟೀಲ್ ಕಂಪನಿ ಎಂಬ ಹೆಮ್ಮಿಗೂ ಪಾತ್ರವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.