
ಟೆಕ್ ಡೆಸ್ಕ್: ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೂಗಲ್ ಸರ್ಚ್ (Google Search) ಸಂಪೂರ್ಣವಾಗಿ ಬದಲಾಗುತ್ತಿದೆ. ಗೂಗಲ್ I/O 2026 ಸಮ್ಮೇಳನದಲ್ಲಿ ಕಂಪನಿ ಈ ಐತಿಹಾಸಿಕ ಘೋಷಣೆ ಮಾಡಿದೆ. ಇಷ್ಟು ದಿನ ನಾವು ಕೀವರ್ಡ್ ಟೈಪ್ ಮಾಡಿ, ನೀಲಿ ಲಿಂಕ್‌ಗಳ ಪಟ್ಟಿಯಿಂದ ನಮಗೆ ಬೇಕಾದ ವೆಬ್‌ಸೈಟ್ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಆದರೆ, ಇನ್ಮುಂದೆ ಈ ಅನುಭವ ಪೂರ್ತಿಯಾಗಿ ಬದಲಾಗಲಿದೆ.
ಗೂಗಲ್ ಪರಿಚಯಿಸಿರುವ ಹೊಸ AI ಆಧಾರಿತ ಅಪ್‌ಡೇಟ್‌ಗಳು, ಸರ್ಚ್ ಇಂಜಿನ್ ಅನ್ನು ಚಾಟ್ ಮಾಡುವಂತಹ ಒಂದು ಬುದ್ಧಿವಂತ ಸಹಾಯಕನನ್ನಾಗಿ (Intelligent Assistant) ಬದಲಾಯಿಸುವ ಗುರಿ ಹೊಂದಿದೆ. ಇನ್ಮುಂದೆ ಬಳಕೆದಾರರಿಗೆ ಕೇವಲ ಸರ್ಚ್ ರಿಸಲ್ಟ್ ಮಾತ್ರವಲ್ಲ, ನೇರವಾಗಿ ಪ್ರಶ್ನೆಗಳಿಗೆ ಉತ್ತರಗಳು ಮತ್ತು ಕೆಲಸಗಳನ್ನು ಮಾಡಿಮುಗಿಸುವ ವ್ಯವಸ್ಥೆಯೂ ಸಿಗಲಿದೆ. 'ಕೇವಲ ಮಾಹಿತಿ ಹುಡುಕುವ ಸಾಧನ' ಅಲ್ಲ, ಬದಲಾಗಿ 'ಕೆಲಸ ಮಾಡಿ ಮುಗಿಸುವ ಅಸಿಸ್ಟಂಟ್'ನಾಗಿ ಸರ್ಚ್ ಬದಲಾಗಲಿದೆ ಎಂದು ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಹೇಳಿದೆ.
ಗೂಗಲ್ ತಂದಿರುವ ಪ್ರಮುಖ ಬದಲಾವಣೆಗಳಲ್ಲಿ ಒಂದು 'AI ಮೋಡ್' ಇದು ಜನರಿಗೆ ಸಹಜ ಭಾಷೆಯಲ್ಲಿ ಪ್ರಶ್ನೆ ಕೇಳಲು ಅವಕಾಶ ನೀಡುತ್ತದೆ. ಈಗಾಗಲೇ AI ಮೋಡ್‌ಗೆ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರಿದ್ದಾರೆ ಎಂದು ಗೂಗಲ್ ಹೇಳಿಕೊಂಡಿದೆ. ಹೊಸ ಆವೃತ್ತಿಯಲ್ಲಿ ಜೆಮಿನಿ 3.5 ಫ್ಲ್ಯಾಶ್ ಮಾಡೆಲ್ ಅನ್ನು ಡಿಫಾಲ್ಟ್ ಆಗಿ ಬಳಸಲಾಗುತ್ತದೆ.
ಇನ್ಮುಂದೆ ಬಳಕೆದಾರರು ಟೆಕ್ಸ್ಟ್ ಮಾತ್ರವಲ್ಲದೆ, ಫೋಟೋ, ವಿಡಿಯೋ, ಫೈಲ್‌ಗಳು ಮತ್ತು ಕ್ರೋಮ್ ಟ್ಯಾಬ್‌ಗಳನ್ನು ಬಳಸಿಯೂ ಸರ್ಚ್ ಮಾಡಬಹುದು. ಅಷ್ಟೇ ಅಲ್ಲ, ಒಂದರ ನಂತರ ಒಂದು ಪ್ರಶ್ನೆ ಕೇಳಿದಾಗ, ಹಿಂದಿನ ಉತ್ತರಗಳ ಹಿನ್ನೆಲೆಯನ್ನು ಸರ್ಚ್ ತನ್ನ ಮೆಮೊರಿಯಲ್ಲಿ ಇಟ್ಟುಕೊಳ್ಳುತ್ತದೆ. ಮತ್ತೊಂದು ಪ್ರಮುಖ ಘೋಷಣೆ 'ಸರ್ಚ್ ಏಜೆಂಟ್ಸ್'. ಇವು ಬಳಕೆದಾರರ ಪರವಾಗಿ ಇಂಟರ್‌ನೆಟ್ ಅನ್ನು ನಿರಂತರವಾಗಿ ಗಮನಿಸುತ್ತಿರುವ AI ಏಜೆಂಟ್‌ಗಳಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಮನೆ ಹುಡುಕುತ್ತಿದ್ದರೆ, ತನ್ನ ಅವಶ್ಯಕತೆಗಳನ್ನು ತಿಳಿಸಿದರೆ ಸಾಕು, ಲಭ್ಯವಿರುವ ಮನೆಗಳನ್ನು ಈ ಏಜೆಂಟ್ಸ್ ನಿರಂತರವಾಗಿ ಹುಡುಕಿ ನೋಟಿಫಿಕೇಶನ್ ಕಳುಹಿಸುತ್ತವೆ.
ಇದರ ಜೊತೆಗೆ, ಗೂಗಲ್ 'ಏಜೆಂಟ್‌ಗೆ ಬುಕಿಂಗ್' ಎಂಬ ವ್ಯವಸ್ಥೆಯನ್ನೂ ಪರಿಚಯಿಸುತ್ತಿದೆ. ಇದರ ಮೂಲಕ ಹೋಮ್ ಸರ್ವೀಸ್, ಬ್ಯೂಟಿ, ಪೆಟ್ ಕೇರ್‌ನಂತಹ ಸೇವೆಗಳನ್ನು ನೇರವಾಗಿ ಬುಕ್ ಮಾಡಬಹುದು. ಕೆಲವು ಸಂದರ್ಭಗಳಲ್ಲಿ, AI ತಾನಾಗಿಯೇ ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಅಷ್ಟೇ ಅಲ್ಲ, ಸರ್ಚ್ ಇನ್ನು ಮುಂದೆ ಸಣ್ಣಪುಟ್ಟ ಅಪ್ಲಿಕೇಶನ್‌ಗಳು ಮತ್ತು ಡ್ಯಾಶ್‌ಬೋರ್ಡ್‌ಗಳನ್ನು ಸಹ ರಚಿಸಲಿದೆ. ಫಿಟ್‌ನೆಸ್ ಟ್ರ್ಯಾಕಿಂಗ್, ಟ್ರಾವೆಲ್ ಪ್ಲಾನ್, ಮದುವೆ ತಯಾರಿ ಮುಂತಾದ ಕೆಲಸಗಳಿಗೆ ಬೇಕಾದ ಇಂಟರಾಕ್ಟೀವ್ ಟೂಲ್‌ಗಳನ್ನು ಸರ್ಚ್ ತಾನೇ ನಿರ್ಮಿಸುತ್ತದೆ. ಗ್ರಾಫ್‌ಗಳು, ಟೇಬಲ್‌ಗಳು ಮತ್ತು ಸಿಮ್ಯುಲೇಶನ್‌ಗಳನ್ನು ಕೂಡ AI ಮೂಲಕ ಲೈವ್ ಆಗಿ ರಚಿಸಲಾಗುತ್ತದೆ.
ಕೊನೆಯದಾಗಿ, 'ಪರ್ಸನಲ್ ಇಂಟೆಲಿಜೆನ್ಸ್' ಎಂಬ ಫೀಚರ್, ಬಳಕೆದಾರರ ಜಿಮೇಲ್, ಗೂಗಲ್ ಫೋಟೋಸ್‌ನಂತಹ ಸೇವೆಗಳೊಂದಿಗೆ ಸಂಪರ್ಕ ಸಾಧಿಸಿ, ಹೆಚ್ಚು ವೈಯಕ್ತಿಕವಾದ ಉತ್ತರಗಳನ್ನು ನೀಡಲಿದೆ. ಈ ಹೊಸ ಬದಲಾವಣೆಗಳ ಮೂಲಕ, ಗೂಗಲ್ ಸರ್ಚ್ ಒಂದು ಸಾಮಾನ್ಯ ಸರ್ಚ್ ಇಂಜಿನ್‌ನಿಂದ ಸಂಪೂರ್ಣ AI ಸಹಾಯಕನಾಗಿ ಬದಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.